ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ

KannadaprabhaNewsNetwork | Updated : Feb 11 2025, 04:39 AM IST

ಸಾರಾಂಶ

ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಎಂದೇ ಕರೆಯಲಾಗುವ ಧರ್ಮ ಸಂಸತ್‌ ಸಭೆಯು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಂಡಿದೆ. ಮನುಸ್ಮೃತಿ ಕುರಿತ ಟೀಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ನವದೆಹಲಿ: ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಎಂದೇ ಕರೆಯಲಾಗುವ ಧರ್ಮ ಸಂಸತ್‌ ಸಭೆಯು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಂಡಿದೆ. ಮನುಸ್ಮೃತಿ ಕುರಿತ ಟೀಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶನಾನಂದ ಸರಸ್ವತಿ ಅವರ ಶಿಬಿರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮನುಸ್ಮೃತಿ ಕುರಿತು ರಾಹುಲ್‌ ಗಾಂಧಿ ಅವರು ತೀವ್ರ ಟೀಕೆ ಮಾಡಿದ್ದಾರೆ. ಇದರಿಂದ ಸನಾತನ ಧರ್ಮದ ಬೆಂಬಲಿಗರಿಗೆ ನೋವಾಗಿದೆ ಎಂದು ಹೇಳಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆ ಸಂಬಂಧ ತಿಂಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ತಪ್ಪಿದಲ್ಲಿ ಈ ಬಹಿಷ್ಕಾರದ ನಿರ್ಣಯವು ಜಾರಿಗೆ ಬರಲಿದೆ ಎಂದು ಧರ್ಮ ಸಂಸತ್‌ ಹೇಳಿದೆ.

ಹಿಂದೂ ಧರ್ಮದ ಕುರಿತು ರಾಹುಲ್‌ ಗಾಂಧಿ ಅವರು ನೀಡಿರುವ ಹೇಳಿಕೆಗಳನ್ನು ಖಂಡಿಸಿರುವ ಧರ್ಮ ಸಂಸತ್‌, ಇದು ಸನಾತನ ಧರ್ಮಕ್ಕೆ ಅಗೌರವ ತೋರುವ ನಡೆ. ಅವರ ಹೇಳಿಕೆಗಳು ಸನಾತನ ಧರ್ಮದ ನಂಬಿಕೆಗಳು ಹಾಗೂ ಹಿಂಬಾಲಕರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟಿದೆ.

 ಏನಿದು ಧರ್ಮ ಸಂಸತ್‌? ಧರ್ಮ ಸಂಸತ್‌ ಒಂದು ಧಾರ್ಮಿಕ ಸಂಸತ್‌ ಆಗಿದೆ. ಹಿಂದೂ ಸಂತರು ಮತ್ತು ನಾಯಕರು ಸೇರಿ ಸನಾತನ ಧರ್ಮದ ನಂಬಿಕೆಗಳ ವಿಚಾರಕ್ಕೆ ಸಂಬಂಧಿಸಿ ಮಹತ್ವದ ವಿಷಯಗಳ ಕುರಿತು ಒಂದೆಡೆ ಸಮಾವೇಶ ಸೇರಿ ಚರ್ಚೆ ನಡೆಸುತ್ತಾರೆ. ಹಿಂದೂಗಳ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಹಿಂದೂಗಳಿಗೆ ಈ ಸಂಸತ್‌ ಮಾರ್ಗದರ್ಶನ ನೀಡುತ್ತದೆ.

Share this article