ಟಿಕೆಟ್‌ ಬೆಲೆಗೆ ಮಿತಿ ಇರದಿದ್ದರೆ ಚಿತ್ರಮಂದಿರ ಖಾಲಿ : ಸುಪ್ರೀಂ

KannadaprabhaNewsNetwork |  
Published : Nov 04, 2025, 01:45 AM ISTUpdated : Nov 04, 2025, 05:29 AM IST
Supreme Court

ಸಾರಾಂಶ

ಕರ್ನಾಟಕ ಟಿಕೆಟ್ ದರ  200 ರು.ಗೆ ಮಿತಿಗೊಳಿಸಿದ್ದಕ್ಕೆ ಸುಪ್ರೀಂ ಕೋರ್ಟ್‌  ಸಹಮತ ವ್ಯಕ್ತಪಡಿಸಿದೆ. ‘ಮೊದಲೇ ಸಿನಿಮಾಗಳು ಕ್ಷೀಣಿಸುತ್ತಿವೆ. ಇಂಥದ್ದರಲ್ಲಿ ಚಿತ್ರಮಂದಿರಗಳಿಗೆ ಜನ ಬಂದು ಆನಂದಿಸುವ ವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ಚಿತ್ರಮಂದಿರ  ಖಾಲಿ  ಇರುತ್ತವೆ’ ಎಂದಿದೆ.

  ನವದೆಹಲಿ  : ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿನ ಟಿಕೆಟ್ ದರವನ್ನು 200 ರು.ಗೆ ಮಿತಿಗೊಳಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ಮೌಖಿಕವಾಗಿ ಸಹಮತ ವ್ಯಕ್ತಪಡಿಸಿದೆ. ‘ಮೊದಲೇ ಸಿನಿಮಾಗಳು ಕ್ಷೀಣಿಸುತ್ತಿವೆ. ಇಂಥದ್ದರಲ್ಲಿ ಚಿತ್ರಮಂದಿರಗಳಿಗೆ ಜನರು ಬಂದು ಆನಂದಿಸುವ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಚಿತ್ರಮಂದಿರಗಳು ಖಾಲಿಯೇ ಇರುತ್ತವೆ’ ಎಂದಿರುವ ಕೋರ್ಟ್‌, ‘ಪ್ರತಿ ಟಿಕೆಟ್‌ ದರವನ್ನು 200 ರು.ಗೆ ಮಿತಿಗೊಳಿಸಬೇಕು ಎಂಬ ಕರ್ನಾಟಕ ಸರ್ಕಾರದ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದ್ದ ದ್ವಿಸದಸ್ಯ ಪೀಠದ ಆದೇಶದ ಜೊತೆಗೆ ನಾವೂ ಇದ್ದೇವೆ’ ಎಂದಿದೆ.

ಆದರೆ ಇದೇ ವೇಳೆ, ‘ಮಲ್ಟಿಪ್ಲೆಕ್ಸ್‌ಗಳು ಮಾರಾಟವಾದ ಪ್ರತಿ ಸಿನಿಮಾ ಟಿಕೆಟ್‌ನ ದಾಖಲೆಗಳನ್ನು ಈ ಪ್ರಕರಣದ ಅಂತಿಮ ತೀರ್ಪು ಹೊರಬರುವವರೆಗೆ ಸಂಗ್ರಹಿಸಿ ಇಡಬೇಕು’ ಎಂಬ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿದೆ. ಅಲ್ಲದೆ, ವಿಭಾಗೀಯ ಪೀಠಕ್ಕೂ ಮುನ್ನ 200 ರು. ಟಿಕೆಟ್‌ ಮಿತಿಗೆ ತಡೆ ನೀಡಿದ್ದ ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ಮಂದುವರಿಸಬಹುದು ಎಂದು ಹೇಳಿದೆ.

ಇನ್ನು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿ, 4 ವಾರಗಳಲ್ಲಿ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಏನಿದು ವಿವಾದ?:

ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025ರಡಿಯಲ್ಲಿ, ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿ ಸಿನಿಮಾ ಟಿಕೆಟ್‌ ಬೆಲೆಯನ್ನು 200 ರು.ಗೆ ಮಿತಿಗೊಳಿಸಿ ಕರ್ನಾಟಕ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಬಳಿಕ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ ಈ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋಗಿತ್ತು.

ಆಗ ವಿಭಾಗೀಯ ಪೀಠವು, ‘ಟಿಕೆಟ್‌ಗೆ 200 ರು. ಮಿತಿ ಹೇರಿರುವುದು ನಮ್ಮ ಅಂತಿಮ ಆದೇಶಕ್ಕೆ ಒಳಪಡುತ್ತದೆ. ಅಂತಿಮ ತೀರ್ಪು ಬರುವವರೆಗೂ ಮಲ್ಟಿಪ್ಲೆಕ್ಸ್‌ಗಳು ಮಾರಾಟವಾದ ಪ್ರತಿ ಟಿಕೆಟ್‌ನ ಸಮಗ್ರ ಹಾಗೂ ಆಡಿಟ್ ಮಾಡಬಹುದಾದ ದಾಖಲೆಗಳನ್ನು ನಿರ್ವಹಿಸಬೇಕು. ದಿನಾಂಕ, ಸಮಯ, ಬುಕಿಂಗ್ ವಿಧಾನ, ಪಾವತಿ ವಿಧಾನ, ಮೊತ್ತ, ಜಿಎಸ್‌ಟಿ, ನಗದಿಗೆ ಡಿಜಿಟಲ್ ರಸೀದಿ, ದೈನಂದಿನ ನಗದು ರಿಜಿಸ್ಟರ್‌ಗೆ ವ್ಯವಸ್ಥಾಪಕರ ಸಹಿ ಮೊದಲಾದವುಗಳನ್ನು ಸರಿಯಾಗಿ ನಿರ್ವಹಿಸಬೇಕು. ಒಂದು ವೇಳೆ ಅಂತಿಮ ತೀರ್ಪಿನಲ್ಲಿ 200 ರು. ಮಿತಿಗೊಳಿಸುವುದು ಸರಿ ಅಂತಾದರೆ, ಮಲ್ಟಿಪ್ಲೆಕ್ಸ್‌ಗಳು ಹೆಚ್ಚುವರಿಯಾಗಿ ಪಡೆದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಆಗ ಈ ದಾಖಲೆಗಳು ನೆರವಾಗುತ್ತವೆ’ ಎಂದು ಆದೇಶಿಸಿತ್ತು.

ಈ ಆದೇಶದ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?:

ಸೋಮವಾರ ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿತು. ಮುಂದಿನ ಆದೇಶದವರೆಗೆ ಮಲ್ಟಿಪ್ಲೆಕ್ಸ್‌ಗಳು ದಾಖಲೆ ನಿರ್ವಹಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತು.

ಆದರೆ, ಇದೇ ವೇಳೆ ಟಿಕೆಟ್‌ಗೆ 200 ರು. ಮಿತಿ ಹೇರಿದ್ದಕ್ಕೆ ಮೌಖಿಕವಾಗಿ ಸಹಮತ ವ್ಯಕ್ತಪಡಿಸಿದ ಪೀಠ, ‘ಸಿನಿಮಾಗಳು ಈಗಾಗಲೇ ಕ್ಷೀಣಿಸುತ್ತಿವೆ. ಇಂಥದ್ದರಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ನೀರಿನ ಬಾಟಲಿಗೆ 100 ರು. ಹಾಗೂ ಕಾಫಿಗೆ 700 ರು. ವಸೂಲಿ ಮಾಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಜನರು ಚಿತ್ರಮಂದಿರಗಳಿಗೆ ಬಂದು ಆನಂದಿಸುವಂತೆ ವ್ಯವಸ್ಥೆಯನ್ನು ಸಮಂಜಸಗೊಳಿಸಬೇಕು. ಇಲ್ಲದಿದ್ದರೆ ಚಿತ್ರಮಂದಿರಗಳು ಖಾಲಿ ಆಗಿ ಬಿಡುತ್ತವೆ. ಪ್ರತಿ ಟಿಕೆಟ್‌ಗೆ 200 ರು. ಮಿತಿಗೊಳಿಸಬೇಕು ಎಂಬ ಹೈಕೋರ್ಟ್‌ ದ್ವಿಸದಸ್ಯ ವಿಭಾಗೀಯ ಪೀಠದ ಆದೇಶದ ಜೊತೆಗೆ ನಾವೂ ಇದ್ದೇವೆ. ಆದರೆ ಸದ್ಯಕ್ಕೆ ಈ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಿದ್ದೇವೆ. ಮುಂದಿನ ಆದೇಶದವರೆಗೆ ಮಲ್ಟಿಪ್ಲೆಕ್ಸ್‌ಗಳು ದಾಖಲೆ ನಿರ್ವಹಿಸುವುದು ಕಡ್ಡಾಯವಲ್ಲ’ ಎಂದು ತಿಳಿಸಿತು.

- ಕರ್ನಾಟಕದ ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ 200 ರು. ಮಿತಿ ಹೇರಿದ್ದ ಕರ್ನಾಟಕ ಸರ್ಕಾರ

- ಇದರ ವಿರುದ್ಧ ಮಲ್ಟಿಪ್ಲೆಕ್ಸ್‌ಗಳು ಹೈಕೋರ್ಟ್‌ಗೆ. ಮಿತಿ ನಿಗದಿಗೆ ಕೋರ್ಟ್‌ನಿಂದ ತಡೆಯಾಜ್ಞೆ

- ಇದರ ವಿರುದ್ಧ ವಿಭಾಗೀಯ ಪೀಠಕ್ಕೆ ಸರ್ಕಾರ ಮೊರೆ. ಟಿಕೆಟ್‌ ದಾಖಲೆ ಸಂಗ್ರಹಕ್ಕೆ ಸೂಚನೆ

- ಈ ಆದೇಶ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಮಲ್ಟಿಪ್ಲೆಕ್ಸ್‌ಗಳು. ಕೋರ್ಟ್‌ನಿಂದ ವಿಚಾರಣೆ

- ಮೊದಲೇ ಸಿನಿಮಾಗಳು ಕ್ಷೀಣಿಸಿವೆ. ದರ ಮಿತಿ ಹೇರದಿದ್ದರೆ ಜನ ಬರೋಲ್ಲ ಎಂದ ಜಡ್ಜ್‌

PREV
Read more Articles on

Recommended Stories

ಎನ್‌ಡಿಎ ಅಂದ್ರೆ ವಿಕಾಸ, ಆರ್‌ಜೆಡಿ ಅಂದ್ರೆ ವಿನಾಶ: ಮೋದಿ
ಇನ್ನೂ ಮಾನಸಿಕ ಹಿಂಸೆ ಆಗುತ್ತಿದೆ: ಏರಿಂಡಿಯಾ ಸಂತ್ರಸ್ತ