ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಸಿಕಂದರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಶ್ನೆಗೆ ಸಲ್ಮಾನ್ ಕಟುವಾಗಿ ಉತ್ತರಿಸಿದ್ದಾರೆ.
‘ರಶ್ಮಿಕಾ ನಿಮಗಿಂತ 31 ವರ್ಷ ಚಿಕ್ಕವರು. ಅವರೊಂದಿಗೆ ಹೇಗೆ ರೊಮ್ಯಾನ್ಸ್ ಮಾಡುತ್ತೀರಿ?’ ಎಂಬ ಪ್ರಶ್ನೆಗೆ ತಿರುಗೇಟು ನೀಡಿರುವ ಸಲ್ಲು, ‘ರೊಮ್ಯಾನ್ಸ್ ಬಗ್ಗೆ ಅವರಿಗೇ ತೊಂದರೆಯಿಲ್ಲ. ಇನ್ನು ನಿಮಗೇಕೆ ಸಮಸ್ಯೆ?’ ಎಂದು ಉತ್ತರಿಸಿದ್ದಾರೆ.
ಇದಲ್ಲದೆ, ‘ಮುಂದೆ ರಶ್ಮಿಕಾ ಅವರಿಗೆ ಮದುವೆಯಾಗಿ ಮುಂದೆ ಮಗಳಾದಲ್ಲಿ ಅವರು ದೊಡ್ಡವರಾದ ಮೇಲೆ ಆಕೆಯ ತಾಯಿ (ರಶ್ಮಿಕಾ) ಅನುಮತಿ ಪಡೆದು ಪುತ್ರಿ ಜೊತೆಯೂ ನಟಿಸುತ್ತೇನೆ’ ಎಂದು ಚಟಾಕಿ ಹಾರಿಸಿದ್ದಾರೆ.
ಟ್ವೀಟರ್‌ನ ‘ನೀಲಿ ಹಕ್ಕಿ’ ₹29 ಲಕ್ಷಕ್ಕೆ ಹರಾಜು
ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದಿಗ್ಗಜ ಎಲಾನ್ ಮಸ್ಕ್ ಅವರ ಪಾಲಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಟ್ವೀಟರ್‌ನ ‘ನೀಲಿ ಹಕ್ಕಿ’ ಲೋಗೋ ಬದಲಿಸಿ, ‘ಎಕ್ಸ್’ ಚಿಹ್ನೆ ತರಲಾಗಿತ್ತು. ಆ ವೇಳೆ ಇಲ್ಲಿನ ಮುಖ್ಯಕಚೇರಿಯಿಂದ ತೆರವುಗೊಳಿಸಲಾಗಿದ್ದ ನೀಲಿಹಕ್ಕಿ ಲೋಗೋ ಇದೀಗ 29 ಲಕ್ಷ ರು.ಗೆ ಹರಾಜಾಗಿದೆ.2023ರಲ್ಲಿ ಟ್ವೀಟರ್, ‘ಎಕ್ಸ್’ ಎಂದು ಮರುನಾಮಕರಣ ಆದಾಗ ನಡೆದ ಹರಾಜಿನಲ್ಲಿ ಆ ಲೋಗೋವನ್ನು ಪಡೆದಿದ್ದ ಆರ್‌ಆರ್ ಆಕ್ಷನ್ಸ್, ಅದನ್ನೀಗ ಮರುಹರಾಜು ಹಾಕಿದೆ. ಖರೀದಿದಾರರ ಗುರುತನ್ನು ಬಹಿರಂಗಪಡಿಸಿಲ್ಲ.
12 ಅಡಿ ಉದ್ದ, 9 ಅಡಿ ಅಗಲವಿದ್ದು 560 ಕೆ.ಜಿ. ತೂಗುವ ಈ ಚಿಹ್ನೆಯು 2012ರಿಂದ 2013ರ ವರೆಗೆ ಸ್ಯಾನ್ ಫ್ರಾನ್ಸಿಸ್ಕೋದ ಕಚೇರಿಯಲ್ಲಿತ್ತು. ಮಸ್ಕ್ ಅದನ್ನು ಖರೀದಿಸಿದ ಬಳಿಕ ಮುಖ್ಯಕಚೇರಿಯನ್ನು ಟೆಕ್ಸಾಸ್‌ಗೆ ಸ್ಥಳಾಂತರಿಸಲಾಗಿತ್ತು.
ಸಂಭಲ್ ಮಸೀದಿ ಸಮಿತಿ ಮುಖ್ಯಸ್ಥ ಅಲಿ ಬಂಧನ
ಸಂಭಲ್: ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆ ನಡೆಸುವಂತೆ ಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ನಡೆದ ಹಿಂಸಾಚಾರದ ಸಂಬಂಧ ಮಸೀದಿಯ ಸಮಿತಿ ಮುಖ್ಯಸ್ಥ ಝಾಫರ್ ಅಲಿ ಅವರನ್ನು ಬಂಧಿಸಲಾಗಿದೆ.ಮಸೀದಿ ಇರುವ ಜಾಗದಲ್ಲಿ ಹಿಂದೂ ದೇವಾಲಯ ಇತ್ತು ಎಂದು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಕುರಿತ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು.
ಇದನ್ನು ವಿರೋಧಿಸಿ ಕಳೆದ ವರ್ಷ ನ.24ರಂದು ನಡೆದ ಪ್ರತಿಭಟನೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಈ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಅಲಿ ಅವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಅತ್ತ ಬಂಧಿತ ಅಲಿ ಸಹೋದರ ತಾಹಿರ್ ಮಾತನಾಡಿ, ‘ನ್ಯಾಯಾಂಗ ಸಮಿತಿಯ ಮುಂದೆ ಸೋಮವಾರ ಸಾಕ್ಷ್ಯಗಳನ್ನು ದಾಖಲಿಸುವ ಮೊದಲೇ ಅವರನ್ನು ಜೈಲಿಗಟ್ಟಲಾಗುತ್ತಿದೆ.
ಇಲ್ಲಿನ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಇಷ್ಟವಿಲ್ಲ. ‘’ಆದಕಾರಣ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಜೊತೆಗೆ, ‘ಗಲಭೆ ವೇಳೆ ಪೊಲೀಸರು ಹಾರಿಸಿದ ಗುಂಡಿನಿಂದಲೇ ಸಾವುಗಳು ಸಂಭವಿಸಿದ್ದವು ಎಂದಿದ್ದ ಅಲಿ, ತಮ್ಮ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಧೃಡವಾಗಿ ಹೇಳಿದ್ದರು’ ಎಂದು ತಾಹಿರ್ ತಿಳಿಸಿದ್ದಾರೆ.
10 ವರ್ಷ ಬಳಿಕ ಮುತಾಲಿಕ್ ಗೋವಾ ಪ್ರವೇಶ ನಿಷೇಧ ತೆರವು
ಪಣಜಿ: 10 ವರ್ಷದ ನಂತರ ಕರ್ನಾಟಕದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇಲಿನ ಗೋವಾ ಪ್ರವೇಶ ನಿಷೇಧವನ್ನು ಗೋವಾ ಬಿಜೆಪಿ ಸರ್ಕಾರ ತೆರವುಗೊಳಿಸಿದೆ.ಇದರ ಬೆನ್ನಲ್ಲೆ, ಮುತಾಲಿಕ್ ಗೋವಾಕ್ಕೆ ಭೇಟಿ ನೀಡಿ, ಮಾಜಿ ಆರೆಸ್ಸೆಸ್ ನಾಯಕ ಹಾಗೂ ‘ಭಾರತಮಾತಾ ಕಿ ಜೈ’ ಸಂಘದ ಸಂಸ್ಥಾಪಕ ಸುಭಾಷ್ ವೆಲಿಂಗ್ಕರ್ ಅವರ ಜತೆ ಮಾತುಕತೆ ನಡೆಸಿದ್ದಾರೆ.
ಮುತಾಲಿಕ್ ಅವರ ಆಕ್ರಮಣಕಾರಿ ನಡೆ ಮತ್ತು ಹೇಳಿಕೆಗಳಿಂದ ರಾಜ್ಯದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 2014ರ ಏ.18ರಂದು ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ವರದಿ ಸಿದ್ಧಪಡಿಸಿದ್ದರು. ಆ ಬಳಿಕ ಮನೋಹರ್ ಪರ್ರಿಕರ್ ನೇತೃತ್ವದ ಸರ್ಕಾರ ಅವರ ಗೋವಾ ಪ್ರವೇಶಕ್ಕೆ ನಿಷೇಧ ಹೇರಿತ್ತು. ಇದಾದ ದಶಕದ ನಂತರ ನಿಷೇಧ ತೆರವುಗೊಂಡಿದೆ.