ತಿಮ್ಮಪ್ಪನ ಹುಂಡಿಯಿಂದ ವೈಎಸ್ಸಾರ್‌ ಕಾಂಗ್ರೆಸ್‌ ₹ 100 ಕೋಟಿ ಕಳವು : ಬಿಜೆಪಿ ಆರೋಪ

KannadaprabhaNewsNetwork |  
Published : Sep 22, 2025, 01:03 AM ISTUpdated : Sep 22, 2025, 04:34 AM IST
ಕಳವು | Kannada Prabha

ಸಾರಾಂಶ

ಜಗನ್‌ ಮೋಹನ್‌ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ 5 ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನ ಕಾಣಿಕೆ ಹುಂಡಿಯಿಂದ 100 ಕೋಟಿ ರು.ಗೂ ಅಧಿಕ ಲೂಟಿ ಮಾಡಿದೆ ಎಂದು ಟಿಟಿಡಿ ಮಂಡಳಿಯ ಸದಸ್ಯರೂ ಆಗಿರುವ ಬಿಜೆಪಿ ನಾಯಕ ಭಾನು ಪ್ರಕಾಶ್‌ ರೆಡ್ಡಿ ಆರೋಪಿಸಿದ್ದಾರೆ.

ತಿರುಪತಿ:  ಜಗನ್‌ ಮೋಹನ್‌ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ 5 ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನ ಕಾಣಿಕೆ ಹುಂಡಿಯಿಂದ 100 ಕೋಟಿ ರು.ಗೂ ಅಧಿಕ ಲೂಟಿ ಮಾಡಿದೆ ಎಂದು ಟಿಟಿಡಿ ಮಂಡಳಿಯ ಸದಸ್ಯರೂ ಆಗಿರುವ ಬಿಜೆಪಿ ನಾಯಕ ಭಾನು ಪ್ರಕಾಶ್‌ ರೆಡ್ಡಿ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಿಸಿಟೀವಿ ದೃಶ್ಯಗಳನ್ನೂ ಬಿಡುಗಡೆಗೊಳಿಸಿದ್ದಾರೆ. ಇದರಲ್ಲಿ ಹಣವನ್ನು ಕದ್ದು ಇರಿಸಿಕೊಳ್ಳುವ ದೃಶ್ಯಗಳಿವೆ.

‘ದೇವಸ್ಥಾನದ ಸಿಬ್ಬಂದಿ ರವಿಕುಮಾರ್‌ ಎಂಬುವರು ಹುಂಡಿಯಿಂದ ನಗದು ಕದ್ದಿದ್ದರು. ಲೂಟಿ ಮಾಡಿದ ಹಣವನ್ನು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ, ಅಕ್ರಮ ಹಣ ಜಗನ್‌ ಅವರಿಗೆ ಸೇರುವಂತೆ ಮಾಡಲಾಗಿತ್ತು. ಅದರ ಸಾಕ್ಷಿಗಳನ್ನೆಲ್ಲಾ ನಾಶಪಡಿಸಲಾಯಿತು. 2019ರಿಂದ 2024ರ ವರೆಗೆ ಇದು ನಡೆದಿದ್ದು, ಟಿಟಿಡಿ ಇತಿಹಾಸದಲ್ಲಿ ನಡೆದ ಭಕ್ತರ ಬೃಹತ್ ಲೂಟಿ ಇದಾಗಿದೆ’ ಎಂದಿದ್ದಾರೆ.

ಟಿಡಿಪಿ ನಾಯಕ ನಾರಾ ಲೋಕೇಶ್‌ ಕೂಡ ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈಎಸ್‌ಆರ್‌ಸಿಪಿಯ ಹಿರಿಯ ನಾಯಕರು ಮತ್ತು ಅಧಿಕಾರಿಗಳನ್ನು ಒಳಗೊಂಡಿದ್ದ ಈ ಹಗರಣದ ವಿಚಾರಣೆಯನ್ನು ಮೊದಲು ಲೋಕಾಯುಕ್ತ ವಹಿಸಿಕೊಂಡಿತ್ತು. ಬಳಿಕ ಇದನ್ನು ಹೈಕೋರ್ಟ್‌ ಸಿಐಡಿಗೆ ವರ್ಗಾಯಿಸಿ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ರೆಡ್ಡಿ ಹೇಳಿದ್ದಾರೆ.

ಮೀಸಲು ಇಲ್ಲದ್ದೇ ಬ್ರಾಹ್ಮಣರಿಗೆ ಆಶೀರ್ವಾದ: ಗಡ್ಕರಿ

ನಾಗ್ಪುರ: ‘ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು. ಇದೇ ಕಾರಣಕ್ಕೆ ನನ್ನ ಸಮುದಾಯಕ್ಕೆ ಜಾತಿ ಆಧಾರಿತ ಮೀಸಲಾತಿ ಸಿಗದಿರುವುದೇ ದೇವರು ನನಗೆ ಕೊಟ್ಟ ಅತಿದೊಡ್ಡ ಆಶೀರ್ವಾದ. ಎಂದು ನಾನು ಆಗಾಗ್ಗೆ ತಮಾಷೆ ಮಾಡುತ್ತಿರುತ್ತೇನೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ನಾಗ್ಪುರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ಮೀಸಲು ಸಿಗುತ್ತಿದ್ದರೆ ನಾನು ಯಾವುದೋ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿರುತ್ತಿದ್ದೆ, ಹೆಚ್ಚೆಂದರೆ ಅಧಿಕಾರಿಯೂ ಆಗಿಬಿಡುತ್ತಿದ್ದೆ. ಆದರೆ ನಾನು ಹಿಂದೆಯೇ ನನ್ನ ತಾಯಿಗೆ ಸ್ಪಷ್ಟವಾಗಿ ಹೇಳಿದ್ದೆ. ನಾನು ಕೆಲಸ ಮಾಡಲ್ಲ, ಕೆಲಸ ಕೊಡುವವನಾಗುತ್ತೇನೆ ಎಂದು. ನಾನು ನಂತರ ಉದ್ಯಮಕ್ಕೆ ಬಂದೆ, 15 ಸಾವಿರ ಮಂದಿಗೆ ಈಗ ಉದ್ಯೋಗ ನೀಡಿದ್ದೇನೆ’ ಎಂದರು.‘ಇದೇ ವೇಳೆ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಆದರೆ ಉತ್ತರ ಪ್ರದೇಶ, ಬಿಹಾರದಲ್ಲಿ ಬ್ರಾಹ್ಮಣ ಸಮುದಾಯದ ಅಸ್ತಿತ್ವ ದೊಡ್ಡ ಪ್ರಮಾಣದಲ್ಲಿದೆ’ ಎಂದು ಹೇಳಿದರು.

‘ನಾನು ಉತ್ತರಪ್ರದೇಶ, ಬಿಹಾರಕ್ಕೆ ಹೋದಾಗಲೆಲ್ಲ ದುಬೇ, ಮಿಶ್ರಾ, ತ್ರಿಪಾಠಿಗಳು ಹೆಚ್ಚಿನ ಅಧಿಕಾರ, ಪ್ರಭಾವ ಹೊಂದಿರುವುದನ್ನು ಕಂಡಿದ್ದೇನೆ. ಮರಾಠರು ಮಹರಾಷ್ಟ್ರದಲ್ಲಿ ಹೊಂದಿರುವಂತೆ ಬ್ರಾಹ್ಮಣರು ಆ ರಾಜ್ಯಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಭಾವ ಹೊಂದಿದ್ದಾರೆ’ ಎಂದರು.‘ಆದರೆ, ವೈಯಕ್ತಿಕವಾಗಿ ತಾವು ಜಾತಿವಾದದ ಮೇಲೆ ವಿಶ್ವಾಸ ಹೊಂದಿಲ್ಲ’ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದ ಅವರು, ‘ಯಾವುದೇ ವ್ಯಕ್ತಿ ತನ್ನ ವ್ಯಕ್ತಿತ್ವದಿಂದಾಗಿ ಶ್ರೇಷ್ಠನಾಗುತ್ತಾನೆಯೇ ಹೊರತು ತನ್ನ ಜಾತಿ, ಧರ್ಮ ಮತ್ತು ಭಾಷೆಯ ಆಧಾರದ ಮೇಲಲ್ಲ’ ಎಂದರು.

ಮಹಾ ಡಿಸಿಎಂ ಶಿಂಧೆ ಎಕ್ಸ್‌ ಖಾತೆ ಹ್ಯಾಕ್‌: ಪಾಕ್‌, ಟರ್ಕಿ ಧ್ವಜ ಪೋಸ್ಟ್‌

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆಯವರ ‘ಎಕ್ಸ್‌’ ಖಾತೆಯನ್ನು ಕಿಡಿಗೇಡಿಗಳು ಭಾನುವಾರ ಹ್ಯಾಕ್‌ ಮಾಡಿದ್ದು, ಅವರ ಖಾತೆಯಲ್ಲಿ ಪಾಕಿಸ್ತಾನ, ಟರ್ಕಿ ಧ್ವಜದ ಚಿತ್ರಗಳನ್ನು ಪೋಸ್ಟ್ ಮಾಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಪರಸ್ಪರ ಸೆಣಸಾಡಲಿದ್ದ ದಿನವೇ ಈ ಘಟನೆ ನಡೆದಿದೆ.‘ನಾವು ತಕ್ಷಣ ಸೈಬರ್‌ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದೆವು. ಶಿಂಧೆಯವರ ಎಕ್ಸ್ ಖಾತೆಯ ಉಸ್ತುವಾರಿ ಹೊತ್ತಿರುವ ನಮ್ಮ ತಂಡವು ನಂತರ ಖಾತೆಯನ್ನು ಮರುಸ್ಥಾಪಿಸಿತು. ಇದನ್ನು ಸರಿಪಡಿಸಲು 30ರಿಂದ 45 ನಿಮಿಷ ಬೇಕಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೇಜಸ್ವಿ ರ್‍ಯಾಲಿಯಲ್ಲಿ ಮೋದಿ ತಾಯಿ ವಿರುದ್ಧ ಘೋಷಣೆ

ಪಟನಾ: ತೇಜಸ್ವಿ ಯಾದವ್‌ ಅವರ ‘ಬಿಹಾರ ಅಧಿಕಾರ ಯಾತ್ರೆ’ ವೇಳೆ ಆರ್‌ಜೆಡಿ ಪಕ್ಷದ ಕಾರ್ಯಕರ್ತರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು. ವಿಡಿಯೋ ಬಿಡುಗಡೆ ಮಾಡಿದೆ. ಇದರಲ್ಲಿ 10-12 ಬಾರಿ ಹೀರೆಬೆನ್‌ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದ್ದು ಕಂಡುಬರುತ್ತದೆ.

ಆದರೆ ಇದನ್ನು ತಳ್ಳಿಹಾಕಿರುವ ಆರ್‌ಜೆಡಿ, ಇದು ನಕಲಿ ವಿಡಿಯೋ ಎಂದಿದೆ.ಈ ಮೊದಲು ದರ್ಭಂಗಾದಲ್ಲಿ ನಡೆದ ವೋಟ್‌ ಅಧಿಕಾರ ಯಾತ್ರೆ ವೇಳೆಯೂ ಮೋದಿಯವರ ತಾಯಿಯನ್ನು ನಿಂದಿಸಲಾಗಿತ್ತು ಎನ್ನಲಾಗಿತ್ತು. ಬಳಿಕ ಬಿಹಾರ ಕಾಂಗ್ರೆಸ್‌, ಮತಚೋರಿಯ ಬಗ್ಗೆ ಹೀರಾಬೇನ್‌ ಅವರು ಮೋದಿಗೆ ಬುದ್ಧಿವಾದ ಹೇಳುವಂತಹ ಎಐ ವಿಡಿಯೋ ಸೃಷ್ಟಿಸಿತ್ತು. ಇದಕ್ಕೆ ಬಿಜೆಪಿ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಬಿಹಾರ ಡಿಸಿಎಂ ಸಾಮ್ರಾಟ್‌ ಚೌಧರಿ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ‘ತೇಜಸ್ವಿ ಮತ್ತೊಮ್ಮೆ ಮೋದಿಯವರ ತಾಯಿಯನ್ನು ಅವಮಾನಿಸುವ ಮೂಲಕ ರಾಜ್ಯದ ಸಂಸ್ಕೃತಿಯನ್ನು ಹಾಳುಮಾಡಿದ್ದಾರೆ. ರ್‍ಯಾಲಿ ವೇಳೆ ಕಾರ್ಯಕರ್ತರು ಹೀರಾಬೇನ್‌ರನ್ನು ನಿಂದಿಸುತ್ತಿದ್ದರೆ ತೇಜಸ್ವಿ ಅದನ್ನು ಪ್ರೋತ್ಸಾಹಿಸುವ ಮೂಲಕ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ನೋಡಿದರು. ಇದು ಪ್ರಜಾಪ್ರಭುತ್ವಕ್ಕೆ ಆದ ಘೋರ ಅಪಮಾನ’ ಎಂದು ಕಿಡಿ ಕಾರಿದ್ದಾರೆ. ಜತೆಗೆ, ‘ಈ ಕೊಳಕು ರಾಜಕಾರಣವನ್ನು ಬಿಹಾರದ ಜನ ಅರ್ಥಮಾಡಿಕೊಂಡಿದ್ದಾರೆ. ಇದಕ್ಕೆ ಇಲ್ಲಿನ ತಾಯಂದಿರು ಮತ್ತು ಸಹೋದರಿಯರು ಪ್ರಜಾಪ್ರಭುತ್ವ ರೀತಿಯಲ್ಲಿ ಉತ್ತರಿಸುತ್ತಾರೆ’ ಎಂದರು.

ಬಳಿಕ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಚೌಧರಿ, ‘ಆರ್‌ಜೆಡಿ ಗೂಂಡಾಗಳ ಪಕ್ಷ. ಅವರು ಅಪರಾಧಿಗಳನ್ನು ರಕ್ಷಿಸುತ್ತಿದ್ದಾರೆ. ಅವಮಾನಕರ ಭಾಷೆ ಬಳಕೆಯಲ್ಲಿ ತೇಜಸ್ವಿ ಪಿಎಚ್‌ಡಿ ಮಾಡಿದ್ದಾರೆ’ ಎಂದಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತೇಜಸ್ವಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶಾದ್ಯಂತ ಅಕ್ಟೋಬರಲ್ಲಿ ಮತಪಟ್ಟಿ ವಿಶೇಷ ಪರಿಷ್ಕರಣೆ

 ನವದೆಹಲಿ ಬಿಹಾರ ಮಾದರಿಯಲ್ಲಿ ಸದ್ಯದಲ್ಲೇ ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುವುದು ಸ್ಪಷ್ಟವಾಗಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಚುನಾವಣಾ ಅಧಿಕಾರಿಗಳಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸೆ.30ರೊಳಗೆ ಸಿದ್ಧವಾಗಿರುವಂತೆ ಸ್ಪಷ್ಟ ಸೂಚನೆ ನೀಡಿದೆ. ಅಂದರೆ ಮುಂದಿನ ತಿಂಗಳು ಚುನಾವಣಾ ಆಯೋಗ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.

ಈ ತಿಂಗಳ ಆರಂಭದಲ್ಲಿ ರಾಜ್ಯಗಳ ಚುನಾವಣಾ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರು ಮುಂದಿನ 10ರಿಂದ 15 ದಿನಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಿದ್ಧವಾಗುವಂತೆ ಸೂಚಿಸಿದ್ದರು. ಆದರೆ, ಇನ್ನಷ್ಟು ಸ್ಪಷ್ಟತೆಗಾಗಿ ಸೆ.30ರ ಡೆಡ್‌ಲೈನ್‌ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.ಈ ಹಿಂದಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಳಿಕ ರಚಿಸಲಾಗಿದ್ದ ಮತದಾರರ ಪಟ್ಟಿ ಸಿದ್ಧವಾಗಿಟ್ಟುಕೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗ ಸ್ಪಷ್ಟನೆ ಸೂಚನೆ ನೀಡಿದೆ. ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗವು ಈಗಾಗಲೇ ತಮ್ಮ ವೆಬ್‌ಸೈಟ್‌ಗಳಲ್ಲಿ ಆ ಪಟ್ಟಿಯನ್ನು ಪ್ರಕಟಿಸಲು ಆರಂಭಿಸಿದೆ. ದೆಹಲಿಯಲ್ಲಿ 2008, ಉತ್ತರಾಖಂಡವು 2006ನ ಪಟ್ಟಿ ಪ್ರಕಟಿಸಿದೆ. ಬಹುತೇಕ ರಾಜ್ಯಗಳಲ್ಲಿ ಕೊನೆಯ ಬಾರಿ 2002-2004ರಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಆಗಿತ್ತು.

ಮುಂದಿನ ವರ್ಷ ಅಸ್ಸಾಂ, ಕೇರಳ, ಪಾಂಡಿಚೇರಿ, ತಮಿಳುನಾಡು, ಪಶ್ಟಿಮ ಬಂಗಾಳದ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕುತೂಹಲ ಮೂಡಿಸಿದೆ. ಈ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶ ಅಕ್ರಮ ನಿವಾಸಿಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವುದೇ ಆಗಿದೆ ಎಂದು ಹೇಳಲಾಗುತ್ತಿದೆ.

ಗಾಜಾಗೆ ಬ್ರಿಟನ್‌, ಆಸ್ಟ್ರೇಲಿಯಾ, ಕೆನಡಾ ‘ರಾಷ್ಟ್ರ ಮಾನ್ಯತೆ’

ಲಂಡನ್‌/ಟೊರಂಟೋ: ಬ್ರಿಟನ್‌, ಕೆನಡಾ ಮತ್ತು ಆಸ್ಟ್ರೇಲಿಯಾ ದೇಶಗಳು ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರ ಮಾನ್ಯತೆ ನೀಡುವ ನಿರ್ಧಾರ ಪ್ರಕಟಿಸಿವೆ. ಅಮೆರಿಕ ಹಾಗೂ ಇಸ್ರೇಲ್‌ ವಿರೋಧದ ನಡುವೆಯೂ ಅವು ಈ ನಿರ್ಧಾರ ಪ್ರಕಟಿಸಿವೆ. ‘ಯುದ್ಧಪೀಡಿತ ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ನಮ್ಮ ಈ ಘೋಷಣೆ ನೆರವಾಗಲಿದೆ’ ಎಂದು ಅವು ಹೇಳಿವೆ. ಗಾಜಾಗೆ ರಾಷ್ಟ್ರ ಮಾನ್ಯತೆ ನೀಡಿರುವ ಕಾರಣ, ಅಲ್ಲಿಗೆ ಈ ದೇಶಗಳು ಅಧಿಕೃತವಾಗಿ ನೆರವು ನೀಡಬಹುದಾಗಿದೆ. ಅಲ್ಲದೆ, ವಿಶ್ವಸಂಸ್ಥೆಯಲ್ಲೂ ಗಾಜಾಗೆ ಮನ್ನಣೆ ನೀಡುವುದಕ್ಕೆ ಬಗ್ಗೆ ಇದರಿಂದ ಮತ್ತಷ್ಟು ಬಲ ಬರಲಿದೆ.

PREV
Read more Articles on

Recommended Stories

ನಿರ್ಬಂಧ ಬಿಸಿ : ಜೈಷ್‌-ಎ-ಮೊಹಮ್ಮದ್‌ ಹೆಸರು ಬದಲಾವಣೆ!
ಅಮೆರಿಕ 88 ಲಕ್ಷ ರು. ಶುಲ್ಕ : ಹಳೆಯ ಎಚ್‌ 1ಬಿ ವೀಸಾದಾರರು ನಿರಾಳ