ತಿಮ್ಮಪ್ಪನ ಭಕ್ತರ ರಕ್ಷಣೆಗೆ ರೋಬೋಟಿಕ್‌ ನಾಯಿ

KannadaprabhaNewsNetwork |  
Published : Aug 22, 2026, 01:30 AM IST
Robo

ಸಾರಾಂಶ

ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್‌ ನಾಯಿಗಳು!

ತಿರುಪತಿ: ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್‌ ನಾಯಿಗಳು!

ಚಿರತೆ ಸೇರಿದಂತೆ ವನ್ಯಮೃಗಗಳ ಓಡಾಟ

ತಿರುಮಲ ಬೆಟ್ಟ ವ್ಯಾಪ್ತಿಯ ಕಾಡಿನಲ್ಲಿರುವ ಚಿರತೆ ಸೇರಿದಂತೆ ವನ್ಯಮೃಗಗಳ ಓಡಾಟದ ಮೇಲೆ ತೀವ್ರ ನಿಗಾ ಇಡಲು ಹಾಗೂ ವನ್ಯಮೃಗಗಳ ದಾಳಿಗಳಿಂದ ತಿರುಮಲ ಭಕ್ತರನ್ನು ರಕ್ಷಿಸಲು ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಗಳು) ಆಡಳಿತ ಮಂಡಳಿಯು ಅತ್ಯಾಧುನಿಕ ರೋಬೋಟಿಕ್‌ ತಂತ್ರಜ್ಞಾನ ಬಳಕೆ ಕುರಿತು ಚಿಂತನೆ ನಡೆಸುತ್ತಿದೆ. ಅದರ ಭಾಗವಾಗಿ ತಿರುಮಲದ ಶ್ರೀ ಪದ್ಮಾವತಿ ಗೆಸ್ಟ್‌ ಹೌಸ್‌ನಲ್ಲಿ ರೋಬೋಟಿಕ್‌ ನಾಯಿ ತಂತ್ರಜ್ಞಾನದ ಕಾರ್ಯ ವಿಧಾನವನ್ನು ಟಿಟಿಡಿ ಆಡಳಿತ ಮಂಡಳಿ ಹೆಚ್ಚುವರಿ ಎಕ್ಸಿಕ್ಯುಟಿವ್‌ ಅಧಿಕಾರಿ ವೆಂಕಟೇಶ್ ಚೌಧರಿ ಮತ್ತು ದೇವಸ್ಥಾನದ ಇತರೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈ ರೋಬೋಟಿಕ್ ನಾಯಿಯು ಆಪ್ಟಿಕಲ್‌ ಮತ್ತು 360 ಡಿಗ್ರಿ ಎಲ್‌ಐಡಿಎಆರ್‌, ಬಹುಸೆನ್ಸಾರ್‌ಗಳು, ಎಐ ಒಳಗೊಂಡ ಥರ್ಮಲ್‌ ಇಮೇಜಿಂಗ್‌ ಕ್ಯಾಮೆರಾಗಳನ್ನು ಹೊಂದಿದೆ. ಈ ತಂತ್ರಜ್ಞಾನಗಳು ಮಂಜು ಕವಿದ ವಾತಾವರಣ, ಕಗ್ಗತ್ತಲಲ್ಲೂ ವನ್ಯಪ್ರಾಣಿಗಳ ಓಡಾಟದ ಮೇಲೆ ಕಣ್ಣಿಡಲು ನೆರವು ನೀಡುತ್ತವೆ.

ಇದರಲ್ಲಿರುವ ಎಐ ವ್ಯವಸ್ಥೆ ದೊಡ್ಡ ಪ್ರಾಣಿಗಳು, ಮಾನವರು, ಸಾಕುಪ್ರಾಣಿಗಳು ಹಾಗೂ ವಾಹನಗಳನ್ನು ಗುರುತಿಸುವ ಜತೆಗೆ ಕಾಡುಪ್ರಾಣಿಗಳ ಚಲನವಲನಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿವೆ. ಆ ಬಳಿಕ ಜಿಯೋ ಟ್ಯಾಗ್‌ ಮಾಡಲಾದ ಅಲರ್ಟ್‌ಗಳು ಮತ್ತು ಸ್ಟ್ರೀಂ ಲೈವ್‌ ವಿಡಿಯೋ ಹಾಗೂ ಥರ್ಮಲ್‌ ಮಾಹಿತಿಗಳನ್ನು ಕಂಟ್ರೋಲ್‌ ರೂಮ್‌ ಹಾಗೂ ಗಸ್ತು ಸಿಬ್ಬಂದಿಗೆ ತಕ್ಷಣ ಪ್ರತಿಕ್ರಿಯೆಗಾಗಿ ರವಾನಿಸುತ್ತವೆ.

ಎಲ್ಲಿ ನಿಯೋಜನೆ?:

ಪದೇ ಪದೆ ಕಾಡುಪ್ರಾಣಿಗಳ ಓಡಾಟಕ್ಕೆ ಸಾಕ್ಷಿಯಾಗುತ್ತಿರುವ ಅಲಿಪಿರಿ-ತಿರುಮಲ ಮೆಟ್ಟಿಲು ಪ್ರದೇಶ, ಇತರ ಕಡೆ ಈ ರೋಬೋಟಿಕ್‌ ನಾಯಿಗಳನ್ನು ನಿಯೋಜಿಸಲು ಟಿಟಿಡಿ ಆಸಕ್ತಿ ತೋರಿದೆ. ಈ ಮೂಲಕ ಈ ಭಾಗದಲ್ಲಿ ಹೆಚ್ಚಾಗಿರುವ ಚಿರತೆಗಳ ಚಲನವಲನಗಳನ್ನು ಪತ್ತೆ ಹಚ್ಚಿ ಭಕ್ತರನ್ನು ಎಚ್ಚರಿಸಲು, ಸುರಕ್ಷತಾ ಸಿಬ್ಬಂದಿಯನ್ನು ನಿಯೋಜಿಸಲು ಅನುಕೂಲಾಗಲಿದೆ.

ಈ ರೋಬೋಟಿಕ್‌ ನಾಯಿಗಳು ಈಗಾಗಲೇ ಇರುವ ಕ್ಯಾಮೆರಾ ಟ್ರ್ಯಾಪ್‌, ನಿಯಮಿತ ಗಸ್ತು ಮತ್ತು ಕಾಡಿನ ಕಣ್ಗಾವಲು ವ್ಯವಸ್ಥೆಗೆ ಪರ್ಯಾಯವಲ್ಲ, ಬದಲಾಗಿ ಪೂರಕ ಅಷ್ಟೆ ಎನ್ನಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರ ಮೇಲೆ ಅದರಲ್ಲೂ ಮುಖ್ಯವಾಗಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆಗಳ ಹಿನ್ನೆಲೆಯಲ್ಲಿ ಟಿಟಿಡಿ ಇಂಥದ್ದೊಂದು ಚಿಂತನೆ ನಡೆಸುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೆಹಲಿ ಸರ್ಕಾರ, ಪೊಲೀಸರಿಗೆ ಸುಪ್ರೀಂ ಕಡಿವಾಣ
ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ