ಪ್ರತ್ಯೇಕತಾವಾದಕ್ಕೆ 2 ಹುರಿಯತ್‌ ಬಣ ತಿಲಾಂಜಲಿ

KannadaprabhaNewsNetwork | Published : Mar 26, 2025 1:30 AM

ಸಾರಾಂಶ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ವಿರುದ್ಧದ ಭಾರತದ ಹೋರಾಟಕ್ಕೆ ಮೊದಲ ಜಯ ದೊರೆತಿದ್ದು, ಎರಡು ಹುರಿಯತ್ ಸಂಘಟನೆಗಳು ಪ್ರತ್ಯೇಕವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿವೆ.

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ವಿರುದ್ಧದ ಭಾರತದ ಹೋರಾಟಕ್ಕೆ ಮೊದಲ ಜಯ ದೊರೆತಿದ್ದು, ಎರಡು ಹುರಿಯತ್ ಸಂಘಟನೆಗಳು ಪ್ರತ್ಯೇಕವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿವೆ. ಹುರಿಯತ್‌ನ ಎರಡು ಘಟಕಗಳಾದ ಜೆ-ಕೆ ಪೀಪಲ್ಸ್‌ ಮೂವ್‌ಮೆಂಟ್‌ ಮತ್ತು ಡೆಮಾಕ್ರೆಟಿಕ್ ಪೊಲಿಟಿಕಲ್ ಮೂವ್‌ಮೆಂಟ್‌ ಸಂಘಟನೆಗಳು ಪ್ರತ್ಯೇಕವಾದವನ್ನು ಕೈಬಿಡುವುದಾಗಿ ಹೇಳಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಮಾಹಿತಿ ನೀಡಿದ್ದು, ‘ಇದು ಪ್ರತ್ಯೇಕತಾವಾದ ವಿರುದ್ಧದ ಹೋರಾಟಕ್ಕೆ ಮೊದಲ ಯಶ. ಪ್ರತ್ಯೇಕತಾವಾದ ಇನ್ನು ಇತಿಹಾಸವಾಗಲಿದೆ’ ಎಂದಿದ್ದಾರೆ.ಸಂಘಟನೆಗಳ ಈ ನಿರ್ಧಾರವನ್ನು ಸ್ವಾಗತಿಸಿರುವ ಅಮಿತ್‌ ಶಾ, ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಈ ನಿರ್ಧಾರ ಇತಿಹಾಸ ನಿರ್ಮಿಸಿದೆ. ಮೋದಿ ಸರ್ಕಾರದ ನಿರ್ಧಾರಗಳಿಂದ ಇದು ಸಾಧ್ಯವಾಗಿದೆ. ಅಭಿವೃದ್ಧಿ ಹೊಂದಿದ, ಶಾಂತಿಯುತ ಮತ್ತು ಏಕೀಕೃತ ಭಾರತವನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಇದು ದೊಡ್ಡ ಗೆಲುವು ಎಂದು ಹೇಳಿದರು.ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಶಾ, ‘ಹುರಿಯತ್‌ನ ಎರಡು ಸಂಘಟನೆಗಳಾದ ಜೆ-ಕೆ ಪೀಪಲ್ಸ್‌ ಮೂವ್‌ಮೆಂಟ್‌ ಮತ್ತು ಡೆಮಾಕ್ರೆಟಿಕ್ ಪೊಲಿಟಿಕಲ್ ಮೂವ್‌ಮೆಂಟ್‌ ಪ್ರತ್ಯೇಕವಾದದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿದೆ. ಭಾರತದ ಏಕತೆಯನ್ನು ಬಲಪಡಿಸುವ ಈ ಹೆಜ್ಜೆಯನ್ನು ನಾನು ಸ್ವಾಗತಿಸುತ್ತೇನೆ. ಅಂತಹ ಎಲ್ಲ ಗುಂಪುಗಳು ಮುಂದೆ ಬಂದು ಪ್ರತ್ಯೇಕವಾದವನ್ನು ಕೈಬಿಡಬೇಕು ಎಂದು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

==

ಆಕ್ರಮಿತ ಕಾಶ್ಮೀರ ತೆರವು ಮಾಡಿ: ಪಾಕ್‌ಗೆ ಭಾರತ

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಪಾಕಿಸ್ತಾನವನ್ನು ಭಾರತ ವಿಶ್ವಸಂಸ್ಥೆಯಲ್ಲಿ ಮತ್ತೆ ತರಾಟೆಗೆ ತೆಗೆದುಕೊಂಡಿದ್ದು, ‘ಪಾಕಿಸ್ತಾನ ಜಮ್ಮು-ಕಾಶ್ಮೀರದ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕು’ ಎಂದು ಎಚ್ಚರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ವಿಚಾರವನ್ನು ಕೆಣಕಿದ ಬೆನ್ನಲ್ಲೇ, ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್‌, ‘ಜಮ್ಮು-ಕಾಶ್ಮೀರ ಹಿಂದೆ, ಈಗ, ಮುಂದೆಯೂ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಜಮ್ಮು ಕಾಶ್ಮೀರದ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದನ್ನು ಮುಂದುವರೆಸಿದೆ. ಅದನ್ನು ತೆರವುಗೊಳಿಸಬೇಕು’ ಎಂದರು.ಜೊತೆಗೆ ಪಾಕಿಸ್ತಾನದ ಪ್ರತಿನಿಧಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂದ ಹರೀಶ್‌, ‘ಇಂತಹ ಪುನರಾವರ್ತಿತ ಹೇಳಿಕೆಗಳು ಅವರ ಕಾನೂನುಬಾಹಿರ ಹಕ್ಕುಗಳನ್ನು ದೃಢೀಕರಿಸುವುದಿಲ್ಲ. ಅವರ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ. ಸಂಕುಚಿತ ಮತ್ತು ವಿಭಜನೆ ನೀತಿಗಾಗಿ ವಿಶ್ವಸಂಸ್ಥೆ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬೇಡಿ’ ಎಂದು ತಿರುಗೇಟು ನೀಡಿದರು.

Share this article