ಬೆಂಗಳೂರಲ್ಲಿ ಶಾ ಟೀಕಿಸಿದ್ದ ಕೇಸಿನಲ್ಲಿ ರಾಹುಲ್‌ಗೆ ಬೇಲ್‌

KannadaprabhaNewsNetwork | Updated : Feb 21 2024, 09:13 AM IST

ಸಾರಾಂಶ

2018ರಲ್ಲಿ ಅಮಿತ್‌ ಶಾ ವಿರುದ್ಧ ಕೊಲೆ ಆರೋಪಿ ಎಂದುಟೀಕೆ ಮಾಡಿದ್ದ ಪ್ರಕರಣದಲ್ಲಿ ಸುಲ್ತಾನ್‌ಪುರ ನ್ಯಾಯಾಲಯ ರಾಹುಲ್‌ ಗಾಂಧಿಗೆ ಬೇಲ್‌ ನೀಡಿದೆ.

ಸುಲ್ತಾನ್‌ಪುರ: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ನಾಯಕ ಅಮಿತ್‌ ಶಾ ವಿರುದ್ಧ ನೀಡಿದ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್, ವಿಚಾರಣೆಗಾಗಿ ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯೋಗೇಶ್‌ ಯಾದವ್‌, 25 ಸಾವಿರ ರು.ಗಳ 2 ಬಾಂಡ್‌ ನೀಡುವಂತೆ ತಿಳಿಸಿ ರಾಹುಲ್‌ ಗಾಂಧಿ ಅವರಿಗೆ ಜಾಮೀನು ನೀಡಿದರು.

ಏನಿದು ಪ್ರಕರಣ?
2018ರ ಚುನಾವಣೆಯ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್‌, ‘ಬಿಜೆಪಿ ತನ್ನನ್ನು ತಾನು ಅತ್ಯಂತ ಪ್ರಾಮಾಣಿಕ ಪಕ್ಷ ಎಂದು ಕರೆದುಕೊಳ್ಳುತ್ತದೆ. 

ಆದರೆ ಕೊಲೆ ಪ್ರಕರಣದ ಆರೋಪಿಯನ್ನು ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿಕೊಂಡಿದೆ ಎಂದು ಹೇಳಿದ್ದರು. 

ರಾಹುಲ್‌ರ ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕ ವಿಜಯ್‌ ಮಿಶ್ರಾ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

2019ರ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ಮೋದಿ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ಕೇಸಲ್ಲಿ ರಾಹುಲ್‌ಗೆ ಗುಜರಾತ್‌ ಕೋರ್ಟ್‌ 2 ವರ್ಷ ಜೈಲುಶಿಕ್ಷೆ ವಿಧಿಸಿ ಬಳಿಕ ಅದನ್ನು ಅಮಾನತಿನಲ್ಲಿ ಇಟ್ಟಿತ್ತು.

Share this article