ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಕ್ಕಷ್ಟೇ ಸೀಮಿತವಾಗಿ ಪಟಾಕಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶುದ್ಧಗಾಳಿ ಎಂಬುದು ರಾಷ್ಟ್ರ ರಾಜಧಾನಿಯ ಶ್ರೀಮಂತರಿಗಷ್ಟೇ ಸೀಮಿತವಾದ ಹಕ್ಕೇ ಎಂದು ಪ್ರಶ್ನಿಸಿರುವ ಕೋರ್ಟ್, ಈ ನಿಯಮವನ್ನು ದೇಶಾದ್ಯಂತ ಎಲ್ಲರಿಗೂ ಯಾಕೆ ಅನ್ವಯಿಸಬಾರದು? ಎಂದು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠವು ದೆಹಲಿಯಲ್ಲಿ ಪಟಾಕಿ ನಿಷೇಧ ಕುರಿತ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಎನ್‌ಸಿಆರ್ ವ್ಯಾಪ್ತಿಯ ನಗರಗಳಿಗೆ ಶುದ್ಧಗಾಳಿ ಅಗತ್ಯವಾಗಿದ್ದರೆ, ಇತರೆ ನಗರಗಳ ಜನರಿಗೆ ಯಾಕೆ ಬೇಕಿಲ್ಲ? ಈ ವಿಚಾರದಲ್ಲಿ ಜಾರಿ ತರುವ ನೀತಿ ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತಿರಬೇಕು. ದೆಹಲಿಯಲ್ಲಿರುವವರು ಶ್ರೀಮಂತ ವರ್ಗಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಅವರಿಗಷ್ಟೇ ಪ್ರತ್ಯೇಕ ಕಾನೂನು ತರುವುದು ಸರಿಯಲ್ಲ. ನಾನು ಕಳೆದ ಚಳಿಗಾಲದಲ್ಲಿ ಅಮೃತಸರದಲ್ಲಿದೆ. ಅಲ್ಲಿನ ವಾಯು ಮಾಲಿನ್ಯ ದೆಹಲಿಗಿಂತಲೂ ಕೆಟ್ಟದಾಗಿದೆ. ಒಂದು ವೇಳೆ ಎನ್‌ಸಿಆರ್‌ನಲ್ಲಿ ಪಟಾಕಿಗಳನ್ನು ನಿಷೇಧಿಸುವುದಿದ್ದರೆ ಅದೇ ನಿಯಮ ದೇಶಾದ್ಯಂತ ಅನ್ವಯವಾಗಬೇಕು ಎಂದು ಸಿಜೆಐ ಅವರು ಅಭಿಪ್ರಾಯಪಟ್ಟರು.
ಜತೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ, ವಾಯುಗುಣಮಟ್ಟ ನಿರ್ವಹಣಾ ಪ್ರಾಧಿಕಾರದಿಂದ ವಿಸ್ತೃತ ವರದಿ ನೀಡುವಂತೆ ಸೂಚಿಸಿದರು.
ಆಗ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ಎನ್‌ಇಇಆರ್‌ಐ) ಯು ಹಸಿರು ಪಟಾಕಿಗಳ ಕುರಿತು ಪರಿಶೀಲಿಸುತ್ತಿದೆ. ಆಗ ಪಟಾಕಿ ಉತ್ಪಾದಕರ ಪರ ಹಾರಿದ್ದ ವಕೀಲರು, ಎನ್‌ಇಇಆರ್‌ಐ ಯು ಸೂಚಿಸಿದ ಪ್ರಮಾಣದ ರಾಸಾಯನಿಕಗಳನ್ನು ಬಳಸಿ ಪಟಾಕಿಗಳನ್ನು ಉತ್ಪಾದಿಸಲಾಗುವುದು ಎಂದು ಮಾಹಿತಿ ನೀಡಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.22ಕ್ಕೆ ನಿಗದಿಪಡಿಸಲಾಯಿತು.