ಮುಂಬೈ: ಗುಜರಾತ್‌ನ ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು ಟೇಕ್‌ಆಫ್ ಆಗುತ್ತಿದ್ದಂತೆ ಅದರ ಚಕ್ರ ಕಳಚಿಬಿದ್ದ ಘಟನೆ ಶುಕ್ರವಾರ ನಡೆದಿದೆ. ಬಳಿಕ ವಿಮಾನವನ್ನು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಈ ಬಗ್ಗೆ ವಿಮಾನಯಾನ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಸ್ಪೈಸ್‌ಜೆಟ್ ಕ್ಯು400 ಕಾಂಡ್ಲಾದಿಂದ ಟೇಕಾಫ್ ಆಗುತ್ತಿದ್ದಂತೆ ಅದರ ಚಕ್ರವೊಂದು ರನ್‌ವೇ ಮೇಲೆ ಬಿತ್ತು. ಆದರೂ ಯಾನ ಮುಂದುವರೆಸಿದ ವಿಮಾನ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಒಳಗಿದ್ದ ಪ್ರಯಾಣಿಕರೆಲ್ಲ ಸುರಕ್ಷಿತರಾಗಿ ಹೊರಬಂದಿದ್ದಾರೆ’ ಎಂದು ತಿಳಿಸಿದೆ. ವಿಮಾನದ 6ರ ಪೈಕಿ ಒಂದು ಕಳಚಿದ ಕಾರಣ, ಮುಂಬೈನಲ್ಲಿ ಲ್ಯಾಂಡಿಗ್ ವೇಳೆ ಪೈಲಟ್ ತುರ್ತುಸ್ಥಿತಿ ಘೋಷಿಸಿದ್ದರು.
ಕಿರ್ಕ್‌ರ ಕೊಂದವ ಸೆರೆ: ಅಧ್ಯಕ್ಷ ಟ್ರಂಪ್ ಘೋಷಣೆ
ಒರೆಮ್: ಅಮೆರಿಕದ ಬಲಪಂಥೀಯ ಯುವ ನಾಯಕ ಚಾರ್ಲಿ ಕಿರ್ಕ್(31) ಅವರನ್ನು ಗುಂಡಿಕ್ಕಿ ಕೊಂದಿದ್ದವ ಸಿಕ್ಕಿಬಿದ್ದಿದ್ದಾನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ‘ಖಚಿತತೆಯೊಂದಿಗೆ ಹೇಳುತ್ತಿದ್ದೇನೆ, ಆತ ಸಿಕ್ಕಿದ್ದಾನೆ’ ಎಂದು ಹೇಳಿದ್ದಾರೆ.
ಅತ್ತ ಶಂಕಿತ ಹಂತಕನನ್ನು ಟೈಲರ್ ರಾಬಿನ್ಸನ್(22) ಎಂದು ಗುರುತಿಸಿರುವುದಾಗಿ ಎಫ್‌ಬಿಐ ಅಧಿಕಾರಿಗಳು ಹೇಳಿದ್ದಾರೆ. ಉತ್ಹಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ ಕಿರ್ಕ್‌ರತ್ತ ಹಾರಿದ ಗುಂಡು ಅವರ ಕುತ್ತಿಗೆ ಸೀಳಿ ಪ್ರಾಣ ತೆಗೆದಿತ್ತು. ಬಳಿಕ ಅಧಿಕಾರಿಗಳು ದಾಳಿಗೆ ಬಳಸಲಾದ ರೈಫಲ್ ವಶಪಡಿಸಿಕೊಂಡು, ಶಂಕಿತನ ಫೋಟೋ ಬಿಡುಗಡೆ ಮಾಡಿದ್ದರು.
ಬರೀ ಮರುಟ್ವೀಟ್ ಅಲ್ಲ, ಮತ್ತಷ್ಟು ಮಸಾಲೆ: ನಟಿ ಕಂಗನಾಗೆ ಸುಪ್ರೀಂ ಚಾಟಿ
ನವದೆಹಲಿ: 2020ರ ರೈತರ ಪ್ರತಿಭಟನೆ ಕುರಿತ ಟ್ವೀಟ್ ಒಂದನ್ನು ಮರುಟ್ವೀಟ್ ಮಾಡಿದ್ದರ ವಿರುದ್ಧ ತಮ್ಮ ಮೇಲೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದು ಕೋರಿ ಅರ್ಜಿಯನ್ನು ಸಂಸದೆ, ನಟಿ ಕಂಗನಾ ರಾಣಾವತ್ ಹಿಂಪಡೆದಿದ್ದಾರೆ. ಈ ವೇಳೆ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ‘ನೀವು ಬರೀ ರೀಟ್ವೀಟ್ ಮಾಡಿರಲಿಲ್ಲ. ಬದಲಿಗೆ ಜತೆಗೆ ನಿಮ್ಮ ಅಭಿಪ್ರಾಯಗಳನ್ನೂ ಸೇರಿಸಿ ಮಸಾಲೆ ಸೇರಿದಿದ್ದಿರಿ’ ಎಂದು ಚಾಟಿ ಬೀಸಿದೆ. 73 ವರ್ಷದ ಮಹಿಂದರ್ ಕೌರ್ ಎಂಬ ಅಜ್ಜಿ ಶಹೀನ್ ಬಾಘ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು ಎಂದು ಕಂಗನಾ ಆರೋಪಿಸಿ ಟ್ವೀಟ್ ಮಾಡಿದ್ದರು. ಇದು ಸುಳ್ಳು ಆರೋಪ ಎಂದು ಕೌರ್ ದೂರು ದಾಖಲಿಸಿದ್ದರು.
13ರ ಹುಡುಗಿ ಹೃದಯ ಕಸಿಗೆ ವಂದೇ ಭಾರತ್‌ನಲ್ಲಿ ಕೊಚ್ಚಿಗೆ
ಕೊಚ್ಚಿ: ಸಕಾಲಕ್ಕೆ ಏರ್ ಆ್ಯಂಬುಲೆನ್ಸ್ ಸಿಗದ ಕಾರಣ ತುರ್ತು ಹೃದಯ ಕಸಿಗೆ ಒಳಪಡಬೇಕಿದ್ದ 13 ವರ್ಷದ ಹುಡುಗಿಯನ್ನು ಕೊಲ್ಲಂನ ಅಂಚಲ್‌ನಿಂದ ಕೊಚ್ಚಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕರೆದೊಯ್ಯಲಾಗಿದೆ. ಬಾಲಕಿ ಹೃದಯ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆಯಿದ್ದುದರಿಂದ ಆಕೆಯನ್ನು ಕೊಚ್ಚಿಯ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ ತುರ್ತು ಪ್ರಯಾಣಕ್ಕೆ ಏರ್ ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ. ಆದ್ದರಿಂದ ಆಕೆಯನ್ನು ಸಂಜೆ 4:52ಕ್ಕೆ ಹೊರಡುವ ವಂದೇ ಭಾರತ್‌ನಲ್ಲಿ ಕರೆದೊಯ್ಯಲಾಗಿದ್ದು, ಸಂಜೆ 7 ಗಂಟೆಗೆ ಕೊಚ್ಚಿ ತಲುಪಿದ್ದಾರೆ.
ಬಾಹುಬಲಿ ಖ್ಯಾತಿಯ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ ಜಾಲತಾಣಕ್ಕೆ ಬೈ ಬೈ
ನವದೆಹಲಿ: ಬಾಹುಬಲಿ ಖ್ಯಾತಿಯ ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಅವರು ತಾತ್ಕಾಲಿಕವಾಗಿ ಸಾಮಾಜಿಕ ಮಾಧ್ಯಮಗಳಿಗೆ ವಿದಾಯ ಹೇಳುತ್ತಿರುವುದಾಗಿ ಘೋಷಿಸಿದ್ದಾರೆ. ನೈಜ ಜಗತ್ತಿನೊಂದಿಗೆ ಕೆಲಕಾಲ ಜೀವಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನಟಿ, ‘ಕೆಲಕಾಲ ಸೋಷಿಯಲ್ ಮೀಡಿಯಾದಿಂದ ದೂರವಿದ್ದು, ಹೊರಗಿನ ಜಗತ್ತಿನೊಂದಿಗೆ ಮತ್ತೆ ಬೆಸೆದುಕೊಳ್ಳುತ್ತೇನೆ. ಸ್ಕ್ರೋಲ್ ಮಾಡುವುದು ಬಿಟ್ಟು ಬೇರೆ ಕೆಲಸ ಮಾಡಬೇಕಿದೆ. ಇನ್ನಷ್ಟು ಕತೆಗಳು ಹಾಗೂ ಪ್ರೀತಿಯೊಂದಿಗೆ ಮತ್ತೆ ಸಿಗೋಣ’ ಎಂದು ಕೈಯ್ಯಾರೆ ಹಾಳೆಯ ಮೇಲೆ ಬರೆದ ಫೋಟೋವನ್ನು ಹಂಚಿಕೊಂಡಿದ್ದಾರೆ.