‘ಮೇಲ್ವರ್ಗದವರು ಪರೀಕ್ಷೆ ನಡೆಸುತ್ತಿರುವುದಕ್ಕೇ ದಲಿತರು ಅಂಥ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ’ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ
ನವದೆಹಲಿ: ಸಂಪತ್ತಿನ ಹಂಚಿಕೆ, ಮುಸ್ಲಿಂ ಮೀಸಲು ಸೇರಿದಂತೆ ಹಲವು ವಿವಾದಿತ ವಿಷಯ ಪ್ರಸ್ತಾಪಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೊಸ ಅಸ್ತ್ರ ನೀಡಿದ್ದ ರಾಹುಲ್ ಗಾಂಧಿ, ‘ಮೇಲ್ವರ್ಗದವರು ಪರೀಕ್ಷೆ ನಡೆಸುತ್ತಿರುವುದಕ್ಕೇ ದಲಿತರು ಅಂಥ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ’ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.‘ಅರ್ಹತೆ, ಮೀಸಲು ಮತ್ತು ತಾರತಮ್ಯ ರಹಿತ ನೀತಿ ಎಂದರೆ ಏನು?’ ಎಂಬುದರ ಕುರಿತು ಕೆಲ ವ್ಯಕ್ತಿಗಳೊಂದಿಗೆ ರಾಹುಲ್ ಸಂವಾದ ನಡೆಸುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಅದರಲ್ಲಿ ಮೇಲ್ಕಂಡ ವಿಷಯವಿದೆ. ಅಲ್ಲದೆ ತಮ್ಮ ವಾದ ಸಮರ್ಥಿಸಿಕೊಳ್ಳಲು ಲ್ಯಾಟಿನ್ ಅಮೆರಿಕದ ಪರೀಕ್ಷೆಯೊಂದರ ಉದಾಹರಣೆಯನ್ನು ರಾಹುಲ್ ನೀಡಿದ್ದಾರೆ.
ಸಂವಾದದಲ್ಲೇನಿದೆ?:
ಸಂವಾದ ವೇಳೆ ರಾಹುಲ್, ‘ಮೇಲ್ವರ್ಗದವರು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಪರೀಕ್ಷೆಯಲ್ಲಿ ದಲಿತರು ಫೇಲ್ ಆಗುತ್ತಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ ಎಂದಾದಲ್ಲಿ ಒಂದು ಕೆಲಸ ಮಾಡೋಣ, ದಲಿತರೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಿ ಮತ್ತು ಮೇಲ್ವರ್ಗದವರಿಗೆ ಪರೀಕ್ಷೆ ಬರೆಯಲು ಹೇಳೋಣ’ ಎಂದಿದ್ದಾರೆ.
ತಮ್ಮ ವಾದಕ್ಕೆ ಪೂರಕವಾಗಿ ರಾಹುಲ್ ಲ್ಯಾಟಿನ್ ಅಮೆರಿಕದ ಘಟನೆಯೊಂದನ್ನು ತಮ್ಮ ಜೊತೆಗಿದ್ದವರ ಜೊತೆ ಹಂಚಿಕೊಂಡಿದ್ಧಾರೆ. ‘ನಮ್ಮಲ್ಲಿ ಐಐಟಿ ಪರೀಕ್ಷೆ ಇದ್ದ ಹಾಗೆ ಅಮೆರಿಕದಲ್ಲಿ ಪ್ರತಿಷ್ಠಿತ ಸ್ಯಾಟ್ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಬಿಳಿಯರು, ಕಪ್ಪುವರ್ಣೀಯರು ಮತ್ತು ಲ್ಯಾಟಿನ್ ಅಮೆರಿಕನ್ ಜನರು ಕೂಡ ಹಾಜರಾಗುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ಕಪ್ಪುವರ್ಣೀಯರು ಮತ್ತು ಲ್ಯಾಟಿನ್ ಅಮೆರಿಕನ್ ಜನರು ಎಂದಿಗೂ ಉತ್ತಮ ಅಂಕ ಪಡೆಯಲ್ಲ. ಆದರೆ ಬಿಳಿಯರು ಸದಾ ಈ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು’ ಎಂದೂ ಹೇಳಿದ್ದಾರೆ.
‘ಈ ನಡುವೆ ಒಂದು ದಿನ ಪ್ರೊಫೆಸರ್ ಒಬ್ಬರು, ಕಪ್ಪುವರ್ಣೀಯರು ಪ್ರಶ್ನೆಪತ್ರಿಕೆ ಸಿದ್ಧಪಡಿಸಲಿ ಮತ್ತು ಬಿಳಿಯರು ಪರೀಕ್ಷೆ ಬರೆಯಲಿ ಎಂದು ಸಲಹೆ ನೀಡಿದರು. ಅದಾದ ಮೇಲೆ ಏನಾಯ್ತು ಗೊತ್ತೇ? ಎಲ್ಲಾ ಬಿಳಿಯರೂ ಪರೀಕ್ಷೆಯಲ್ಲಿ ಫೇಲ್ ಆದರು. ಹೀಗಾಗಿ ಮೆರಿಟ್ (ಅರ್ಹತೆ) ಅನ್ನುವ ವ್ಯವಸ್ಥೆಯನ್ನು ಯಾರು ನಿಯಂತ್ರಿಸುತ್ತಾರೆ ಎನ್ನುವುದರ ಮೇಲೆ ಎಲ್ಲ ನಿರ್ಧಾರವಾಗುತ್ತದೆ’ ಎಂದು ಹೇಳಿದ್ದಾರೆ.