ಬ್ಯಾಲೆಟ್‌ ಪೇಪರ್‌ ಮತ ಕೋರಿದವರಿಗೆ ಸುಪ್ರೀಂ ತರಾಟೆ

KannadaprabhaNewsNetwork | Published : Apr 17, 2024 1:18 AM

ಸಾರಾಂಶ

ಹಾಲಿ ದೇಶವ್ಯಾಪಿ ಚುನಾವಣೆಗಳಿಗೆ ಬಳಸುತ್ತಿರುವ ಎಲೆಕ್ಟ್ರಾನಿಕ್‌ ವೋಟಿಂಗ್ ಮಷಿನ್‌ (ಇವಿಎಂ) ರದ್ದುಗೊಳಿಸಿ, ಹಿಂದಿನ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಜಾರಿಗೆ ಕೋರಿದ್ದ ಅರ್ಜಿದಾರರ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್‌, ಹಿಂದೆಲ್ಲಾ ಮತಗಟ್ಟೆಗಳನ್ನು ವಶಪಡಿಸಿಕೊಂಡು ಚುನಾವಣಾ ಫಲಿತಾಂಶವನ್ನೇ ಬದಲಾಯಿಸಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದೆ.

ನವದೆಹಲಿ: ಹಾಲಿ ದೇಶವ್ಯಾಪಿ ಚುನಾವಣೆಗಳಿಗೆ ಬಳಸುತ್ತಿರುವ ಎಲೆಕ್ಟ್ರಾನಿಕ್‌ ವೋಟಿಂಗ್ ಮಷಿನ್‌ (ಇವಿಎಂ) ರದ್ದುಗೊಳಿಸಿ, ಹಿಂದಿನ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಜಾರಿಗೆ ಕೋರಿದ್ದ ಅರ್ಜಿದಾರರ ವಿರುದ್ಧ ಕಿಡಿಕಾರಿರುವ ಸುಪ್ರೀಂಕೋರ್ಟ್‌, ಹಿಂದೆಲ್ಲಾ ಮತಗಟ್ಟೆಗಳನ್ನು ವಶಪಡಿಸಿಕೊಂಡು ಚುನಾವಣಾ ಫಲಿತಾಂಶವನ್ನೇ ಬದಲಾಯಿಸಿದ್ದು ಮರೆತು ಹೋಯಿತೇ ಎಂದು ಪ್ರಶ್ನಿಸಿದೆ.ಇವಿಎಂ ಮತದಾನ ವ್ಯವಸ್ಥೆ ರದ್ದು ಕೋರಿ ಸಲ್ಲಿಸಿದ್ದ ಹಲವು ಅರ್ಜಿಗಳ ಕುರಿತ ವಿಚಾರಣೆ ನಡೆಸಿದ ನ್ಯಾ.ಸಂಜೀವ್‌ ಖನ್ನಾ ಮತ್ತು ನ್ಯಾ.ದೀಪಂಕರ್‌ ದತ್ತಾ ಅವರನ್ನೊಳಗೊಂಡ ನ್ಯಾಯಪೀಠ, ‘ಭಾರತದಲ್ಲಿನ ಚುನಾವಣೆ ಪ್ರಕ್ರಿಯೆ ಬಹುದೊಡ್ಡ ಕೆಲಸ, ಆ ವ್ಯವಸ್ಥೆಯನ್ನು ಉರುಳಿಸಲು ಪ್ರಯತ್ನ ಮಾಡಬೇಡಿ’ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

ಹಿಂದೆ ಬ್ಯಾಲೆಟ್‌ ಪೇವರ್‌ ಮತದಾನ ಸಂದರ್ಭದಲ್ಲಿ ಏನೆಲ್ಲಾ ಘಟನೆಗಳಾಗಿವೆ ಎಂಬುದು ನಮಗೂ ಗೊತ್ತಿದೆ. ನಾವು ಅದೇ ಕಾಲದವರು. ನಮಗೆ ನೀವು ಇದನ್ನೆಲ್ಲಾ ಹೇಳಬೇಕಾದ ಅಗತ್ಯವಿಲ್ಲ ಎಂದು ನ್ಯಾಯಪೀಠ, ಅರ್ಜಿದಾರ ಪ್ರಶಾಂತ್‌ ಭೂಷಣ್‌ ವಿರುದ್ಧ ಹರಿಹಾಯಿತು.ಇದೇ ವೇಳೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು, ‘ಜರ್ಮನಿ ಸೇರಿದಂತೆ ಹಲವು ಯುರೋಪಿಯನ್‌ ದೇಶಗಳು ಇವಿಎಂ ಬಳಸಿ, ಇದೀಗ ಮರಳಿ ಬ್ಯಾಲೆಟ್‌ ಪೇಪರ್‌ಗೆ ಮೊರೆ ಹೋಗಿವೆ’ ಎಂದು ಕೋರ್ಟ್‌ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ದೀಪಂಕರ್‌ ‘ನೀವು ಜರ್ಮನಿ ಉದಾಹರಣೆ ನೀಡುತ್ತಿದ್ದೀರಿ. ಆದರೆ ಅಲ್ಲಿಯ ಜನಸಂಖ್ಯೆ ಎಷ್ಟು? ಅಲ್ಲಿಗಿಂತ ನನ್ನ ತವರು ರಾಜ್ಯ ಬಂಗಾಳದ ಜನಸಂಖ್ಯೆ ಹೆಚ್ಚಿದೆ. ಯಾವುದೇ ಯುರೋಪಿಯನ್‌ ದೇಶ ಭಾರತದಷ್ಟು ಬೃಹತ್‌ ಪ್ರಮಾಣದ ಚುನಾವಣೆ ನಡೆಸುವುದು ಸಾಧ್ಯವಿಲ್ಲ. ನಾವು ನಾವು ನಮ್ಮ ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ಇಡಬೇಕು. ಅದು ಬಿಟ್ಟು ಇರುವ ವ್ಯವಸ್ಥೆಯನ್ನು ಉರುಳಿಸುವ ಪ್ರಯತ್ನ ಮಾಡಬೇಡಿ. ಭಾರತದಲ್ಲಿ 98 ಕೋಟಿ ಮತದಾರರು ಇದ್ದಾರೆ. ಎಣಿಕೆ ವೇಳೆ ಸಣ್ಣಪುಟ್ಟ ವ್ಯತ್ಯಾಸ ಆಗಬಹುದು. ಅದನ್ನು ಮರು ಎಣಿಕೆ ಮೂಲಕ ಸರಿ ಮಾಡಬಹುದು’ ಎಂದು ಹೇಳಿತು.ಮಾಹಿತಿ ನೀಡಿ:

ಇದೇ ವೇಳೆ ಇವಿಎಂಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಅವುಗಳಲ್ಲಿ ದಾಖಲಾದ ಮಾಹಿತಿಗಳು ಎಲ್ಲಿ ಸಂಗ್ರಹವಾಗುತ್ತದೆ? ಸಂಗ್ರಹವಾದ ಮಾಹಿತಿಗಳನ್ನು ತಿರುಚುವ ಸಾಧ್ಯತೆ ಇದೆಯೇ? ಒಂದು ವೇಳೆ ತಿರುಚಿದರೆ ಅವರಿಗೆ ಏನು ಶಿಕ್ಷೆ ನೀಡುವ ಅವಕಾಶ ಇದೆ? ಎಂಬಿತ್ಯಾದಿ ಕುರಿತು ನಮಗೆ ಪೂರ್ಣ ಮಾಹಿತಿ ನೀಡಿ ಎಂದು ವಿಚಾರಣೆ ವೇಳೆ ಹಾಜರಿದ್ದ ಚುನಾವಣಾ ಆಯೋಗದ ಪರ ಅಧಿಕಾರಿಗಳಿಗೆ ಕೋರ್ಟ್‌ ಸೂಚಿಸಿತು.

Share this article