ಶಾಲೆ ತಪಾಸಣೆಗೆ ಬಂದ ಜಿರಳೆಗೆ ಸ್ಥಳೀಯರ ತಡೆ

KannadaprabhaNewsNetwork |  
Published : Aug 22, 2026, 01:30 AM IST
CJP

ಸಾರಾಂಶ

ಸ್ಕೂಲ್ ಠೀಕ್ ಕರೋ ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ ತಂಡವನ್ನು ಸ್ಥಳೀಯರು ತಡೆದು, ಗ್ರಾಮದಿಂದ ಹೊರದಬ್ಬಿರುವ ಘಟನೆ ಜೈಪುರದ ರಾಮಪುರ ಕನ್ವರ್‌ಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಜೈಪುರ: ಸ್ಕೂಲ್ ಠೀಕ್ ಕರೋ ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ ತಂಡವನ್ನು ಸ್ಥಳೀಯರು ತಡೆದು, ಗ್ರಾಮದಿಂದ ಹೊರದಬ್ಬಿರುವ ಘಟನೆ ಜೈಪುರದ ರಾಮಪುರ ಕನ್ವರ್‌ಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಬೆನ್ನಲ್ಲೇ, 48 ಗಂಟೆಗಳಲ್ಲಿ ಶಾಲೆ ದುರಸ್ತಿ ಆರಂಭಿಸದಿದ್ದರೆ ಹಾಗೂ ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ ಧರಣಿ ಕೂರುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಬಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.

ಶಾಲೆಯ ಮೂಲಸೌಕರ್ಯ, ಕಟ್ಟಡದ ಸ್ಥಿತಿಗತಿ ಪರಿಶೀಲಿಸಲು ಸಿಜೆಪಿ ನಿಯೋಗ

ಶಾಲೆಯ ಮೂಲಸೌಕರ್ಯ, ಕಟ್ಟಡದ ಸ್ಥಿತಿಗತಿ ಪರಿಶೀಲಿಸಲು ಸಿಜೆಪಿ ನಿಯೋಗ ತೆರಳಿತ್ತು. ಆದರೆ, ಕಾರ್ಯಕರ್ತರು ಗ್ರಾಮಕ್ಕೆ ಆಗಮಿಸುವ ಮುನ್ನವೇ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದ ಸ್ಥಳೀಯರು, ಬರುವ ವಾಹನಗಳನ್ನು ತಪಾಸಣೆ ನಡೆಸಿದರು. ಈ ವೇಳೆ ಸಿಜೆಪಿಗರು ಮತ್ತು ಸ್ಥಳೀಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಅಂತಿಮವಾಗಿ ಕಾರ್ಯಕರ್ತರನ್ನು ಪ್ರದೇಶದಿಂದ ಹೊರದಬ್ಬಲಾಯಿತು. ಬಳಿಕ ಗ್ರಾಮಸ್ಥರು ಶಾಲೆಯ ಮುಂದೆ ಕುಳಿತು ಸಿಜೆಪಿ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.

‘ಸರ್ಕಾರವು ಶಾಲೆಯ ದುರಸ್ತಿಗೆ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಸ್ಥಳೀಯರ ಶ್ರಮದಿಂದಲೇ ಕಟ್ಟಡವನ್ನು ಸರಿಪಡಿಸಿಕೊಳ್ಳಲಾಗುವುದು. ಈ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಅಗತ್ಯವಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರ ಜೊತೆಗೂಡಿದ ಗ್ರಾಮಸ್ಥರು ತಿಳಿಸಿದ್ದಾರೆ. ಪ್ರಸ್ತುತ ಪಾಳುಬಿದ್ದಿರುವ ಈ ಶಾಲೆಗೆ ಬೀಗ ಹಾಕಲಾಗಿದ್ದು, ಪಕ್ಕದ ದನದ ಕೊಟ್ಟಿಗೆಯಲ್ಲಿ ತರಗತಿ ನಡೆಸಲಾಗುತ್ತಿದೆ.

ದೀಪ್ಕೆ 48 ಗಂಟೆ ಗಡುವು:

ಘಟನೆ ಬೆನ್ನಲ್ಲೇ ದೀಪ್ಕೆ ವಿಡಿಯೋ ಸಂದೇಶ ನೀಡಿದ್ದು, ‘ಮುಂದಿನ 48 ಗಂಟೆಗಳ ಒಳಗೆ ಶಾಲೆಯ ದುರಸ್ತಿ ಕಾರ್ಯ ಪ್ರಾರಂಭವಾಗದಿದ್ದರೆ ಮತ್ತು ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ, ನಾನು ಜೈಪುರಕ್ಕೆ ಹೋಗುತ್ತೇನೆ. ಧರಣಿ ಕೂರುತ್ತೇನೆ. ನಮ್ಮೊಂದಿಗೆ ಕೈಜೋಡಿಸಿ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೆಹಲಿ ಸರ್ಕಾರ, ಪೊಲೀಸರಿಗೆ ಸುಪ್ರೀಂ ಕಡಿವಾಣ
ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ