ಮಂಗಳೂರು ಹಡಗು ದಾಳಿಕೋರರು ಪಾತಾಳದಲ್ಲಿದ್ರೂ ಬಿಡಲ್ಲ: ರಾಜನಾಥ್‌

KannadaprabhaNewsNetwork |  
Published : Dec 27, 2023, 01:31 AM ISTUpdated : Dec 27, 2023, 12:12 PM IST
ರಾಜನಾಥ್‌ ಸಿಂಗ್‌ | Kannada Prabha

ಸಾರಾಂಶ

2 ವಾಣಿಜ್ಯ ಹಡಗು ಮೇಲಿನ ದಾಳಿ ಗಂಭೀರವಾಗಿ ಪರಿಗಣಿಸಿದ್ದೇವೆ, ದಾಳಿ ಮಾಡಿಸಿದವರನ್ನು ಹುಡುಕೇ ಹುಡುಕುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ಪಿಟಿಐ ಮುಂಬೈ

ಸೌದಿ ಅರೇಬಿಯಾದಿಂದ ಮಂಗಳೂರಿಗೆ ತೈಲ ಹೊತ್ತು ಬರುತ್ತಿದ್ದದ್ದೂ ಸೇರಿದಂತೆ ಇತ್ತೀಚೆಗೆ ದೇಶಕ್ಕೆ ಸಂಬಂಧಿಸಿದ 2 ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ದಾಳಿ ಹಿಂದೆ ಯಾರಿದ್ದಾರೋ ಅವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಆ ದಾಳಿಕೋರರು ಪಾತಾಳದಲ್ಲಿ ಅಡಗಿದ್ದರೂ ಹುಡುಕಿಯೇ ಹುಡುಕುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗುಡುಗಿದ್ದಾರೆ.‘ಐಎನ್‌ಎಸ್‌ ಇಂಫಾಲ್‌’ ಯುದ್ಧ ನೌಕೆಯನ್ನು ಮಂಗಳವಾರ ರಾಷ್ಟ್ರಕ್ಕೆ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ವಾಣಿಜ್ಯ ಹಡಗುಗಳ ಮೇಲೆ ದಾಳಿಯಾದ ಬಳಿಕ ಸಮುದ್ರದಲ್ಲಿ ಕಾವಲನ್ನು ಭಾರತ ತೀವ್ರಗೊಳಿಸಿದೆ ಎಂದು ಮಾಹಿತಿ ನೀಡಿದರು.

‘ಎಂವಿ ಚೆಮ್‌ ಪ್ಲುಟೋ (ಮಂಗಳೂರಿನತ್ತ ಬರುತ್ತಿದ್ದ ಹಡಗು) ಹಾಗೂ ಎಂವಿ ಸಾಯಿಬಾಬಾ ಹಡಗಿನ ಮೇಲೆ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ದಾಳಿಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.ಎಂವಿ ಚೆಮ್‌ ಪ್ಲುಟೋ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿ ಇದ್ದರು. ಗುಜರಾತ್‌ನ ಪೋರ್‌ಬಂದರ್‌ನಿಂದ ಈ ಹಡಗು 217 ನಾಟಿಕಲ್‌ ಮೈಲು ದೂರದಲ್ಲಿದ್ದಾಗ ಡ್ರೋನ್‌ ದಾಳಿ ನಡೆಸಲಾಗಿತ್ತು. ಆ ವೇಳೆ ಹಡಗಿಗೆ ಬೆಂಕಿ ಹೊತ್ತಿಕೊಂಡಿತಾದರೂ ನಂದಿಸಿ, ಅಪಾಯದಿಂದ ಪಾರು ಮಾಡಲಾಗಿತ್ತು. ಬಳಿಕ ನೌಕಾಪಡೆ ಹಾಗೂ ಭಾರತೀಯ ಕರಾವಳಿ ಕಾವಲು ಪಡೆಗಳು ತಮ್ಮ ನೌಕೆಗಳನ್ನು ನಿಯೋಜಿಸಿ ಹಡಗಿನ ನೆರವಿಗೆ ಧಾವಿಸಿದ್ದವು.

ಮತ್ತೊಂದೆಡೆ, ಗ್ಯಾಬನ್‌ ದೇಶದ ಧ್ವಜ ಹೊತ್ತಿದ್ದ ಕಚ್ಚಾ ತೈಲ ಟ್ಯಾಂಕರ್‌ ಎಂವಿ ಸಾಯಿ ಬಾಬಾ ಹಡಗಿನಲ್ಲಿ 25 ಭಾರತೀಯ ಸಿಬ್ಬಂದಿ ಇದ್ದರು. ದಕ್ಷಿಣ ಕೆಂಪು ಸಮುದ್ರದಲ್ಲಿ ಈ ಹಡಗಿನ ಮೇಲೆ ಡ್ರೋನ್‌ ದಾಳಿಯಾಗಿತ್ತು. ಈ ನಡುವೆ, ವಾಣಿಜ್ಯ ಉದ್ದೇಶದ ಹಡಗುಗಳನ್ನು ಕಡಲ್ಗಳ್ಳತನ ಹಾಗೂ ಡ್ರೋನ್‌ ದಾಳಿಗಳಿಂದ ಪಾರು ಮಾಡಲು ಭಾರತೀಯ ನೌಕಾಪಡೆ 4 ಯುದ್ಧ ನೌಕೆಗಳನ್ನು ನಿಯೋಜನೆ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್ ತಿಳಿಸಿದ್ದಾರೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ: ಕಮಲ್‌