ಆರ್‌ಜೆಡಿ ಅಧಿಕಾರಕ್ಕೆ ಬಂದ್ರೆ ಜನರ ತಲೆಗೆ ಬಂದೂಕು
ಆರ್‌ಜೆಡಿಯಿಂದ ಜನ ಗೂಂಡಾಗಳಾಗಲು ಪ್ರೇರಣೆದಾಖಲೆ ಮತದಾನ ವಿಪಕ್ಷಗಳ ನಿದ್ದೆ ಕೆಡಿಸಿದೆ
ಪ್ರಮಾಣವಚನಕ್ಕೆ ಮತ್ತೆ ಬರುವೆ: ಮೋದಿ ವಿಶ್ವಾಸಪಿಟಿಐ ಸೀತಾಮಢಿ/ ಬೆಟ್ಟಿಯಾ
ಬಿಹಾರ ಮತಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಮೈತ್ರಿಕೂಟದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ‘ಬಿಹಾರದಲ್ಲಿ ಆರ್‌ಜೆಡಿ ಹಾಗೂ ಅದರ ಮೈತ್ರಿಪಕ್ಷಗಳು ಅಧಿಕಾರಕ್ಕೇರಿದರೆ ಜನರ ತಲೆಗೇ ಅವರು ಕಟ್ಟಾ (ಬಂದೂಕು) ಹಿಡಿಯುತ್ತಾರೆ’ ಎಂದು ಹರಿಹಾಯ್ದಿದ್ದಾರೆ.ಬಿಹಾರದ ವಿವಿಧ ಸ್ಥಳಗಳಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ಅವರು, ‘ನಾನು ಎಲ್ಲಿಗೆ ಹೋದರೂ ಜನರು, ‘ನಮಗೆ ಬಂದೂಕು ಹಿಡಿಯುವ ಸರ್ಕಾರ ಬೇಡ. ಮತ್ತೆ ಎನ್‌ಡಿಎ ಸರ್ಕಾರ ಬೇಕು’ ಎಂದು ಜನರು ಹೇಳುತ್ತಿದ್ದಾರೆ. ಜನರು ತಮ್ಮ ತಲೆಯ ಮೇಲೆ ಬಂದೂಕು ಹಿಡಿಯುವಂತೆ ಹೇಳಿ ‘ಕೈ’ ಎತ್ತಿ ಹಿಡಿಯುವಂತೆ (ಹ್ಯಾಂಡ್ಸಪ್) ಹೇಳುವ ಆಡಳಿತ ಬಯಸುವುದಿಲ್ಲ. ಮಕ್ಕಳಿಗೆ ಶಾಲಾ ಬ್ಯಾಗ್, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್, ಹಾಕಿ ಸ್ಟಿಕ್ ನೀಡುವ, ಸ್ಟಾರ್ಟ್‌ಅಪ್‌ಗಳನ್ನು ನೀಡುವ ಎನ್‌ಡಿಎ ಸರ್ಕಾರವನ್ನು ಬಯಸುತ್ತಾರೆ. ಎನ್‌ಡಿಎ ಈ ಬಂದೂಕು ಆಡಳಿತಕ್ಕೆ ಅಂತ್ಯ ಹಾಡಲಿದೆ’ ಎಂದು ಗುಡುಗಿದರು.ಇದೇ ವೇಳೆ ಬಿಹಾರದಲ್ಲಿ ನಡೆಯುವ ಎನ್‌ಡಿಎ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಮತ್ತೆ ಬರುತ್ತೇನೆ ಎನ್ನುವ ಮೂಲಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
‘ಆರ್‌ಜೆಡಿಯವರು ಮಕ್ಕಳು ದೊಡ್ಡವರಾದ ಮೇಲೆ ಬೀದಿ ಗೂಂಡಾಗಳ (ರಂಗ್ದಾರ್) ರೀತಿ ಬೆಳೆಯುವಂತೆ ಕರೆ ನೀಡುತ್ತಿತ್ತಾರೆ. ಇದು ನಡುಕ ಹುಟ್ಟಿಸುವಂತಿದೆ. ಹೀಗೆ ಬಂದೂಕು ಸಂಸ್ಕೃತಿಯ, ದುರಾಡಳಿತ ನೀಡುವ, ಕ್ರೌರ್ಯ ಮೆರೆಯುವ, ಭ್ರಷ್ಟಾಚಾರ ನಡೆಸುವ ಸರ್ಕಾರವನ್ನು ಬಿಹಾರದ ಜನತೆ ಎಂದಿಗೂ ಬಯಸುವುದಿಲ್ಲ’ ಎಂದರು.ಇದೇ ವೇಳೆ ಮೊದಲ ಹಂತದಲ್ಲಿ ನಡೆದ ಮತದಾನ ವಿಪಕ್ಷಗಳ ನಿದ್ದೆ ಕೆಡಿಸಿದೆ ಎಂದಿರುವ ಅವರು, ‘ ಶೇ.65ರಷ್ಟು ಮತದಾನ ನಡೆದಿರುವುದಕ್ಕೆ ವಿಪಕ್ಷಗಳು ಆಘಾತಕ್ಕೆ ಒಳಗಾಗಿವೆ. ಅವರು ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ. 2ನೇ ಹಂತದಲ್ಲಿ ಆ ದಾಖಲೆಯನ್ನೂ ಮುರಿಬೇಕು’ ಎಂದು ಕರೆ ನೀಡಿದರು.ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆಯ ಅಡಿ ಪ್ರತಿ ಮಹಿಳೆಯರ ಖಾತೆಗೆ 10,000 ರು. ವರ್ಗಾವಣೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ‘ಜಂಗಲ್ ರಾಜ್ಯದವರು ಇದನ್ನು ಎಂದಿಗೂ ಊಹಿಸುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನ ನಾಮ್‌ದಾರ್ (ರಾಹುಲ್ ಗಾಂಧಿ) ತಂದೆ ಪ್ರಧಾನಿಯಾಗಿದ್ದಾಗ ಸರ್ಕಾರ ನೀಡುವ ಪ್ರತಿ 1 ರು. ಹಣದಲ್ಲಿ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು. ಈ ಲೂಟಿಯ ಹಿಂದೆ ರಕ್ತಸಿಕ್ತ ಕೈಗಳಿವೆ’ ಎಂದು ವಾಗ್ದಾಳಿ ನಡೆಸಿದರು.==
ಮೋದಿಯಿಂದ ಪ್ರಧಾನಿ ಹುದ್ದೆ ಘನತೆಗೆ ಕುಂದು: ಪ್ರಿಯಾಂಕಾವಿಪಕ್ಷ ಬಗ್ಗೆ ಬಂದೂಕು ಪದ ಬಳಸಿದ್ದಕ್ಕೆ ಕಿಡಿ
ಪಿಟಿಐ ಕಟಿಹಾರ್
‘ಇಂಡಿಯಾ ಕೂಟ ಗೆದ್ದರೆ ಮತದಾರರ ತಲೆಗೆ ಕಟ್ಟಾ (ಬಿಹಾರಿ ಸ್ಥಳೀಯ ಭಾಷೆಯಲ್ಲಿ ಬಂದೂಕು) ಹಿಡಿಯುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಮಾತಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ ‘ಕಟ್ಟಾದಂಥ ಪದಗಳನ್ನು ಬಳಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆಯುತ್ತಿಲ್ಲ’ ಎಂದಿದ್ದಾರೆಶನಿವಾರ ಕಾಂಗ್ರೆಸ್ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಈ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲಿಯೇ ಯುದ್ಧವನ್ನು ಈಗ ಕಾಂಗ್ರೆಸ್ ಎದುರಿಸುತ್ತಿದೆ. ಒಂದು ಕಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಿಂಸೆ ಪ್ರತಿಪಾದಿಸುವ ವಂದೇ ಮಾತರಂ ಗೀತೆಯನ್ನು ಶ್ಲಾಘಿಸುತ್ತಾರೆ. ಮತ್ತೊಂದು ಕಡೆಯಲ್ಲಿ ಬಂದೂಕಿನ ಬಗ್ಗೆ ಮಾತನಾಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಎನ್‌ಡಿಎ ಸರ್ಕಾರ ಯುವಕರಿಗೆ ಉದ್ಯೋಗವನ್ನು ನೀಡುವಲ್ಲಿ ವಿಫಲವಾಗಿದೆ ಮತ್ತು ಸಾರ್ವಜನಿಕ ವಲಯದ ಉದ್ಯಮವನ್ನು ಇಬ್ಬರು ಕಾರ್ಪೋರೇಟ್ ಸ್ನೇಹಿತರಿಗೆ ಹಸ್ತಾಂತರಿಸಿದ್ದಾರೆ. ಮಹಿಳೆಯರಿಗೆ 10,000 ರು. ‘ಲಂಚ’ ನೀಡಿ ಮತಗಳನ್ನು ನೀಡಿ ಪಡೆಯಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ’ ಎಂದು ಇತ್ತೀಚೆಗೆ ಮೋದಿ ಚಾಲನೆ ನೀಡಿದ್ದ 10 ಸಾವಿರ ರು. ಸಹಾಯಧನ ಯೋಜನೆ ಬಗ್ಗೆ ಕಿಡಿ ಕಾರಿದರು.
==ಬಿಹಾರದಲ್ಲಿ ಜಯಿಸುವ ಮೋದಿ, ಶಾ ಭವಿಷ್ಯ ಸುಳ್ಳು: ಖರ್ಗೆ
ಅಬ್ ಕೀ 400 ಪಾರ್ ಎಂದಿದ್ದವರ ಕಥೆ ಏನಾಯ್ತ?ಪಿಟಿಐ ಗಯಾ/ ಪಟನಾ
‘ಬಿಹಾರದಲ್ಲಿ ಎನ್‌ಡಿಎ 160ಕ್ಕೂಹೆಚ್ಚು ಸೀಟು ಗಳಿಸಿ ಅಧಿಕಾರಕ್ಕೆ ಬರಲಿದೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸುಳ್ಳಾಗಲಿದೆ. ಲೋಕಸಭೆಯಲ್ಲಿ ಅಬ್ ಕೀ ಬಾರ್ 400 ಪಾರ್ ಎಂದಿದ್ದ ಬಿಜೆಪಿ ಕೊನೆಗೆ ಮೈತ್ರಿ ಸರ್ಕಾರ ರಚಿಸಬೇಕಾಯಿತು ಎಂಬುದೇ ಇದಕ್ಕೆ ನಿದರ್ಶನ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.ಪಿಟಿಐ ವಿಡಿಯೋಸ್ ಜತೆಗೆ ಈ ಬಗ್ಗೆ ಮಾತನಾಡಿದ ಅವರು, ‘ನರೇಂದ್ರ ಮೋದಿಯವರು ಏನು ಬೇಕಿದ್ದರೂ ಹೇಳಬಹುದು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅಬ್ ಕೀ ಬಾರ್ 400 ಪಾರ್ ( ಈ ಬಾರಿ 400 ದಾಟಲಿದ್ದೇವೆ) ಎನ್ನುತ್ತಲೇ ಇದ್ದರು. ಆದರೆ ಬಹುಮತ ಪಡೆಯದೆ ಅಧಿಕಾರಕ್ಕಾಗಿ ಜೆಡಿಯು, ಟಿಡಿಪಿ ಸೇರಿದಂತೆ ಮಿತ್ರ ಪಕ್ಷಗಳನ್ನು ಅವಲಂಬಿಸಬೇಕಾಯಿತು’ ಎಂದರು.
==ಬಿಹಾರದಲ್ಲಿ ಬೀದಿ ಬದಿ ವಿವಿಪ್ಯಾಟ್ ಮತ: ಅಧಿಕಾರಿ ಸಸ್ಪೆಂಡ್
ಸಮಸ್ತಿಪುರ: ಬಿಹಾರದ ಸಮಸ್ತಿಪುರ ಜಿಲ್ಲೆಯ ಸರೈರಂಜನ್ ವಿಧಾನಸಭಾ ಕ್ಷೇತ್ರದಲ್ಲಿ ವಿವಿಪ್ಯಾಟ್‌ನ ಮತಚೀಟಿಗಳು ಬೀದಿಯಲ್ಲಿ ರಾಶಿರಾಶಿಯಾಗಿ ಬಿದ್ದ ಘಟನೆ ನಡೆದಿದೆ. ಪರಿಣಾಮ ಜಿಲ್ಲಾಧಿಕಾರಿಯು ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದು, ಎಫ್ಐಆರ್ ದಾಖಲಿಸಿದ್ದಾರೆ.ಸೈರಂಗ್ ಸರೈರಂಜನ್ ಕ್ಷೇತ್ರದ ಕಾಲೇಜೊಂದರ ಬಳಿ ವಿವಿಪ್ಯಾಟ್ ಚೀಟಿಗಳ ರಾಶಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಆಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದು ಅಣಕು ಮತದಾನದ ಚೀಟಿಗಳಾಗಿದ್ದು, ನಿಜ ಮತದಾನಕ್ಕೂ ಇದಕ್ಕೆ ಯಾವುದೇ ಸಂಬಂಧವಿಲ್ಲ. ನ.6ರ ಚುನಾವಣೆಯ ವಿವಿಪ್ಯಾಟ್‌ಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಆದರೂ ನಿರ್ಲಕ್ಷ್ಯದ ಆಧಾರದ ಮೇಲೆ ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನು ಅಮಾನತುಗೊಳಿಸಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.==
ಬಿಹಾರ: ದಾಖಲೆ ಶೇ.65.08 ಮತದಾನಮೊದಲ ಹಂತದ ಪರಿಷ್ಕೃತ ಅಂಕಿ ಅಂಶ ಬಿಡುಗಡೆ
ಪಿಟಿಐ ಪಟನಾ
ನ.6ರಂದು ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ಪರಿಷ್ಕೃತ ಅಂಕಿ-ಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಶೇ.65.08ರಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂದು ಹೇಳಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ನಡೆದ ಅತ್ಯಧಿಕ ಮತದಾನವಾಗಿದೆ.121 ವಿಧಾನಸಭಾ ಕ್ಷೇತ್ರಗಳಿಗೆ 45,341 ಮತಗಟ್ಟೆಯಲ್ಲಿ ಮತದಾನ ನಡೆದಿತ್ತು. 3.75 ಕೋಟಿ ಮಂದಿ ಮತ ಚಲಾವಣೆಗೆ ಅರ್ಹರಾಗಿದ್ದು, ಈ ಪೈಕಿ ಶೇ.65.08ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದು ರಾಜ್ಯದಲ್ಲಿ 2020ರಲ್ಲಿ ನಡೆದ ಚುನಾವಣೆಗಿಂತ ಶೇ.7.79 ರಷ್ಟಕ್ಕಿಂತ ಹೆಚ್ಚಿನ ಪ್ರಮಾಣವಾಗಿದೆ. ಆಗ ಶೇ. 57.29ರಷ್ಟು ಮತದಾನ ನಡೆದಿತ್ತು.ಮುಜಫ್ಫರ್‌ಪುರ ಹಾಗೂ ಸಮಷ್ಟಿಪುರದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಮತದಾನ ನಡೆದಿದೆ. ಇದು ರಾಜ್ಯದಲ್ಲೇ ದಾಖಲೆ.ಉಳಿದ 122 ಕ್ಷೇತ್ರಗಳಿಗೆ ನ.11ರಂದು ಮತದಾನ ನಡೆಯಲಿದ್ದು, 14ಕ್ಕೆ 243 ಕ್ಷೇತ್ರಗಳ ಫಲಿತಾಂಶ ಹೊರ ಬೀಳಲಿದೆ.