ಮತ್ತೆ ಲೋಕಸಭೆಯಲ್ಲಿ ಸೆಂಗೋಲ್‌ ವಿವಾದ

KannadaprabhaNewsNetwork |  
Published : Jun 28, 2024, 12:55 AM ISTUpdated : Jun 28, 2024, 04:46 AM IST
ಸೆಂಗೋಲ್‌ | Kannada Prabha

ಸಾರಾಂಶ

ಮೋದಿ-3 ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಕಳೆದ ವರ್ಷ ಲೋಕಸಭೆಯ ಸಭಾಪತಿಗಳ ಪೀಠದ ಪಕ್ಕೆ ಇರಿಸಲಾಗಿದ್ದ ತಮಿಳುನಾಡು ಮೂಲದ ‘ಸೆಂಗೋಲ್‌’ (ರಾಜದಂಡ) ಮತ್ತೆ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಮೋದಿ-3 ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಕಳೆದ ವರ್ಷ ಲೋಕಸಭೆಯ ಸಭಾಪತಿಗಳ ಪೀಠದ ಪಕ್ಕೆ ಇರಿಸಲಾಗಿದ್ದ ತಮಿಳುನಾಡು ಮೂಲದ ‘ಸೆಂಗೋಲ್‌’ (ರಾಜದಂಡ) ಮತ್ತೆ ವಿವಾದಕ್ಕೆ ಕಾರಣವಾಗಿದೆ. ‘ರಾಜಪ್ರಭುತ್ವದ ಸಂಕೇತವಾದ ರಾಜದಂಡವನ್ನು ತೆಗೆದು ಹಾಕಿ ಆ ಜಾಗದಲ್ಲಿ ಪ್ರಜಾಪ್ರಭುತ್ವದ ಸಂಕೇತವಾದ ಸಂವಿಧಾನದ ಪ್ರತಿ ಇರಿಸಬೇಕು’ ಎಂದು ಸಮಾಜವಾದಿ ಪಕ್ಷದ ಸಂಸದ ಆರ್‌.ಕೆ. ಚೌಧರಿ ಅವರು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.

ಚೌಧರಿ ಆಗ್ರಹವನ್ನು ಬಿಜೆಪಿ, ಆರ್‌ಎಲ್‌ಡಿ ಹಾಗೂ ಎಲ್‌ಜೆಪಿ ತೀವ್ರವಾಗಿ ಖಂಡಿಸಿವೆ. ‘ಇದು ತಮಿಳು ಸಂಸ್ಕೃತಿಗೆ ಅವಮಾನ. ಇಂಡಿಯಾ ಕೂಟದಲ್ಲಿ ಸಮಾಜವಾದಿ ಪಕ್ಷದ ಮಿತ್ರಪಕ್ಷವಾದ ತಮಿಳುನಾಡಿನ ಡಿಎಂಕೆ ಈ ಆಗ್ರಹವನ್ನು ಒಪ್ಪುತ್ತದೆಯೇ?’ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಪ್ರಶ್ನಿಸಿದ್ದಾರೆ. ಇನ್ನು, ‘ಸಮಾಜವಾದಿ ಪಕ್ಷಕ್ಕೆ ದೇಶದ ಸಂಸ್ಕೃತಿ ಗೊತ್ತಿಲ್ಲ’ ಎಂದು ಎಲ್‌ಜೆಪಿ ನಾಯಕ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಹಾಗೂ ಆರ್‌ಎಲ್‌ಡಿ ನಾಯಕ, ಕೇಂದ್ರ ಸಚಿವ ಜಯಂತ ಚೌಧರಿ ಕಿಡಿಕಾರಿದ್ದಾರೆ.

ಈ ನಡುವೆ, ಚೌಧರಿ ಮನವಿಯಲ್ಲಿ ಆರ್‌ಜೆಡಿ ಸಂಸದರಾದ ಮನೋಜ್‌ ಝಾ, ಮಿಸಾ ಭಾರತಿ ಹಾಗೂ ಕಾಂಗ್ರೆಸ್‌ನ ರೇಣುಕಾ ಚೌಧರಿ ಬೆಂಬಲಿಸಿದ್ದಾರೆ. ‘ಸೆಂಗೋಲ್ ಅನ್ನು ಮ್ಯೂಸಿಯಂಗೆ ಕಳುಹಿಸಬೇಕು. ಇದು ಪ್ರಜಾಪ್ರಭುತ್ವದ ಸಂಕೇತವಲ್ಲ ಆದರೆ ರಾಜಪ್ರಭುತ್ವದ ಸಂಕೇತವಾಗಿದೆ’ ಎಂದು ಮಿಸಾ ಹೇಳಿದ್ದಾರೆ.

ಕಳೆದ ವರ್ಷ ಹೊಸ ಸಂಸತ್‌ ನಿರ್ಮಾಣವಾದಾಗ ರಾಜದಂಡವನ್ನು (ಸೆಂಗೋಲ್‌) ಲೋಕಸಭೆಯ ಸಭಾಪತಿ ಪೀಠದ ಪಕ್ಕ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪಿಸಿದ್ದರು. ಭಾರತದ ಮೊದಲ ಪ್ರಧಾನಿ ಪಂ. ಜವಾಹರಲಾಲ್‌ ನೆಹರು ಅವರಿಗೆ ಬ್ರಿಟಿಷರು ಅಧಿಕಾರ ಹಸ್ತಾಂತರಿಸುವಾಗ ಸಾಂಕೇತಿಕವಾಗಿ ಸೆಂಗೋಲನ್ನು ನೀಡಿದ್ದರ ಜ್ಞಾಪಕಾರ್ಥವಾಗಿ ಇದನ್ನು ಇರಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ