ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ದೇವಸ್ಥಾನ-ಮಸೀದಿ ವಿವಾದಗಳಿಗೆ ಸಂಬಂಧಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಕ್ಷೇಪ ವ್ಯಕ್ತಪಡಿಸಿದಕ್ಕೆ ಧಾರ್ಮಿಕ ನಾಯಕ, ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವು ಸಂತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೋಹನ್ ಭಾಗವತ್ ಅವರು ಸಂಘಟನೆಯೊಂದರ ಮುಖ್ಯಸ್ಥರಾಗಿರಬಹುದು. ಆದರೆ ಭಾಗವತ್ ಹೇಳಿದ್ದು ಕೇಳಲು ಅವರೇನು ಹಿಂದೂ ಧಾರ್ಮಿಕ ಮುಖಂಡರೇನಲ್ಲ ಎಂದು ಈ ತಿರುಗೇಟು ನೀಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಭದ್ರಾಚಾರ್ಯ, ‘ಹಿಂದೂಗಳಿಗೆ ಅವರ ಐತಿಹಾಸಿಕ ಆಸ್ತಿ ಸಿಗಬೇಕಿದೆ. ನಮ್ಮ ಐತಿಹಾಸಿಕ ಆಸ್ತಿಗಳೇನಿವೆಯೋ ಅವೆಲ್ಲ ನಮ್ಮದೇ. ನಾವು ಹೇಗಾದರೂ ಮಾಡಿ ಅದನ್ನು ವಾಪಸ್ ಪಡೆಯಲೇಬೇಕು. ನಮ್ಮ ಐತಿಹಾಸಿಕ ಆಸ್ತಿಯನ್ನು ಬೇರಿನ್ಯಾರಿಗೂ ನೀಡಬಾರದು’ ಎಂದು ಹೇಳಿದ್ದಾರೆ.
ಜೊತೆಗೆ ‘ಮೋಹನ್ ಭಾಗವತ್ ಹೇಳಿಕೆ ವೈಯಕ್ತಿಕವಾಗಿರಬಹುದು. ಅದು ಪ್ರತಿಯೊಬ್ಬರ ಅನಿಸಿಕೆ ಅಲ್ಲ. ಅವರು ಸಂಘಟನೆಯೊಂದರ ಮುಖಂಡರಾಗಿರಬಹುದು. ಹಾಗಂತ ಅವರು ಹೇಳಿದ್ದನ್ನೆಲ್ಲ ಕೇಳಲು ಭಾಗವತ್ ಅವರೇನು ಹಿಂದೂ ಧರ್ಮದ ನಾಯಕ ಅಲ್ಲ. ಹಿಂದೂ ಧರ್ಮಕ್ಕೆ ಸಂತರು ಮತ್ತು ಸ್ವಾಮೀಜಿಗಳು ಉತ್ತರದಾಯಿಗಳೇ ಹೊರತು ಭಾಗವತ್ ಅಲ್ಲ. ಭಾಗವತ್ ಅವರು ಹಿಂದೂ ಧರ್ಮದ ರಕ್ಷಕರಲ್ಲ. ಹಿಂದೂ ಧರ್ಮ ಧಾರ್ಮಿಕ ವಿದ್ವಾಂಸರ ಕೈಯಲ್ಲಿದೆಯೇ ಹೊರತು ಭಾಗವತ್ ಅವರ ಕೈಯಲ್ಲಲ್ಲ’ ಎಂದು ರಾಮಭದ್ರಾಚಾರ್ಯ ತಿರುಗೇಟು ನೀಡಿದ್ದಾರೆ.
ಭಾಗವತ್ ಹೇಳಿದ್ದೇನು?ಅಯೋಧ್ಯೆ ರಾಮಮಂದಿರ ನಿರ್ಮಾಣ ಬಳಿಕ ಕೆಲ ಹಿಂದೂ ನಾಯಕರು ಇದೇ ರೀತಿಯ ಹಲವು ವಿವಾದ ಕೆದಕುತ್ತಿದ್ದಾರೆ. ಈ ಮೂಲಕ ಅವರು ಹಿಂದೂ ಧರ್ಮದ ನಾಯಕರಾಗಬಹುದು ಎಂದು ಅಂದುಕೊಂಡಿದ್ದಾರೆ. ಇದು ಸ್ವೀಕಾರಾರ್ಹ ಅಲ್ಲ. ಪ್ರತಿದಿನವೂ ಮಂದಿರ-ಮಸೀದಿಗೆ ಸಂಬಂಧಿಸಿದ ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇಂಥದ್ದಕ್ಕೆ ಹೇಗೆ ಅವಕಾಶ ನೀಡಲು ಸಾಧ್ಯ? ಇದು ಮುಂದುವರಿಯಬಾರದು. ಎಲ್ಲರೂ ಒಂದಾಗಿ ಬಾಳುವುದನ್ನು ಭಾರತವು ತೋರಿಸಿಕೊಡಬೇಕಿದೆ ಎಂದು ಹೇಳಿದ್ದರು.