₹12000 ಸಂಬಳವಿದ್ರೂ ₹25 ಲಕ್ಷದ ಮನೆ ಕಟ್ಟಿಸುತ್ತಿದ್ದ ಆರೋಪಿ!

KannadaprabhaNewsNetwork |  
Published : Jun 30, 2026, 03:15 AM ISTUpdated : Jun 30, 2026, 04:13 AM IST
Ayodhya

ಸಾರಾಂಶ

ರಾಮಮಂದಿರ ದೇಣಿಗೆ ಕಳ್ಳತನದ ಆರೋಪದಲ್ಲಿ ಬಂಧಿತನಾಗಿರುವ ಲವಕುಶ ಮಿಶ್ರಾ ಕೇವಲ 12,000 ರು. ಸಂಬಳ ಪಡೆಯುತ್ತಿದ್ದ. ಆದರೆ 9 ಲಕ್ಷ ರು.ಗಳ ನಿವೇಶನ ಖರೀದಿಸಿ, ಸುಮಾರು 25 ಲಕ್ಷ ರು.ಗಳ ಮನೆ ಕಟ್ಟಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.

 ಅಯೋಧ್ಯೆ: ರಾಮಮಂದಿರ ದೇಣಿಗೆ ಕಳ್ಳತನದ ಆರೋಪದಲ್ಲಿ ಬಂಧಿತನಾಗಿರುವ ಲವಕುಶ ಮಿಶ್ರಾ ಕೇವಲ 12,000 ರು. ಸಂಬಳ ಪಡೆಯುತ್ತಿದ್ದ. ಆದರೆ 9 ಲಕ್ಷ ರು.ಗಳ ನಿವೇಶನ ಖರೀದಿಸಿ, ಸುಮಾರು 25 ಲಕ್ಷ ರು.ಗಳ ಮನೆ ಕಟ್ಟಿಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.

ಮಿಶ್ರಾಗೆ ರಾಮಮಂದಿರದಲ್ಲಿ 12,000-15,000 ರು. ಸಂಬಳ ಸಿಗುತ್ತಿತ್ತು. ಆದರೆ ಕಳೆದ ವರ್ಷ ಅಯೋಧ್ಯೆ-ಲಖನೌ ಹೈವೆ ಬಳಿ 8.8 ಲಕ್ಷ ರು. ಕೊಟ್ಟು ಹೆಂಡತಿಯ ಹೆಸರಿನಲ್ಲಿ ಸೈಟ್ ಖರೀದಿಸಿದ್ದ. ಕಳೆದ ಫೆಬ್ರವರಿಯಿಂದ ಆ ಜಾಗದಲ್ಲಿ ಎರಡಂತಸ್ತಿನ ಮನೆ ಕಟ್ಟಿಸುತ್ತಿದ್ದ. ಜಾಗ ಮತ್ತು ಮನೆಯ ಇಂದಿನ ಮೌಲ್ಯ ಸುಮಾರು 25 ಲಕ್ಷ ರು. ಎನ್ನಲಾಗಿದೆ. ಮಿಶ್ರಾ ಬಂಧನವಾದ ಬಳಿಕ ಮನೆ ನಿರ್ಮಾಣ ಕೆಲಸ ಸ್ಥಗಿತಗೊಂಡಿದೆ.

ಮಂದಿರಕ್ಕಾಗಿ ನನ್ನಣ್ಣನ ವೈಯಕ್ತಿಕ ಜೀವನ ತ್ಯಾಗ: ಚಂಪತ್‌ ಸೋದರ

ಬಿಜ್ನೋರ್‌: ರಾಮಮಂದಿರ ದೇಣಿಗೆ ವಿವಾದದ ಬಳಿಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ಚಂಪತ್‌ ರಾಯ್‌ ಬಗ್ಗೆ ಅವರ ಸಹೋದರ ಸುನೀಲ್‌ ಬನ್ಸಲ್‌ ಮಾತನಾಡಿದ್ದು, ‘ ರಾಮಮಂದಿರಕ್ಕಾಗಿ ನನ್ನಣ್ಣ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡಿದ್ದರು’ ಎಂದಿದ್ದಾರೆ. 

ಚಂಪತ್ ರಾಜೀನಾಮೆ ಬಗ್ಗೆ ಮಾತನಾಡಿದ ಬನ್ಸಾಲ್‌, ‘ಚಂಪತ್‌ ರಾಯ್‌ ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಮಮಂದಿರ ಹೋರಾಟ ಮತ್ತು ರಾಷ್ಟ್ರೀಯ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಉಪನ್ಯಾಸಕರಾಗಿದ್ದ ಅವರು ಆರ್‌ಎಸ್‌ಎಸ್‌ಗಾಗಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದರು. ಅವರ ವಿರುದ್ಧ ಕೇಳಿ ಬಂದಿರುವ ದೇಣಿಗೆ ಹಣ ದುರುಪಯೋಗ ಆರೋಪ ರಾಜಕೀಯ ಪ್ರೇರಿತ. ಅವರು ರಾಮಮಂದಿರಕ್ಕಾಗಿ ವೈಯಕ್ತಿಕ ಜೀವನವನ್ನೇ ತ್ಯಜಿಸಿದ್ದರು’ ಎಂದರು.

ದೇಣಿಗೆ ಹಣ ಕದ್ದ ತಪ್ಪಿತಸ್ಥರನ್ನು ಸುಮ್ಮನೆ ಬಿಡಲ್ಲ: ಬಿಜೆಪಿ

ನವದೆಹಲಿ: ‘ರಾಮಮಂದಿರದ ದೇಣಿಗೆ ಕದ್ದ ಆರೋಪಿಗಳು ಈಗ ಕೇವಲ ಕಾನೂನು ತನಿಖೆ ಮಾತ್ರವಲ್ಲ. ಸಮಾಜದ ವಿರೋಧವನ್ನೂ ಎದುರಿಸುತ್ತಿದ್ದಾರೆ. ದೇಣಿಗೆ ಕಳ್ಳತನ ವಿಚಾರದಲ್ಲಿ ತಪ್ಪಿತಸ್ಥರನ್ನು ಸುಮ್ಮನೆ ಬಿಡಲ್ಲ’ ಎಂದು ಬಿಜೆಪಿ ಹೇಳಿದೆ.ಆರೋಪಿಗಳ ಪರ ವಕಾಲತ್ತಿಗೆ ವಕೀಲರು ಹಿಂದೆ ಸರಿದ ಬೆನ್ನಲ್ಲೇ ಇದನ್ನು ಸ್ವಾಗತಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ ಹಾಗೂ ತುಹಿನ್ ಸಿನ್ಹಾ ಪ್ರತಿಕ್ರಿಯಿಸಿ, ‘ಅಯೋಧ್ಯೆಯಲ್ಲಿ ಲೂಟಿ ಮಾಡಿದ ಆರೋಪ ಹೊತ್ತಿರುವವರು ಕಾನೂನು ತನಿಖೆ ಜತೆಗೆ ಸಮಾಜದ ಬಹಿಷ್ಕಾರವನ್ನೂ ಎದುರಿಸುತ್ತಿದ್ದಾರೆ. ಇದು ಹಿಂದೂ ಸಮಾಜದಿಂದ ಬಂದಿರುವ ಪ್ರಬಲ ಸಂದೇಶ. ಈ ಪ್ರಕರಣ ಕಾನೂನಿನ ಪ್ರಕಾರವೇ ಮುಂದುವರೆಯುತ್ತದೆ, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲಾಗುವುದು’ ಎಂದರು.

ಮಂದಿರ ದೇಣಿಗೆ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ 

ನವದೆಹಲಿ: ರಾಮಮಂದಿರ ದೇಣಿಗೆ ಅವ್ಯವಹಾರದ ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ‘ಆಕಾಶವೇನೂ ಬೀಳಲ್ಲ. ಅಷ್ಟೊಂದು ಆತುರವೇಕೆ?’ ಎಂದು ಅರ್ಜಿದಾರರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಬೇಸಿಗೆ ರಜೆ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ವಕೀಲರಾದ ಅಜಯ್‌ ಕುಮಾರ್‌ ರಾಯ್‌ ಮತ್ತು ದಿನೇಶ್‌ ಕುಮಾರ್‌ ಯಾದವ್‌ ಎಂಬುವವರು, ಮಂದಿರದಲ್ಲಿ ನಡೆದಿದ್ದ ಹಣ ದುರುಪಯೋಗದ ಬಗ್ಗೆ ಸಿಬಿಐ ನೇತೃತ್ವದ ಎಸ್‌ಐಟಿ ತನಿಖೆ ನಡೆಸಬೇಕು. ಇದು ಸಾರ್ವಜನಿಕರ ವಿಶ್ವಾಸ ಹೆಚ್ಚಿಸುತ್ತದೆ ಎಂದು ಅರ್ಜಿ ಸಲ್ಲಿಸಿದ್ದರು.

ಜತೆಗೆ ,‘ಅಕ್ರಮ ಕುರಿತ ವರದಿಗಳು ಜನರಲ್ಲಿ ಕಳವಳಕ್ಕೆ ಕಾರಣವಾಗಿದೆ. ಇದು ನಂಬಿಕೆಗೆ ಸಂಬಂಧಿಸಿದ ವಿಚಾರ. ಹಾಗಾಗಿ ತನಿಖಾ ತಂಡವು ಸಾರ್ವಜನಿಕರಲ್ಲಿ ಭರವಸೆ ಮೂಡಿಸುವಂತಿರಬೇಕು’ ಎಂದೂ ಹೇಳಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಎಂ. ಎಂ. ಸುಂದರೇಶ್‌ ಮತ್ತು ಶೀಲ್‌ ನಾಗು ನೇತೃತ್ವದ ದ್ವಿಸದಸ್ಯ ಪೀಠ, ‘ಆಕಾಶವೇನೂ ಉರುಳಿ ಬೀಳಲ್ಲ, ಇಷ್ಟೊಂದು ಆತುರವೇಕೆ?’ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಇದೇ ಸಂದರ್ಭದಲ್ಲಿ ಬೇಸಿಗೆ ರಜೆ ನಂತರ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿತು.

ದೇಣಿಗೆ ಕಳ್ಳತನ ಬಗ್ಗೆ ಫೇಸ್ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌: ಓರ್ವನ ಬಂಧನ

ಬಲ್ಲಿಯಾ (ಉ.ಪ್ರ.): ಅಯೋಧ್ಯೆ ರಾಮಮಂದಿರ ದೇಣಿಗೆ ವಿವಾದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆತನ ಮೇಲೆ ಎಫ್‌ಐಆರ್ ದಾಖಲಾಗಿದೆ.ಇಲ್ಲಿನ ಪರಮಂದಪುರದ ನಿವಾಸಿ 28 ವರ್ಷದ ಇರ್ಷಾದ್‌ ಅಲಿ ಬಂಧಿತ ಆರೋಪಿ. ಈತ ಫೇಸ್‌ಬುಕ್‌ನಲ್ಲಿ ಕೋಮು ಸಾಮರಸ್ಯ ಕದಡುವ, ದ್ವೇಷ ಹರಡುವ ಪೋಸ್ಟ್‌ ಮಾಡಿದ್ದಾರೆಂದು ಆರೋಪಿಸಿ ವಿವೇಕ್‌ ಕುಮಾರ್‌ ಪಾಠಕ್‌ ಎನ್ನುವವರು ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಕೋತ್ವಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಲಿಯನ್ನು ಬಂಧಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋಮ್ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು
ಮದುವೆ ಖರ್ಚಿಗೆ ಕೇತನ್‌ ಬಳಿ 1 ಕೋಟಿ ರು.ಪೀಕಿದ್ದ ಸಿಯಾ!