ಜೈಪುರ: ಪಹಲ್ಗಾಂನಲ್ಲಿ ಭಯೋತ್ಪಾದಕ ದಾಳಿ ನಡೆದು ಒಂದು ತಿಂಗಳು ಕಳೆದರೂ ಪಾಕಿಸ್ತಾನದ ವಿರುದ್ಧ ದೇಶದ ಕೋಪ ಕಡಿಮೆಯಾಗುತ್ತಿಲ್ಲ. ಇದರ ಪರಿಣಾಮ ರಾಜಸ್ಥಾನದ ಜೈಪುರದಲ್ಲಿ ‘ಪಾಕ್’ ಎಂಬ ಹೆಸರುಳ್ಳ ಕರ್ನಾಟಕದ ಪ್ರಸಿದ್ಧ ಸಿಹಿತಿನಿಸು ‘ಮೈಸೂರು ಪಾಕ್’ ಸೇರಿ ಹಲವು ಸಿಹಿ ಖಾದ್ಯಗಳ ಹೆಸರನ್ನೇ ಬದಲಿಸಲಾಗಿದೆ!
‘ಪಾಕ್ ವಿರುದ್ಧ ಸಿಟ್ಟಿಗೆದ್ದ ಗ್ರಾಹಕರು ಪಾಕ್ ಹೆಸರಿನ ಸಿಹಿತಿಂಡಿಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ಗ್ರಾಹಕರ ಒತ್ತಾಯಕ್ಕೆ ತಕ್ಕಂತೆ ರಾಜಸ್ಥಾನದ ರಾಜಧಾನಿ ಜೈಪುರದ ಸಿಹಿತಿಂಡಿ ವ್ಯಾಪಾರಿಗಳು ಪಾಕ್ ಪದದೊಂದಿಗೆ ಸಂಬಂಧ ಹೊಂದಿದ್ದ ಸಿಹಿತಿಂಡಿಗಳ ಹೆಸರನ್ನು ಬದಲಾಯಿಸಿದ್ದೇವೆ’ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಈ ಪ್ರಕಾರ, ಮೈಸೂರು ಪಾಕ್ ಹೆಸರು ‘ಮೈಸೂರು ಶ್ರೀ’ ಆಗಿ ಬದಲಾಗಿದೆ. ಅಂಜೀರ್ ಪಾಕ್ ‘ಅಂಜೀರ್ ಭಾರತ್’ ಆಗಿದೆ. ಗೊಂಡ್ ಪಾಕ್ ‘ಗೊಂಡ್ ಶ್ರೀ’ ಆಗಿ, ಫಿಗ್ ಪಾಕ್ ‘ಫಿಗ್ ಇಂಡಿಯಾ’ ಆಗಿ, ಫ್ರೂಟ್ ಪಾಕ್ ‘ಫ್ರೂಟ್ ಸ್ಪೆಷಲ್’ ಎಂದು ಬದಲಾಗಿದೆ. ಅದೇ ರೀತಿ, ಮಾವಾ ಪಾಕ್, ಅಂಜೀರ್ ಪಾಕ್, ಕಾಜು ಪಾಕ್‌ಗೂ ಪರ್ಯಾಯ ಹೆಸರುಗಳನ್ನು ನೀಡಲಾಗಿದೆ.
‘ಪಾಕ್’ ತುಂಬಾ ಫೇಮಸ್:
ರಾಜರು ಮತ್ತು ಮಹಾರಾಜರ ನಗರಿ ಜೈಪುರದ ಜನರು ಸಿಹಿತಿಂಡಿ ತಿನ್ನುವುದನ್ನು ತುಂಬಾ ಇಷ್ಟಪಡುತ್ತಾರೆ. ನಗರದಲ್ಲಿ ನೂರಾರು ಸಿಹಿತಿಂಡಿ ಅಂಗಡಿಗಳಿವೆ. ಇಲ್ಲಿ ವಿವಿಧ ಬಗೆಯ ಮತ್ತು ರುಚಿಯ ಸಿಹಿತಿಂಡಿಗಳು ಜನರ ಬಾಯಲ್ಲಿ ನೀರೂರಿಸುತ್ತವೆ. ಜೈಪುರದ ಎಲ್ಲಾ ಪ್ರಸಿದ್ಧ ಸಿಹಿತಿಂಡಿಗಳೊಂದಿಗೆ ಪಾಕ್ ಎಂಬ ಪದವು ಸಂಬಂಧ ಹೊಂದಿದೆ. ಇದರಲ್ಲಿ ಗೊಂಡ್ ಪಾಕ್, ಮೈಸೂರು ಪಾಕ್, ಮಾವಾ ಪಾಕ್, ಫಿಗ್ ಪಾಕ್, ಗೋಡಂಬಿ ಪಾಕ್, ದೇಸಿ ಪಾಕ್, ಫ್ರೂಟ್ ಪಾಕ್ ಪ್ರಮುಖವಾಗಿವೆ. ಪರ-ವಿರೋಧ ಚರ್ಚೆ:
‘ಪಾಕ ಅಥವಾ ಪಾಕ್ ಎಂಬುದು ಅಡುಗೆ-ತಿಂಡಿಗೆ ಸಂಬಂಧಿಸಿದ ಪದ. ಇದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ. ಹೀಗಾಗಿ ಪಾಕ್ ಹೆಸರು ಬದಲಾವಣೆ ಅಗತ್ಯವಿಲ್ಲ’ ಎಂದು ಕೆಲವರು ವಾದಿಸಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿದ ಜೈಪುರದ ಮುಂಬೈ ಮಿಶ್ತಾನ್ ಭಂಡಾರ್ ಮಿಠಾಯಿ ಅಂಗಡಿ ಮಾಲೀಕ ವಿನೀತ್ ತ್ರಿಖಾ, ‘ಸಿಹಿತಿಂಡಿಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ಭಾರತದ ಕಡೆಗೆ ಕಣ್ಣು ಎತ್ತುವವರ ಹೆಸರು ತೆಗೆದುಹಾಕಲಾಗುತ್ತದೆ ಮತ್ತು ಪ್ರತಿ ಭಾರತೀಯನು ತನ್ನದೇ ಆದ ರೀತಿಯಲ್ಲಿ ಅವರಿಗೆ ಪಾಠ ಕಲಿಸುತ್ತಾನೆ ಎಂಬ ಸಂದೇಶ ನೀಡಲು ಪ್ರಯತ್ನಿಸಲಾಗಿದೆ. ಸಿಹಿತಿಂಡಿ ಇಷ್ಟಪಡುವ ಗ್ರಾಹಕರು ಸಹ ಈ ಬದಲಾವಣೆ ಇಷ್ಟಪಡುತ್ತಿದ್ದಾರೆ’ ಎಂದಿದ್ದಾರೆ.