ನಮ್ಮ ಸರ್ಕಾರಕ್ಕೆ ಬಸವೇಶ್ವರರು ಸ್ಫೂರ್ತಿ: ತೆಲಂಗಾಣ ಸಿಎಂ

KannadaprabhaNewsNetwork | Published : May 24, 2025 1:54 AM
‘ಸಮಾಜ ಸುಧಾರಕ ತತ್ವಜ್ಞಾನಿ ಬಸವೇಶ್ವರರಿಂದ ಸ್ಫೂರ್ತಿ ಪಡೆದು, ನಮ್ಮ ಸರ್ಕಾರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುತ್ತದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.
Follow Us

ಬಸವಣ್ಣನ ಸ್ಫೂರ್ತಿ ಪಡೆದು ಕಲ್ಯಾಣ ಯೋಜನೆ ಜಾರಿ

ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿ ಸಿಎಂ ನುಡಿ

ಹೈದರಾಬಾದ್‌: ‘ಸಮಾಜ ಸುಧಾರಕ ತತ್ವಜ್ಞಾನಿ ಬಸವೇಶ್ವರರಿಂದ ಸ್ಫೂರ್ತಿ ಪಡೆದು, ನಮ್ಮ ಸರ್ಕಾರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುತ್ತದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್‌ನಲ್ಲಿ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ರೆಡ್ಡಿ, ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಸಂದೇಶ ಮತ್ತು ಜಾತಿ ಜನಗಣತಿ ನಡೆಸುವ ಅಗತ್ಯವನ್ನು ಎತ್ತಿ ಹಿಡಿದಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬಸವೇಶ್ವರರ ಸಂದೇಶವೇ ಸ್ಫೂರ್ತಿ’ ಎಂದರು. ಇದೇ ವೇಳೆ, ಮಂಚೂರಿನಲ್ಲಿ ಕೇಂದ್ರೀಯ ವಿದ್ಯಾಲಯವನ್ನೂ ಸಿಎಂ ಉದ್ಘಾಟಿಸಿದರು.

==

ತೆಲಂಗಾಣ ಅಭಿವೃದ್ಧಿಗೆ 50 ಸಲ ಮೋದಿ ಭೇಟಿ ಆಗುವೆ: ಸಿಎಂ

ಹೈದರಾಬಾದ್‌: ‘ರಾಜ್ಯಕ್ಕೆ ಅಗತ್ಯವಾದ ನಿಧಿ ಮತ್ತು ಯೋಜನೆಗಳಿಗೆ ಅನುಮತಿ ಪಡೆಯಲು ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು 50 ಬಾರಿ ಬೇಕಾದರೂ ಭೇಟಿಯಾಗಲು ಸಿದ್ಧ’ ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಹೇಳಿದ್ದಾರೆ.ಜಹೀರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ‘ರಾಜ್ಯದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಕೇಂದ್ರ ಮತ್ತು ವಿಪಕ್ಷದ ನಡುವೆ ಸಹಕಾರ ಮುಖ್ಯ. ರಾಜಕಾರಣವನ್ನು ಚುನಾವಣೆ ಸಮಯದಲ್ಲಿ ಮಾಡಲಾಗುತ್ತದೆ. ಆದರೆ ನನ್ನ ಗುರಿ, ಚುನಾವಣೆಯ ಬಳಿಕ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವುದು. ಇದಕ್ಕಾಗಿ ಮೋದಿಯನ್ನು ಎಷ್ಟು ಸಲ ಬೇಕಾದರೂ ಭೇಟಿ ಮಾಡುತ್ತೇನೆ’ ಎಂದರು.ಅಂತೆಯೇ, ವಿಧಾನಸಭೆ ವಿಪಕ್ಷ ನಾಯಕ ಕೆ. ಚಂದ್ರಶೇಖರ ರಾವ್‌ ಅವರಿಗೆ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರು.

==

ತೆಲಂಗಾಣದಲ್ಲಿ ಬಿಜೆಪಿ ಜತೆ ಮೈತ್ರಿಗೆ ಕೆಸಿಆರ್‌ ಉತ್ಸುಕ?

ಹೈದರಾಬಾದ್‌: ತೆಲಂಗಾಣ ಮಾಜಿ ಸಿಎಂ ಹಾಗೂ ಬಿಆರ್‌ಎಸ್‌ ನಾಯಕ ಕೆ.ಚಂದ್ರಶೇಖರರಾವ್‌ ಬಿಜೆಪಿ ಜತೆ ಸಖ್ಯಕ್ಕೆ ಮುಂದಾಗಿದ್ದಾರೆ ಎಂಬ ಗುಲ್ಲು ಹರಡಿದೆ. ಅವರ ಮಗಳಾದ ಎಂಎಲ್ಸಿ ಕೆ.ಕವಿತಾ ಅವರು ಕೆಸಿಆರ್ ಅವರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಬಿಆರ್‌ಎಸ್‌ ಮತ್ತು ಬಿಜೆಪಿ ಮೈತ್ರಿ ಕುರಿತು ಚರ್ಚೆಗೆ ನಾಂದಿ ಹಾಡಿದೆ.‘ವರಂಗಲ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೀವು ಕೇವಲ 2 ನಿಮಿಷ ಮಾತನಾಡಿದಿರಿ. ಬಿಜೆಪಿಯಿಂದ ನಾನು ಸಾಕಷ್ಟು ತೊಂದರೆಗೊಳಗಾಗಿದ್ದೇನೆ. ಹೀಗಾಗಿ ನಾನು ಕೂಡ ಬಿಜೆಪಿ ವಿರುದ್ಧ ನೀವು ಕಠಿಣ ಪದಗಳಲ್ಲಿ ಮಾತನಾಡುತ್ತೀರಿ ಅಂದುಕೊಂಡಿದ್ದೆ. ಆದರೆ ಮಾತನಾಡಲಿಲ್ಲ. ನಿಮ್ಮ ಇತ್ತೀಚಿನ ನಡೆಗಳಿಂದ ಕೆಲವರಿಗೆ ಭವಿಷ್ಯದಲ್ಲಿ ಬಿಜೆಪಿ ಜತೆಗೆ ಸಖ್ಯದ ಅನುಮಾನ ಮೂಡಿದೆ’ ಎಂದು ಕವಿತಾ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಈ ಬಗ್ಗೆ ಕವಿತಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

==

ಈಶಾನ್ಯದಲ್ಲಿ ಈಗ ಬಾಂಬ್‌, ಗನ್‌ ಇಲ್ಲ, ಅಭಿವೃದ್ಧಿ: ಮೋದಿ

‘ರೈಸಿಂಗ್‌ ಈಸ್ಟ್‌ ಇನ್ವೆಸ್ಟರ್ಸ್‌ ಶೃಂಗ’ ಉದ್ಘಾಟನೆ

ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಕೇಂದ್ರ ಉತ್ತೇಜನ

ವೈವಿಧ್ಯತೆಯೇ ಈಶಾನ್ಯ ರಾಜ್ಯಗಳ ಶಕ್ತಿ: ಪ್ರಧಾನಿ

ನವದೆಹಲಿ: ‘ಈ ಹಿಂದೆ ಬಾಂಬ್‌, ಗನ್‌ ಮತ್ತು ರಾಕೆಟ್‌ಗಳಿಗೆ ಸಾಕ್ಷಿಯಾಗುತ್ತಿದ್ದ ದೇಶದ ಈಶಾನ್ಯ ರಾಜ್ಯಗಳು ಈಗ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರವು ಉಗ್ರವಾದ, ನಕ್ಸಲ್‌ ವಾದದ ಬಗ್ಗೆ ಹೊಂದಿರುವ ಶೂನ್ಯ ಸಹಿಷ್ಣುತೆಯೇ ಇದಕ್ಕೆ ಕಾರಣ. ಕೇಂದ್ರ ಸರ್ಕಾರ ಈ ಭಾಗದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. 2047ರ ವಿಕಸಿತ ಭಾರತದ ಗುರಿ ಈಡೇರಲು ಈಶಾನ್ಯ ರಾಜ್ಯಗಳ ವಿಕಾಸ ಅತ್ಯಗತ್ಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಅಧಿಕಾರಿಗಳು, ರಾಜತಾಂತ್ರಿಕರು ಪಾಲ್ಗೊಂಡಿದ್ದ 2 ದಿನಗಳ ‘ರೈಸಿಂಗ್‌ ಈಸ್ಟ್‌ ಇನ್ವೆಸ್ಟರ್ಸ್‌ ಶೃಂಗ’ದಲ್ಲಿ ಶುಕ್ರವಾರ ಮಾತನಾಡಿದ ಅವರು, ವೈವಿಧ್ಯತೆಯೇ ಈಶಾನ್ಯ ಭಾಗದ ಅತಿದೊಡ್ಡ ಶಕ್ತಿ. ಈ ಭಾಗ ಅಭಿವೃದ್ಧಿ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದೆ ಎಂದರು.ಈ ಹಿಂದೆ ಈ ಭಾಗವು ಬಾಂಬ್‌, ಗನ್‌ ಮತ್ತು ರಾಕೆಟ್‌ಗಳಿಗೆ ಸಾಕ್ಷಿಯಾಗುತ್ತಿತ್ತು. ಇದು ಈ ಭಾಗದ ಯುವಕರ ಅನೇಕ ಅವಕಾಶಗಳನ್ನು ಕಸಿದುಕೊಂಡಿತು. ಕಳೆದೊಂದು ದಶಕದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಯುವಕರು ಈ ಭಾಗದಲ್ಲಿ ಹಿಂಸಾಚಾರಕ್ಕೆ ತಿಲಾಂಜಲಿ ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಕೇಂದ್ರ ಸರ್ಕಾರ ಭಯೋತ್ಪಾದನೆ ಮತ್ತು ನಕ್ಸಲಿಂ ವಿಚಾರದಲ್ಲಿ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸುತ್ತಿದೆ ಎಂದು ಒತ್ತಿ ಹೇಳಿದರು.

ನನ್ನ ಸರ್ಕಾರದ ಪಾಲಿಗೆ ಈಸ್ಟ್‌ (ಇಎಎಸ್‌ಟಿ) ಅಂದರೆ ಎಂಪವರ್‌(ಅಧಿಕಾರ), ಆ್ಯಕ್ಟ್‌ (ಕಾರ್ಯ), ಸ್ಟ್ರೆಂಥನ್‌ (ಶಕ್ತಿ ನೀಡು) ಮತ್ತು ಟ್ರಾನ್ಸ್‌ಫಾರ್ಮ್‌ (ಬದಲಾವಣೆ) ಆಗಿದೆ. ಒಂದು ಕಾಲವಿತ್ತು ಆಗ ಈಶಾನ್ಯ ಭಾಗವನ್ನು ಗಡಿನಾಡು ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಬೆಳವಣಿಗೆಯ ಮುಂದಾಳಾಗಿ ಈ ಭಾಗ ರೂಪಾಂತರಗೊಂಡಿದೆ ಎಂದರು.ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್‌ ಅದಾನಿ, ಅನಿಲ್‌ ಅಗರ್ವಾಲ್‌ ಮತ್ತಿತತರು ಹಾಜರಿದ್ದರು.