ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ ಮೂರು ತಿಂಗಳ ಕಾಲ ‘ಭಾರತ್ ಜೋಡೋ’ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಅದಕ್ಕಿಂತ ದೊಡ್ಡ ಯಾತ್ರೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮಣಿಪುರದಿಂದ ಮುಂಬೈವರೆಗೆ ‘ಭಾರತ್ ನ್ಯಾಯ ಯಾತ್ರೆ’ಯನ್ನು ಘೋಷಿಸಿದ್ದಾರೆ.
ಪಿಟಿಐ ನವದೆಹಲಿ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ ಮೂರು ತಿಂಗಳ ಕಾಲ ‘ಭಾರತ್ ಜೋಡೋ’ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಅದಕ್ಕಿಂತ ದೊಡ್ಡ ಯಾತ್ರೆ ಹಮ್ಮಿಕೊಂಡಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಮಣಿಪುರದಿಂದ ಮುಂಬೈವರೆಗೆ ‘ಭಾರತ್ ನ್ಯಾಯ ಯಾತ್ರೆ’ಯನ್ನು ಘೋಷಿಸಿದ್ದಾರೆ.ಜ.14ರಂದು ಮಣಿಪುರ ರಾಜಧಾನಿ ಇಂಫಾಲದಲ್ಲಿ ಈ ಯಾತ್ರೆಗೆ ಚಾಲನೆ ಸಿಗಲಿದ್ದು, ಮಾ.20ರಂದು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಈ ಅವಧಿಯಲ್ಲಿ ಅವರು 14 ರಾಜ್ಯಗಳು, 85 ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ.ಭಾರತ್ ಜೋಡೋ ಯಾತ್ರೆ ವೇಳೆ ಪಾದಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಈ ಬಾರಿ ಹೆಚ್ಚಿನ ದೂರವನ್ನು ಬಸ್ ಮೂಲಕ ಕ್ರಮಿಸಲಿದ್ದಾರೆ ಎಂಬುದು ಗಮನಾರ್ಹ. ಯಾತ್ರೆಯ ಮಧ್ಯೆ ಅಲ್ಲಲ್ಲಿ ಪಾದಯಾತ್ರೆಯನ್ನೂ ನಡೆಸಲಿದ್ದಾರೆ.ಮಣಿಪುರದಿಂದ ಆರಂಭವಾಗಲಿರುವ ‘ಭಾರತ ನ್ಯಾಯ ಯಾತ್ರೆ’ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಸಂಚರಿಸಲಿದೆ. ಒಟ್ಟು 6200 ಕಿ.ಮೀ. ದೂರವನ್ನು ಈ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹಾಗೂ ಇತರೆ ಕಾಂಗ್ರೆಸ್ ನಾಯಕರು ಕ್ರಮಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಣಿಪುರ ರಾಜಧಾನಿ ಇಂಫಾಲದಲ್ಲಿ ಜ.14ರಂದು ಯಾತ್ರೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಮಹಿಳೆಯರು, ಯುವಕರು ಹಾಗೂ ದುರ್ಬಲ ವರ್ಗದವರ ಜತೆ ರಾಹುಲ್ ಸಂವಾದ ನಡೆಸಲಿದ್ದಾರೆ ಎಂದು ಪಕ್ಷದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.‘ನ್ಯಾಯ ಯಾತ್ರೆ’ ಯಾಕೆ?ಭಾರತ್ ಜೋಡೋ ಯಾತ್ರೆ ವೇಳೆ ಆರ್ಥಿಕ ಸಮಾನತೆ, ಧ್ರುವೀಕರಣ, ಸರ್ವಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಲಾಗಿತ್ತು. ಏಕತೆ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶವನ್ನು ರಾಹುಲ್ ಗಾಂಧಿ ಪಸರಿಸಿದ್ದರು. ನ್ಯಾಯ ಯಾತ್ರೆಯು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯದ ಬಗ್ಗೆ ಗಮನಹರಿಸಲಿದೆ. ದೇಶ ಜನತೆಗೆ ನ್ಯಾಯವನ್ನು ಕೋರಲಿದೆ ಎಂದು ಜೈರಾಮ್ ತಿಳಿಸಿದ್ದಾರೆ.ಕಳೆದ ಮೇ ತಿಂಗಳಿನಲ್ಲಿ ಭೀಕರ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರದಿಂದ ರಾಹುಲ್ ಗಾಂಧಿ ಅವರು ಯಾತ್ರೆ ಆರಂಭಿಸುತ್ತಿರುವುದು ಗಮನಾರ್ಹ. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿಯಾಗಿ, 60 ಸಾವಿರ ಮಂದಿ ನಿರಾಶ್ರಿತರಾಗಿದ್ದರು.2022ರ ಸೆ.7ರಂದು ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಆರಂಭಿಸಿದ್ದರು. 136 ದಿನಗಳ ಕಾಲ ನಡೆದ ಆ ಯಾತ್ರೆ 12 ರಾಜ್ಯಗಳ 75 ಜಿಲ್ಲೆಗಳು 76 ಲೋಕಸಭಾ ಕ್ಷೇತ್ರಗಳಲ್ಲಿ 4081 ಕಿ.ಮೀ. ಸಂಚರಿಸಿ ಈ ವರ್ಷದ ಜ.30ರಂದು ಮುಕ್ತಾಯವಾಗಿತ್ತು. ಆ ವೇಳೆ ರಾಹುಲ್ 12 ಸಮಾವೇಶ, 100ಕ್ಕೂ ಹೆಚ್ಚು ರಸ್ತೆ ಬದಿ ಸಭೆ ಹಾಗೂ 13 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. ಪಾದಯಾತ್ರೆ ಮಾಡುತ್ತಲೇ 275 ಸಂವಾದ, ಬಿಡುವಿನ ವೇಳೆ 100 ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.