ಚಂಡೀಗಢ: ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ ಮತ್ತು ಹರ್ಯಾಣದ ಶಂಭು ಮತ್ತು ಖನೌರಿ ಗಡಿಯಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸ್ಥಳಾಂತರಿಸಿದ ಬೆನ್ನಲ್ಲೇ, ಇದೀಗ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಪೊಲೀಸರು ಗುರುವಾರ ತೆರವುಗೊಳಿಸಿದ್ದಾರೆ.
ಏತನ್ಮಧ್ಯೆ, ರೈತರನ್ನು ಬಂಧಿಸಿ ಪ್ರತಿಭಟನಾನಿರತ ಸ್ಥಳವನ್ನು ತೆರವುಗೊಳಿಸುವ ಪಂಜಾಪ್‌ನ ಆಪ್ ಮತ್ತು ಹರ್ಯಾಣದ ಬಿಜೆಪಿ ಸರ್ಕಾರದ ಕ್ರಮವನ್ನು ಎಐಸಿಸಿ ಅಧ್ಯಕ್ಷ ತೀವ್ರವಾಗಿ ಖಂಡಿಸಿದ್ದಾರೆ. ರೈತ ವಿರೋಧಿ ಪಕ್ಷಗಳು ಒಂದಾಗಿವೆ ಎಂದು ಕಿಡಿಕಾರಿದ್ದಾರೆ.ಕೇಂದ್ರ ಸಚಿವರ ನಿಯೋಗದ ಜತೆಗೆ ಚಂಡೀಗಢದಲ್ಲಿ ಬುಧವಾರ ಮಾತುಕತೆ ನಡೆಸಿ ರೈತ ಮುಖಂಡರು ವಾಪಸಾಗುವಾಗ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ರಾತ್ರಿಯೇ ಗಡಿಯಲ್ಲಿ ರೈತರು ನಿರ್ಮಿಸಿದ್ದ ತಾತ್ಕಾಲಿಕ ಟೆಂಟ್‌ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಪ್ರತಿಭಟನಾನಿರತ ರೈತರು ದೆಹಲಿ ಪ್ರವೇಶಿಸದಂತೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದು. ಈ ಮಾರ್ಗದಲ್ಲಿ ಕೊನೆಗೂ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
100ಕ್ಕೂ ಹೆಚ್ಚು ರೈತರ ಮೇಲೆ ಕೇಸ್: ಈ ನಡುವೆ, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದಡಿ ವಿವಿಧ ರೈತ ಸಂಘಟನೆಗಳು ಪಂಜಾಬ್ ಮತ್ತಿತರ ಕಡೆ ಪ್ರತಿಭಟನೆ ನಡೆಸಿದ್ದು, ರೈತ ಮುಖಂಡರಾದ ಸರ್ವಾನ್ ಸಿಂಗ್ ಪಂಧೇರ್, ಜಗ್‌ಜಿತ್ ಸಿಂಗ್ ದಲ್ಲೇವಾಲ್ ಮತ್ತಿತರ ರೈತ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.
ಖರ್ಗೆ ಆಕ್ರೋಶ: ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದ ಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಕಿಡಿಕಾರಿದ್ದಾರೆ. ರೈತರ ವಿರುದ್ಧ ಎರಡು ರೈತ ವಿರೋಧಿ ಪಕ್ಷಗಳು ಒಂದಾದಂತಿದೆ. 62 ಕೋಟಿ ರೈತರು ಈ ಎರಡು ರೈತ ವಿರೋಧಿ ಪಕ್ಷಗಳನ್ನು ಮರೆಯುವುದಿಲ್ಲ. ಇವರಿಗೆ ಅಧಿಕಾರದ ಮದ ಏರಿದೆ ಎಂದು ಆಪ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.