ಎಲ್ಲ ಕಾರ್ಮಿಕರು ಸುರಕ್ಷಿತ, 2ನೇ ದಿನವೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿವಾಕಿ ಟಾಕಿ ಮೂಲಕ ಕಾರ್ಮಿಕರ ಜತೆ ಸಂವಹನ
ಉತ್ತರಕಾಶಿ (ಉತ್ತರಾಖಂಡ): ಇಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು ಬಿದ್ದ ನಂತರ ಸಿಕ್ಕಿಬಿದ್ದಿರುವ ಎಲ್ಲ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರೊಂದಿಗೆ ಸಂವಹನ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರ ರಕ್ಷಣೆಗೆ ಇನ್ನೂ ಎರಡು ದಿನ ಬೇಕಾಗಬಹುದು ಎಂದು ರಕ್ಷಣಾ ತಂಡ ಹೇಳಿದೆ.ಈ ನಡುವೆ ಸೋಮವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ್ದಾರೆ ಹಾಗೂ ಎಲ್ಲರನ್ನೂ ರಕ್ಷಿಸುವ ಭರವಸೆ ನೀಡಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ’ಕಾರ್ಮಿಕರನ್ನು ರಕ್ಷಿಸುವ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ರಕ್ಷಣಾ ಪಡೆಗಳು ಅವರಿಗೆ ರಾತ್ರಿಯಿಡೀ ಆಹಾರ ಮತ್ತು ನೀರನ್ನು ಒದಗಿಸಿವೆ. ಹೀಗಾಗಿ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರನ್ನು ವಾಕಿ-ಟಾಕಿಯಲ್ಲಿ ಹಲವಾರು ಬಾರಿ ಸಂಪರ್ಕಿಸಲಾಗಿದೆ. ಮತ್ತು ಅವರಿಗೆ ಖಾದ್ಯಗಳು ಮತ್ತು ಕುಡಿವ ನೀರು ಸರಬರಾಜು ಮಾಡಲಾಗಿದೆ. ನೀರಿನ ಪೈಪ್‌ಲೈನ್ ಮೂಲಕ ಸಾಕಷ್ಟು ಆಮ್ಲಜನಕ ಲಭ್ಯವಾಗಿರುವುದರಿಂದ ಕಾರ್ಮಿಕರ ಸುರಕ್ಷತೆ ಬಗ್ಗೆ ಭರವಸೆ ಇದೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರದ ವೇಳೆಗೆ ಕಾರ್ಮಿಕರ ರಕ್ಷಣೆ ಆಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ನಿರ್ಮಾಣ ಹಂತದ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್‌ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಿಸಲಾಗುತ್ತಿರುವ ಸುರಂಗದ ಒಂದು ಭಾಗವು ಭಾನುವಾರ ಬೆಳಿಗ್ಗೆ ಕುಸಿದಿತ್ತು. ಇದರಲ್ಲಿ ಕೆಲಸ ಮಾಡುತ್ತಿದ್ದ 40 ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿದ್ದರು. ಇವರಲ್ಲಿ ಹೆಚ್ಚಿನವರು ಉತ್ತರ ಭಾರತ ಮೂಲದವರು.===ಸ್ಟೀಲ್ ಪೈಪ್ ಮೂಲಕ ರಕ್ಷಣೆ ತಂತ್ರಮಣ್ಣು ಕುಸಿದ ಜಾಗದಲ್ಲಿ ಜಾಗದಿಂದ, ಮಣ್ಣು ತೆಗೆದಷ್ಟೂ ಕುಸಿತ ಸಂಭವಿಸುತ್ತಲೇ ಇದೆ. ಹೀಗಾಗಿ ಮೊದಲು ಆ ಭಾಗಕ್ಕೆ ಭಾರೀ ಪ್ರಮಾಣದ ಕಾಂಕ್ರಿಟ್ ಹಾಕಿ ಆ ಜಾಗವನ್ನು ಭದ್ರ ಪಡಿಸುವ ಕೆಲಸ ಮಾಡಲಾಗುತ್ತಿದೆ. ಬಳಿಕ 800 ಮಿ.ಮೀ ಸುತ್ತಳತೆ ಹೊಂದಿರುವ ಸ್ಟೀಲ್ ಪೈಪ್ ಒಂದನ್ನು ಕುಸಿದ ಅವಶೇಷಗಳ ನಡುವೆ ತೂರಿಸಿ ಅದರ ಮೂಲಕ ಕಾರ್ಮಿಕರನ್ನು ರಕ್ಷಣೆ ಮಾಡುವ ತಂತ್ರವನ್ನು ಸುರಂಗ ನಿರ್ಮಾಣ ಕಂಪನಿ ರೂಪಿಸಿದೆ.