ಸಾಲಗಾರಿಗೆ ರಿಲೀಫ್‌: ಬಡ್ಡಿದರ ಶೇ.0.25ರಷ್ಟು ಇಳಿಕೆ

KannadaprabhaNewsNetwork | Published : Apr 10, 2025 1:03 AM

ಸಾರಾಂಶ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸತತ 2ನೇ ದ್ವೈಮಾಸಿಕದಲ್ಲೂ ಬಡ್ಡಿ ದರ ಇಳಿಸಿದ್ದು, ಶೇ.0.25ರಷ್ಟು ಬಡ್ಡಿದರ ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಬಡ್ಡಿ ದರ (ರೆಪೋ ದರ) ಶೇ.6.25ರಿಂದ ಶೇ.6ಕ್ಕೆ ಇಳಿದಿದೆ. ಇದು ಮನೆ, ವಾಹನ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ನಿರಾಳತೆ ಉಂಟು ಮಾಡಲಿದೆ. ಆದರೆ ಇದೇ ವೇಳೆ ಠೇವಣಿ ಮೇಲಿನ ಬಡ್ಡಿದರಗಳೂ ಕಡಿಮೆ ಆಗಲಿವೆ.

- ಸತತ 2ನೇ ಬಾರಿಯೂ ಬಡ್ಡಿ ಇಳಿಸಿದ ಆರ್‌ಬಿಐ- ಜಿಡಿಪಿ ಶೇ.6.5, ಹಣದುಬ್ಬರ ಶೇ.4ರ ಅಂದಾಜುಪಿಟಿಐ ಮುಂಬೈಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸತತ 2ನೇ ದ್ವೈಮಾಸಿಕದಲ್ಲೂ ಬಡ್ಡಿ ದರ ಇಳಿಸಿದ್ದು, ಶೇ.0.25ರಷ್ಟು ಬಡ್ಡಿದರ ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಬಡ್ಡಿ ದರ (ರೆಪೋ ದರ) ಶೇ.6.25ರಿಂದ ಶೇ.6ಕ್ಕೆ ಇಳಿದಿದೆ. ಇದು ಮನೆ, ವಾಹನ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ನಿರಾಳತೆ ಉಂಟು ಮಾಡಲಿದೆ. ಆದರೆ ಇದೇ ವೇಳೆ ಠೇವಣಿ ಮೇಲಿನ ಬಡ್ಡಿದರಗಳೂ ಕಡಿಮೆ ಆಗಲಿವೆ.ಆರ್‌ಬಿಐ ನಿರ್ಧಾರದ ಬೆನ್ನಲ್ಲೇ ಯುಕೋ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್‌ ಇಂಡಿಯಾ ಬಡ್ಡಿ ದರವನ್ನುಶೇ.0.25ರಷ್ಟು ಇಳಿಸಿವೆ.ಫೆಬ್ರವರಿಯಲ್ಲಿ ನಡೆದ ತನ್ನ ಕೊನೆಯ ನೀತಿಯಲ್ಲಿ, ಆರ್‌ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ.6.25ಕ್ಕೆ ಇಳಿಸಿತ್ತು.ಹಣದುಬ್ಬರ ಶೇ.4ರ ಆಸುಪಾಸು ಇರಬೇಕು ಎಂಬದು ಆರ್‌ಬಿಐ ಗುರಿ ಆಗಿದ್ದು, ಈಗ ಶೇ.4ಕ್ಕಿಂತ ಕೆಳಗಿಳಿದಿರುವ ಕಾರಣ (ಫೆಬ್ರವರಿಯಲ್ಲಿ ಶೇ.3.6ಕ್ಕೆ ಇಳಿದಿತ್ತು) ಮತ್ತೆ ಬಡ್ಡಿದರ ಇಳಿಸಿದೆ. ಇದೇ ವೇಳೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ್ಡಿದರ ಇಳಿಕೆ ಆಗಬಹುದು ಎಂದು ವಿತ್ತ ನೀತಿ ಪ್ರಕಟಿಸಿದ ಆರ್‌ಬಿಐ ನೂತನ ಗವರ್ನರ್‌ ಸಂಜಯ ಮಲ್ಹೋತ್ರಾ ಹೇಳಿದ್ದಾರೆ. ಜೂನ್‌ ಮೊದಲ ವಾರ ಮುಂದಿನ ದ್ವೈಮಾಸಿಕ ಸಭೆ ಇದೆ.ಜಿಡಿಪಿ ಇಳಿಕೆ ಸಂಭವ:

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ವಸ್ತುಗಳ ಮೇಲೆ ಶೇ.26ರಷ್ಟು ಆಮದು ಸುಂಕ ಹೇರಿರುವುದು ದೇಶದ ರಫ್ತು ವಲಯದ ಮೇಲೆ ಪರಿಣಾಮ ಉಂಟು ಮಾಡಬಹುದು ಎಂದು ಆರ್‌ಬಿಐ ಆತಂಕ ವ್ಯಕ್ತಪಡಿಸಿದೆ.ಇದೇ ಕಾರಣ ಜಿಡಿಪಿ ಅಂದಾಜನ್ನು ಆರ್‌ಬಿಐ ಹಿಂದಿನ ಶೇ.6.7ರಿಂದ ಶೇ.6.5ಕ್ಕೆ ಇಳಿಕೆ ಮಾಡಿದೆ. ಇನ್ನು ಹಣದುಬ್ಬರ ಈ ಮುಂಚಿನ ಶೇ.4.2ರ ಬದಲು ಶೇ.4ರ ಆಸುಪಾಸು ಇರುವ ನಿರೀಕ್ಷೆ ಇದೆ ಎಂದಿದೆ.

ಯುಪಿಐ ವಹಿವಾಟು ಮಿತಿ ಹೆಚ್ಚಳ:

ಈ ನಡುವೆ, ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಯುಪಿಐ ವಹಿವಾಟು ಮಿತಿ ಹೆಚ್ಚಿಸಲು ಆರ್‌ಬಿಐ, ಎನ್‌ಪಿಸಿಐಗೆ ಅನುಮತಿ ನೀಡಿದೆ. ಪ್ರಸ್ತುತ, ವ್ಯಕ್ತಿಯಿಂದ ವ್ಯಕ್ತಿಗೆ (ಪಿ2ಪಿ) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) 1 ಲಕ್ಷ ರು. ವಹಿವಾಟು ಮಿತಿ ಇದೆ. ಹೆಚ್ಚಳದ ಮೊತ್ತ ಎಷ್ಟೆಂದು ನಿರ್ಧರಿಸಲು ಎನ್‌ಪಿಸಿಐಗೆ ಅದು ಸೂಚಿಸಿದೆ. ಆದರೆ ಪಿ2ಪಿ ವಹಿವಾಟು ಮಿತಿ ₹1ಲಕ್ಷಕ್ಕೇ ಮುಂದುವರಿಯುತ್ತದೆ.

Share this article