ಸಿಯಾಟಲ್: 2023ರಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವಾಹನಕ್ಕೆ ಸಿಕ್ಕಿ ದಾರುಣವಾಗಿ ಮೃತಪಟ್ಟ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿಯೊಬ್ಬರ ಕುಟುಂಬಕ್ಕೆ ಸಿಯಾಟಲ್ ನಗರಾಡಳಿತದ ವತಿಯಿಂದ 262 ಕೋಟಿ ರು. ಪರಿಹಾರ ನೀಡಲು ನಿರ್ಧರಿಸಲಾಗಿದೆ.
ಅತಿವೇಗವಾಗಿ (ಗಂಟೆಗೆ 40 ಕಿ.ಮೀ. ವೇಗವಾಗಿ ಹೋಗುವ ರಸ್ತೆಯಲ್ಲಿ 119 ಕಿ.ಮೀ. ಸ್ಪೀಡ್) ಹೋಗುತ್ತಿದ್ದ ಕೆವಿನ್ ಎಂಬ ಪೊಲೀಸ್ ಅಧಿಕಾರಿಯ ವಾಹನಕ್ಕೆ ಸಿಕ್ಕಿ, ಆಂಧ್ರಪ್ರದೇಶದ ಕರ್ನೂಲ್‌ನವರ ಜಾಹ್ನವಿ ಕಂದುಲಾ (23) ಮೃತಪಟ್ಟಿದ್ದರು. ಡಿಕ್ಕಿಯ ರಭಸಕ್ಕೆ ಆಕೆಯ ದೇಹ 100 ಮೀ. ನಷ್ಟು ದೂರ ಹಾರಿ ಬಿದ್ದಿತ್ತು.
ಆಕೆಯ ಶವವನ್ನು ನೋಡಿ, ‘ಇದು ಬೆಲೆಬಾಳದ ಜೀವ. ಚೆಕ್ ಬರೆದುಕೊಟ್ಟರಾಯಿತು’ ಎಂದು ಇನ್ನೊಬ್ಬ ಅಧಿಕಾರಿ ಅಪಹಾಸ್ಯ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರ ನಿರ್ಲಕ್ಷ್ಯ ಮತ್ತು ಅಮಾನವೀಯ ನಡವಳಿಕೆಯಿಂದ ಈ ಘಟನೆಗೆ ಜಾಗತಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಗಿ, ಅಮೆರಿಕ ಸರ್ಕಾರ ತನಿಖೆಗೆ ಆದೇಶಿಸಿತ್ತು.
ಇದರ ನಡುವೆ ಜಾಹ್ನವಿ ಕುಟುಂಬ ಕಿಂಗ್ ಕೌಂಟಿ ಸುಪೀರಿಯರ್ ನ್ಯಾಯಾಲಯದ ಮೊರೆ ಹೋಗಿತ್ತು ಹಾಗೂ 996 ಕೋಟಿ ರು. ಪರಿಹಾರಕ್ಕೆ ಆಗ್ರಹಿಸಿತ್ತು. ಇದೀಗ ಸಿಯಾಟಲ್ ನಗರಾಡಳಿತವು 262 ಕೋಟಿ ರು. ನೀಡಲು ನಿರ್ಧರಿಸಿದೆ. ‘ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು, ಮತ್ತು ಈ ಆರ್ಥಿಕ ಪರಿಹಾರವು ಕಂದುಲಾ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ತರುತ್ತದೆ ಎಂದು ನಗರವು ಆಶಿಸುತ್ತದೆ’ ಎಂದು ಸಿಯಾಟಲ್ ನಗರ ಅಟಾರ್ನಿ ಎರಿಕಾ ಇವಾನ್ಸ್ ಹೇಳಿದ್ದಾರೆ.
ಜಾಹ್ನವಿ ಕಂದುಲಾ ಆಂಧ್ರದ ಕರ್ನೂಲ್ ಮೂಲದವರಾಗಿದ್ದು, ಇನ್‌ಫಾರ್ಮೇಶನ್ ಸಿಸ್ಟಮ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದನ್ವಯ ಬೆಂಗಳೂರಿನಿಂದ ಅಮೆರಿಕಕ್ಕೆ 2021ರಲ್ಲೇ ತೆರಳಿದ್ದರು.