ಸಂದೇಶ್‌ಖಾಲಿ ಬಳಿಕ ಮತ್ತೊಂದು ಗ್ರಾಮದಲ್ಲೂ ಶಾಜಹಾನ್‌ ದೌರ್ಜನ್ಯ

KannadaprabhaNewsNetwork | Updated : Feb 25 2024, 08:57 AM IST

ಸಾರಾಂಶ

ಸಂದೇಶ್‌ ಖಾಲಿ ಬಳಿಕ ಬೆರ್ಮಜೂರ್‌ನಲ್ಲೂ ಶಾಜಹಾನ್‌ ಸೋದರರು ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಟಿಎಂಸಿಗೆ ಮತ ಹಾಕದ ಕಾರಣ ತಮಗೆ ದೌರ್ಜನ್ಯ ಮಾಡಲಾಗಿದೆ ಎಂದು ಸಂದೇಶ್‌ಖಾಲಿಯ ಜನ ತಿಳಿಸಿದ್ದಾರೆ. 

ಬೆರ್ಮಜೂರ್‌: ಟಿಎಂಸಿ ನಾಯಕರ ಭೂಕಬಳಿಕೆ ಕರ್ಮಕಾಂಡ ಕೇವಲ ಸಂದೇಶ್‌ಖಾಲಿಗೆ ಮಾತ್ರ ಸೀಮಿತವಾಗಿಲ್ಲ. ನೆರೆಯ ಗ್ರಾಮಗಳಲ್ಲೂ ಆತ ಇಂಥದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 

ಜೊತೆಗೆ ಸಂದೇಶ್‌ಖಾಲಿ ಬಳಿಕ ನೆರೆಯ ಬೆರ್ಮಜೂರ್‌ ಗ್ರಾಮಸ್ಥರು ಕೂಡಾ ಇದೀಗ ಶಾಜಹಾನ್‌ನ ಮತ್ತು ಆತನ ಬೆಂಬಲಿಗರ ವಿರುದ್ಧ ಸಿಡಿದೆದ್ದಿದ್ಧಾರೆ.

ಶಾಜಹಾನ್‌ ಮತ್ತು ಸೋದರ ಸಿರಾಜುದ್ದೀನ್‌ ತಮ್ಮ ಭೂಮಿಗಳನ್ನು ಬಲವಂತವಾಗಿ ಕಬಳಿಸಿ ದೌರ್ಜನ್ಯ ಮೆರೆಯುತ್ತಿದ್ದಾರೆ ಎಂದು ಬೆರ್ಮಜೂರ್‌ ಗ್ರಾಮಸ್ಥರು ಆರೋಪಿಸಿದ್ದಾರೆ. 

ಜೊತೆಗೆ ಮೋಂಟು ಸರ್ದಾರ್ ಎಂಬುವವರ ಜಮೀನು ಕಬಳಿಸಿ ಸಿರಾಜ್‌ ನಿರ್ಮಿಸಿದ್ದ ಗುಡಿಸಿಲಿಗೆ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಜೊತೆಗೆ ಸ್ಥಳೀಯ ಟಿಎಂಸಿ ನಾಯಕ ಅಜಿತ್‌ ಮೈತಿ ಅವರ ಮನೆಯನ್ನೂ ಧ್ವಂಸಗೊಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಶಿಬಿರಗಳನ್ನು ತೆರೆದಿದೆ.

ಟಿಎಂಸಿಗೆ ಮತ ಹಾಕದ ಆದಿವಾಸಿಗಳ ಮೇಲೆ ದೌರ್ಜನ್ಯ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶೇಖ್‌ ಶಾಜಹಾನ್ ಮತ್ತು ಅವರ ಸಹಚರರು, ಟಿಎಂಸಿಗೆ ಮತ ಹಾಕದ ಆದಿವಾಸಿ ಕುಟುಂಬಗಳ ಉದ್ಯೋಗ ಖಾತ್ರೆ ಕೂಲಿಯನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದರು ಹಾಗೂ ಅವರನ್ನು ಲೈಂಗಿಕವಾಗಿ/ದೈಹಿಕವಾಗಿ ಹಿಂಸಿಸುತ್ತಿದ್ದರು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಆರೋಪಿಸಿದೆ.ಅಲ್ಲದೆ, ಶೇಖ್‌ ಹಾಗೂ ಆತನ ಬೆಂಬಲಿಗರನ್ನು ಪ.ಬಂಗಾಳ ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಅದು ದೂರಿದೆ.

ಆಯೋಗದ ಉಪಾಧ್ಯಕ್ಷ ಅನಂತ ನಾಯಕ್ ನೇತೃತ್ವದ ಮೂರು ಸದಸ್ಯರ ಅಯೋಗದ ಇತ್ತೀಚೆಗೆ ಸಂದೇಶ್‌ಖಾಲಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ ದಿಲ್ಲಿಗೆ ಮರಳಿದೆ. ಈಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಈ ಬಗ್ಗೆ ಮಾತನಾಡಿದ ಅನಂತ ನಾಯಕ್‌, ‘ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆಗೆ ಸಂಬಂಧಿಸಿದಂತೆ ಶೇಖ್‌ ಶಾಜಹಾನ್‌ ಹಾಗೂ ಸಹಚರರ ವಿರುದ್ಧ 50ಕ್ಕೂ ಹೆಚ್ಚು ದೂರುಗಳನ್ನು ಸಮಿತಿ ಸ್ವೀಕರಿಸಿದೆ. 

ಈ ವೇಳೆ ಹಲವು ಆದಿವಾಸಿಗಳು ಟಿಎಂಸಿಗೆ ಮತ ಹಾಕದ್ದಕ್ಕೆ ನಮ್ಮ ಮೇಲೆ ಶೇಖ್‌ನ ಸಹಚರರು ದೌರ್ಜನ್ಯ ಎಸಗಿದರು ಹಾಗೂ ಉದ್ಯೋಗ ಖಾತ್ರಿ ಹಣ ಕಿತ್ತುಕೊಂಡರು. ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿದರೆ ಸಾಲ ಮಾಡಿಯಾದರೂ ಹಣ ಕೊಡಿ ಎಂದು ಪೀಡಿಸುತ್ತಿದ್ದರು ಎಂದು ದೂರಿದ್ದಾರೆ’ ಎಂದು ಹೇಳಿದರು.

ಶಾಜಹಾನ್‌ ಹಾಗೂ ಆತನ ಬಂಟರು, ತಮ್ಮ ಬೇಡಿಕೆ ಈಡೇರಿಸದ ಕುಟುಂಬಗಳ ಮಹಿಳೆಯರನ್ನು ರಾತ್ರಿ ವೇಳೆ ಕರೆದು ಲೈಂಗಿಕವಾಗಿ ಹಿಂಸಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರಲು ಹೋದರೆ, ಪೊಲೀಸರು ದೂರು ದಾಖಲಿಸಿಕೊಳ್ಳದೆ ರಾಜಿ ಸಂಧಾನ ನಡೆಸುತ್ತಿದ್ದರು.

ಪ್ರತಿಭಟಿಸುವ ಬಡವರ ಭೂಮಿ ಕಿತ್ತುಕೊಂಡು ಅದರಲ್ಲಿ ಉಪ್ಪು ನೀರು ಬಿಟ್ಟು ಹಾಳು ಮಾಡುತ್ತಿದ್ದರು. ಸಾವಿರಾರು ಆದಿವಾಸಿಗಳ ಜಮೀನನ್ನು ಶೇಖ್‌, ಸಹಚರರು ಕಬಳಿಸಿದ್ದಾರೆ ಎಂಬ ದೂರುಗಳು ಬಂದಿವೆ ಎಂದು ನಾಯಕ್‌ ಮಾಹಿತಿ ನೀಡಿದರು.

ಸಂದೇಶ್‌ಖಾಲಿ ಜನರಿಂದ ಸರ್ಕಾರಕ್ಕೆ 1,259 ದೂರು: ಪಶ್ಚಿಮ ಬಂಗಾಳದ 24 ಪರಂಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಈವರೆಗೆ ಸರ್ಕಾರವು 1,250 ದೂರು ಸ್ವೀಕರಿಸಿದೆ. ಈ ಪೈಕಿ 400 ಬಲವಂತವಾಗಿ ಭೂಮಿ ಕಬಳಿಕೆ ಮಾಡಿರುವ ಆರೋಪದ ದೂರುಗಳಾಗಿವೆ. 

ತಮಗಾಗಿರುವ ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಸಂದೇಶ್‌ಖಾಲಿಯ ಮಹಿಳೆಯರು ಹಾಗೂ ಇತರರ ಸಮಸ್ಯೆಗಳನ್ನು ಪರಿಹರಿಸಲು ಅಥವಾ ನ್ಯಾಯ ಕೊಡಿಸಲು ಸರ್ಕಾರವು ಸ್ಥಳದಲ್ಲಿ ಆಯೋಜಿಸಿರುವ ಸಾಮೂಹಿಕ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿ ಸರ್ಕಾರಿ ಶಿಬಿರಗಳನ್ನು ತೆರೆದಿದೆ. ಇಲ್ಲಿ ಜನರು ತಮ್ಮ ದೂರುಗಳನ್ನು ನೀಡಿದ್ದಾರೆ.

Share this article