ನ.30ರಿಂದ ಸಂಸತ್‌ ವಿಶೇಷ ಅಧಿವೇಶನ

Published : Nov 27, 2026, 08:09 AM IST
parliament

ಸಾರಾಂಶ

ಭಾರೀ ಕುತೂಹಲ ಮೂಡಿಸಿರುವ ಮತ್ತು ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆ ಇರುವ ಸಂಸತ್‌ ವಿಶೇಷ ಕಲಾಪಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮುಹೂರ್ತ ಫಿಕ್ಸ್‌ ಮಾಡಿದೆ. ಡಿ.30ರಿಂದ ಡಿ.3ರವರೆಗೆ 4 ದಿನಗಳ ಕಾಲ ವಿಶೇಷ ಕಲಾಪವನ್ನು ಸರ್ಕಾರ ಕರೆದಿದೆ.

ನವದೆಹಲಿ : ಭಾರೀ ಕುತೂಹಲ ಮೂಡಿಸಿರುವ ಮತ್ತು ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆ ಇರುವ ಸಂಸತ್‌ ವಿಶೇಷ ಕಲಾಪಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮುಹೂರ್ತ ಫಿಕ್ಸ್‌ ಮಾಡಿದೆ. ಡಿ.30ರಿಂದ ಡಿ.3ರವರೆಗೆ 4 ದಿನಗಳ ಕಾಲ ವಿಶೇಷ ಕಲಾಪವನ್ನು ಸರ್ಕಾರ ಕರೆದಿದೆ. ಮಹತ್ವದ ವಿಷಯಗಳಿಗಾಗಿ ಈ ಕಲಾಪ ಕರೆಯಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ, ಇದು ಕಳೆದ ಅಧಿವೇಶನಗಳಲ್ಲಿ ಬಹುಮತವಿಲ್ಲದೆ ಸೋಲು ಕಂಡಿದ್ದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲೆಂದೇ ಕರೆಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇದಕ್ಕೆ ಪೂರಕವಾಗಿ ಶುಕ್ರವಾರ ಕೇಂದ್ರ ಸಚಿವ ಸಂಪುಟದ ಸಭೆ ಕರೆಯಲಾಗಿದ್ದು, ಅದರಲ್ಲಿ ಸಂಸತ್ತಿನ ವಿಶೇಷ ಕಲಾಪದಲ್ಲಿ ಮಂಡಿಸುವ ವಿಧೇಯಕಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಲೋಕಸಭೆ ಕಲಾಪ ಡಿ.30 ಮತ್ತು ಜ.1ರಿಂದ ನಡೆಯಲಿದ್ದರೆ, ರಾಜ್ಯಸಭೆ ಕಲಾಪ ಡಿ.2 ಮತ್ತು 3ರಂದು ನಡೆಯಲಿದೆ.

ಮಸೂದೆ ಏಕೆ?:

1976ರ ಬಳಿಕ ಕ್ಷೇತ್ರ ಮರುವಿಂಗಡಣೆ ಆಗಿಲ್ಲ. ಕಳೆದ 50 ವರ್ಷಗಳಲ್ಲಿ ದೇಶದ ಜನಸಂಖ್ಯೆ, ನಗರ, ಹಳ್ಳಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೊಸ ಜಿಲ್ಲೆಗಳು ಸೃಷ್ಟಿ ಆಗಿವೆ. ಹೀಗಾಗಿ ಬದಲಾವಣೆ ಮತ್ತು ಬೇಡಿಕೆಗೆ ತಕ್ಕಂತೆ ಕ್ಷೇತ್ರ ಮರುವಿಂಗಡನೆ ಮಾಡಬೇಕು. ಜೊತೆಗೆ ಜಸನಂಖ್ಯೆಗೆ ಅನುಗುಣವಾಗಿ ಸಂಸತ್ತಿನ ಸ್ಥಾನ ಹೆಚ್ಚಿಸಬೇಕು. ಆಗ ಜನರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕುತ್ತದೆ ಎಂಬುದು ಸರ್ಕಾರದ ವಾದ.

ಈ ನಡುವೆ ಸರ್ಕಾರ ಮಹಿಳೆಯರಿಗೆ ಶಾಸನಸಭೆಯಲ್ಲಿ ಶೇ.33ರಷ್ಟು ಮೀಸಲು ಕೊಡುವ ಉದ್ದೇಶ ಹೊಂದಿದೆ. ಆದರೆ ಮಹಿಳೆಯರಿಗೆ ಹಾಲಿ ಇರುವ ಸ್ಥಾನಗಳಲ್ಲೇ ನೀಡಲು ಮುಂದಾದರೆ, ಹಾಲಿ ಪುರುಷ ಸಂಸದರು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಂಸತ್ತಿನ ಸ್ಥಾನಬಲವನ್ನು ಹಾಲಿ ಇರುವ 543ರಿಂದ 850ಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಎರಡೂ ಮಸೂದೆಗಳನ್ನು ಜಂಟಿಯಾಗಿ ಮಂಡಿಸಲು ಸರ್ಕಾರ ಮುಂದಾಗಿದೆ.

ವಿರೋಧ:

ಮಹಿಳಾ ಮೀಸಲು ಮಸೂದೆಗೆ ವಿಪಕ್ಷಗಳ ಬೆಂಬಲ ಇದೆಯಾದರೂ, ಅದನ್ನು ಕ್ಷೇತ್ರ ಮರುವಿಂಗಡನೆ ಬಿಲ್‌ ಜೊತೆ ಸೇರಿಸಿರುವುದಕ್ಕೆ ವಿಪಕ್ಷಗಳ ಅದರಲ್ಲೂ ದಕ್ಷಿಣದ ರಾಜ್ಯಗಳ ಭಾರೀ ವಿರೋಧವಿದೆ.

ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಯ ಮಾನದಂಡವನ್ನು ಪ್ರಸ್ತಾಪಿಸಿಲ್ಲ. ಅದು ಗೊತ್ತಾಗದೇ ಹೋದಲ್ಲಿ ಜೊತೆಗೆ 2011ರ ಜನಗಣತಿ ಅನ್ವಯ ಕ್ಷೇತ್ರ ಮರುವಿಂಗಡಣೆ ಮಾಡಿದರೆ ಜನಸಂಖ್ಯೆ ನಿಯಂತ್ರಣ ಮಾಡಿದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ದಕ್ಷಿಣದ ರಾಜ್ಯಗಳ ವಾದ. ಜೊತೆಗೆ ಬಿಜೆಪಿ ಆಡಳಿತದ ರಾಜ್ಯಗಳ ಸ್ಥಾನ ಹೆಚ್ಚಿಸುವ ಮೂಲಕ 2029ರ ಲೋಕಸಭಾ ಚುನಾವಣೆ ಗೆಲ್ಲುವ ಹುನ್ನಾರ ಈ ಪ್ರಸ್ತಾವದ ಹಿಂದಿದೆ ಎಂಬುದು ವಿಪಕ್ಷಗಳ ವಾದ. ಹೀಗಾಗಿಯೇ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡನೆ ಮಸೂದೆ ಎರಡನ್ನೂ ಪ್ರತ್ಯೇಕವಾಗಿ ಮಂಡಿಸಿ ಎಂದು ಅವು ಸರ್ಕಾರವನ್ನು ಒತ್ತಾಯಿಸುತ್ತಿವೆ.

ಸಂಖ್ಯಾಬಲ ಹೇಗಿದೆ:

543 ಸದಸ್ಯ ಬಲದ ಲೋಕಸಭೆಯಲ್ಲಿ ಇದೀಗ 540 ಸದ್ಯಸ್ಯರಿದ್ದು ಮಸೂದೆ ಅಂಗೀಕಾರಕ್ಕೆ 361 ಮತ ಬೇಕು. ಆದರೆ ಎನ್‌ಡಿಎ ಬಳ ಇರುವುದು 320 ಸದಸ್ಯರು ಮಾತ್ರ. ಆದರೆ ಕಳೆದ ಅಧಿವೇಶನದ ಬಳಿಕ 26 ವಿಪಕ್ಷ ಸಂಸದರು ಬಣ ಬದಲಾಯಿಸಿದ್ದಾರೆ. ಅವರ ಬೆಂಬಲದ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಜೊತೆಗೆ ಕೆಲವು ವಿಪಕ್ಷಗಳ ನೆರವಿನ ನಿರೀಕ್ಷೆಯನ್ನೂ ಇಟ್ಟುಕೊಂಡಿದೆ. ಅದೇ ರೀತಿ ರಾಜ್ಯಸಭೆಯಲ್ಲಿ ಚಮತ್ಕಾರದ ನಿರೀಕ್ಷೆಯಲ್ಲಿ ಸರ್ಕಾರ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಿಮ್ಮಪ್ಪನಿಗೆ ₹208 ಕೋಟಿಯ 121 ಕೆ.ಜಿ. ಚಿನ್ನ, ವಜ್ರ ಕಾಣಿಕೆ
ಭಾರತೀಯರ ಜೀವನ ಪಯಣದ ಅವಿಭಾಜ್ಯ ಅಂಗ ಸಂವಿಧಾನ