ಮಹಾಕುಂಭಮೇಳದಲ್ಲಿ ಕಾಲ್ತುಳಿತ : ರಾಜ್ಯದ ನಾಲ್ವರು ಸೇರಿ 30 ಬಲಿ - 60 ಜನರಿಗೆ ಗಾಯ

ಸಾರಾಂಶ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಬುಧವಾರ ದುರ್ಘಟನೆಯೊಂದು ಸಂಭವಿಸಿದೆ. ಪವಿತ್ರ ಮೌನಿ ಅಮಾವಾಸ್ಯೆ ದಿನ ಪುಣ್ಯಸ್ನಾನಕ್ಕಾಗಿ ನೆರೆದಿದ್ದ ಕೋಟ್ಯಂತರ ಜನರ ಪೈಕಿ ಲಕ್ಷಾಂತರ ಜನರು ಏಕಾಏಕಿ ನದಿಯತ್ತ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ.

ಮಹಾಕುಂಭನಗರ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಬುಧವಾರ ದುರ್ಘಟನೆಯೊಂದು ಸಂಭವಿಸಿದೆ. ಪವಿತ್ರ ಮೌನಿ ಅಮಾವಾಸ್ಯೆ ದಿನ ಪುಣ್ಯಸ್ನಾನಕ್ಕಾಗಿ ನೆರೆದಿದ್ದ ಕೋಟ್ಯಂತರ ಜನರ ಪೈಕಿ ಲಕ್ಷಾಂತರ ಜನರು ಏಕಾಏಕಿ ನದಿಯತ್ತ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕರ್ನಾಟಕ ಬೆಳಗಾವಿಯ ನಾಲ್ವರು ಸೇರಿದಂತೆ ಒಟ್ಟು 30 ಜನರು ಸಾವನ್ನಪ್ಪಿದ್ದು, 60 ಜನರು ಗಾಯಗೊಂಡಿದ್ದಾರೆ.

ಘಟನೆ ಕುರಿತು ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದು, ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆಗೆ ಉತ್ತರಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರು. ಪರಿಹಾರ ಪ್ರಕಟಿಸಿದೆ.

ಈ ನಡುವೆ ಕೋಟ್ಯಂತರ ಜನರು ಸೇರಿದ್ದ ಕಾರ್ಯಕ್ರಮದ ವೇಳೆ ಭಾರೀ ಪ್ರಮಾಣದ ಕಾಲ್ತುಳಿತ ಸಂಭವಿಸಿದ್ದರೂ, ಸ್ಥಳದಲ್ಲಿ ಉತ್ತರಪ್ರದೇಶ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ನಿರ್ಮಿಸಿದ್ದ ಹಸಿರು ಕಾರಿಡಾರ್‌ ಮತ್ತು ವೈದ್ಯಕೀಯ ಸೌಕರ್ಯಗಳು ಇನ್ನಷ್ಟು ಸಾವು-ನೋವು ತಪ್ಪಿಸಿವೆ ಎಂಬ ಮಾತುಗಳು ಕೇಳಿಬಂದಿವೆ.

ಏನಾಯ್ತು?:

ಮೌನಿ ಅಮಾವಾಸ್ಯೆಯ ಬ್ರಹ್ಮಮುಹೂರ್ತದಲ್ಲಿ ಪುಣ್ಯಸ್ನಾನಕ್ಕಾಗಿ ಬುಧವಾರ 10 ಕೋಟಿ ಜನರು ಆಗಮಿಸುವ ನಿರೀಕ್ಷೆ ಇತ್ತು. ಇದಕ್ಕಾಗಿ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿತ್ತು. ಮುಂಜಾನೆ 3 ಗಂಟೆ ವೇಳೆಗೆ ಪುಣ್ಯಸ್ನಾನಕ್ಕಾಗಿ ನಾಗಾ ಸಾಧುಗಳು, ಸಂತರು ಸಜ್ಜಾಗಿದ್ದರು. ಜೊತೆಗೆ ದೇಶ-ವಿದೇಶಗಳಿಂದ ಆಗಮಿಸಿದ್ದ ಭಕ್ತರು ಕೂಡ ನೆರೆದಿದ್ದರು. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಆದರೆ ಸಾಧು-ಸಂತರ ಜೊತೆಗೆ ಸ್ನಾನ ಮಾಡಿದರೆ ಹೆಚ್ಚು ಪುಣ್ಯ ಸಿಗಲಿದೆ ಎಂಬ ನಂಬಿಕೆಯಲ್ಲಿ ಅವರೊಂದಿಗೆ ಸ್ನಾನಕ್ಕೆ ತೆರಳುವ ಆಶಯದಿಂದ ಭಕ್ತರ ಸಮೂಹವೊಂದು ಬೆಳಗಿನ ಜಾವ 1-2 ಗಂಟೆ ವೇಳೆಗೇ ಬ್ಯಾರಿಕೇಡ್‌ ದಾಟಿ ನದಿಯತ್ತ ಸಾಗುವ ಯತ್ನ ಮಾಡಿದೆ. ಈ ವೇಳೆ ಆ ಸ್ಥಳದಲ್ಲಿದ್ದ ಜನರ ಜೊತೆಗೆ ಮತ್ತೆ ಲಕ್ಷಾಂತರ ಜನರು ಸೇರಿಕೊಂಡ ಕಾರಣ ಕಾಲ್ತುಳಿತ ಸಂಭವಿಸಿದೆ.

ಮತ್ತೊಂದೆಡೆ ಪವಿತ್ರ ಸ್ನಾನ ಮುಗಿಸಿ ಬಂದವರು, ಸ್ನಾನಕ್ಕೆ ತೆರಳುವವರು ಮುಖಾಮುಖಿಯಾಗಿ ಯಾರೂ ಅತ್ತಿಂದಿತ್ತ ತೆರಳಲು ಸಾಧ್ಯವಾಗದೇ ಪರಿಸ್ಥಿತಿ ವಿಷಮಿಸಿದೆ. ಈ ವೇಳೆ ಪರಿಸ್ಥಿತಿ ಮತ್ತಷ್ಟು ಕೈಮೀರಿ ಒಬ್ಬರ ಮೇಲೆ ಇನ್ನೊಬ್ಬರು ಬಿದ್ದು ಮಹಿಳೆಯರು, ವೃದ್ಧರು ಸಾವ್ನನ್ನಪ್ಪಿದ್ದಾರೆ.

ತಕ್ಷಣವೇ ಗ್ರೀನ್‌ ಕಾರಿಡಾರ್‌ ಮೂಲಕ ಗಾಯಾಳುಗಳನ್ನು ಕುಂಭಮೇಳ ನಗರದಲ್ಲೇ ನಿರ್ಮಿಸಿದ್ದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ 30 ಜನರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ 25 ಜನರು ಗುರುತು ಪತ್ತೆಯಾಗಿದೆ. ಅವರಲ್ಲಿ ಕನ್ನಡಿಗರು ನಾಲ್ವರಿದ್ದರು. ಉಳಿದಂತೆ ಗಾಯಗೊಂಡ 60 ಜನರ ಪೈಕಿ 36 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಉಳಿದವರಿಗೆ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣ್ಯ ಸ್ನಾನ ಸ್ಥಗಿತ:

ಅವಘಡದ ಸುದ್ದಿ ಹೊರಬೀಳುತ್ತಲೇ ಹಲವು ಅಖಾಡಗಳು ಬೆಳಗೆ ಪುಣ್ಯಸ್ಥಾನ ಸ್ಥಗಿತಗೊಳಿಸಿದವು. ಬಳಿಕ ಪರಿಸ್ಥಿತಿ ತಿಳಿಯಾದ ಬಳಿಕ ಪುಣ್ಯಸ್ನಾನ ಕೈಗೊಂಡವು.

ಆಗಿದ್ದೇನು?

- ಬುಧವಾರ ಮೌನಿ ಅಮಾವಾಸ್ಯೆ. ಪ್ರಯಾಗದಲ್ಲಿ ಪುಣ್ಯ ಸ್ನಾನ ಮಾಡಲು ಅತ್ಯಂತ ವಿಶೇಷವಾದ ದಿನಗಳಲ್ಲಿ ಇದೂ ಒಂದು

- ಪ್ರಯಾಗರಾಜಕ್ಕೆ 10 ಕೋಟಿ ಭಕ್ತರು ಬರಬಹುದೆಂಬ ಅಂದಾಜಿತ್ತು. ಅದರಂತೆ ಜನರು ಸಾಗರೋಪಾದಿಯಲ್ಲಿ ಬಂದಿದ್ದರು

- ಬುಧವಾರ ಮುಂಜಾನೆ 3ಕ್ಕೆ ನಾಗಾಸಾಧುಗಳು, ಸಂತರು ಸಜ್ಜಾಗಿದ್ದರು. ಅವರ ಬಳಿಕ ಇತರರು ಮಿಂದೇಳಬೇಕಾಗಿತ್ತು

- ಸಾಧು-ಸಂತರ ಜತೆ ಅಥವಾ ಅವರು ಸ್ನಾನ ಮಾಡಿದ ಬಳಿಕ ನದಿಗಿಳಿದರೆ ಪುಣ್ಯ ಸಿಗಲಿದೆ ಎಂಬ ನಂಬಿಕೆ ಜನರಲ್ಲಿತ್ತು

- ಹೀಗಾಗಿ ಸ್ನಾನಕ್ಕೆ ತೆರಳುವ ಸಲುವಾಗಿ ಬೆಳಗಿನ ಜಾವ 1-2 ಗಂಟೆ ಹೊತ್ತಿಗೇ ಬ್ಯಾರಿಕೇಡ್‌ ದಾಟಲು ಜನ ಮುಂದಾದರು

- ಆಗ ನೂಕು ನುಗ್ಗಲು ಉಂಟಾಗಿ 30 ಜನ ಸಾವಿಗೀಡಾದರು. ಗಾಯಗೊಂಡ 60 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು

80-22340676

ಕರ್ನಾಟಕದಿಂದ

ಸಹಾಯವಾಣಿ

ಪ್ರಯಾಗರಾಜ್‌ಗೆ ನಿಮ್ಮವರು ತೆರಳಿದ್ದಾರಾ? ಸಂಪರ್ಕಕ್ಕೆ ಸಿಗುತ್ತಿಲ್ಲವಾ? ಹಾಗಿದ್ದರೆ 80-22340676 ಸಹಾಯವಾಣಿ ಸಂಪರ್ಕಿಸಬಹುದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಮೃತದೇಹ ತರಲು ಅಧಿಕಾರಿಗಳ ತಂಡ

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟಿದ್ದಾರೆನ್ನಲಾದ ರಾಜ್ಯದ ನಾಲ್ವರ ಮೃತದೇಹಗಳನ್ನು ವಾಪಸ್‌ ತರುವ ಸಂಬಂಧ ರಾಜ್ಯ ಸರ್ಕಾರ ನೊಡೆಲ್‌ ಅಧಿಕಾರಿಗಳ ತಂಡ ನಿಯೋಜಿಸಿದೆ.

ಮೃತಪಟ್ಟ ರಾಜ್ಯದ ನಾಲ್ಕೂ ಮಂದಿ ಬೆಳಗಾವಿಯವರು

ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಬುಧವಾರ ಬೆಳಗಿನ ಜಾವ ಮೌನಿ ಅಮವಾಸ್ಯೆಯ ಪುಣ್ಯಸ್ನಾನದ ವೇಳೆ ನಡೆದ ಕಾಲ್ತುಳಿತದಲ್ಲಿ ತಾಯಿ ಮಗಳು ಸೇರಿ ಬೆಳಗಾವಿಯ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ನಗರದ ವಡಗಾವಿಯ ಜ್ಯೋತಿ ದೀಪಕ ಹತ್ತರವಾಠ್ (44), ಅವರ ಪುತ್ರಿ ಮೇಘಾ ದೀಪಕ ಹತ್ತರವಾಠ್ (24), ಶೆಟ್ಟಿಗಲ್ಲಿ ನಿವಾಸಿ ಅರುಣ್ ಕೋಪರ್ಡೆ (61) ಹಾಗೂ ಶಿವಾಜಿ ನಗರದ ಮಹಾದೇವಿ ಹನಮಂತ ಭವನೂರ (48) ಮೃತಪಟ್ಟವರು. ಕಳೆದ ಮೂರು ದಿನದ ಹಿಂದೆ ಬೆಳಗಾವಿ ನಾನಾ ಭಾಗದ 60 ಜನರು ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲತ ಎರಡು ಬಸ್‌ನಲ್ಲಿ ಪ್ರಯಾಗರಾಜ್‌ಗೆ ತೆರಳಿದ್ದರು.

ನಾವಿದ್ದ ಸ್ಥಳಕ್ಕೆ ಜನನುಗ್ಗಿದರು: ಕನ್ನಡತಿ

ಪ್ರಯಾಗರಾಜ್‌: ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದ ತೆರಳಿದ್ದ ಭಕ್ತೆಯೊಬ್ಬರು ಮಾತನಾಡಿದ್ದಾರೆ. ‘ನಾವು 60 ಜನ 2 ಬಸ್ಸುಗಳಲ್ಲಿ ಬಂದು, 9 ಗುಂಪುಗಳಲ್ಲಿ ಇದ್ದೆವು. ಇದ್ದಕ್ಕಿದ್ದಂತೆ ಗುಂಪಿನಲ್ಲಿ ನೂಕಾಟ ಶುರುವಾಗಿ ನಾವು ಸಿಕ್ಕಿಹಾಕಿಕೊಂಡೆವು. ನಾವಿದ್ದ ಸ್ಥಳವನ್ನು ಸುತ್ತಲಿನಿಂದಲೂ ಜನರು ಆವರಿಸಿಕೊಂಡರು. ಹೀಗಾಗಿ ನಾವು ಎಲ್ಲೂ ಹೋಗಲಾಗದೇ ಅಲ್ಲೇ ಸಿಕ್ಕಿಹಾಕಿಕೊಂಡೆವು. ಈ ವೇಳೆ ನೂಕಾಟ ತಳ್ಳಾಟದಲ್ಲಿ ಹಲವರು ಕೆಳಗೆ ಬಿದ್ದರು. ಪರಿಸ್ಥಿತಿ ಅದಾಗಲೇ ಕೈಮೀರಿತ್ತು’ ಎಂದು ಸರೋಜಿನಿ ಎಂಬ ಪ್ರತ್ಯಕ್ಷದರ್ಶಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ

ನನಗೆ ಅತೀವ

ನೋವಾಗಿದೆ

ಪ್ರಯಾಗದಲ್ಲಿನ ದುರ್ಘಟನೆಯು ನನಗೆ ಅತೀವ ನೋವುಂಟು ಮಾಡಿದೆ. ಕಾಲ್ತುಳಿತದಲ್ಲಿ ಮಡಿದವರ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಉತ್ತರ ಪ್ರದೇಶ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.

- ನರೇಂದ್ರ ಮೋದಿ, ಪ್ರಧಾನಿ

8ರಿಂದ10 ಕೋಟಿ ಜನರಿಂದ ಸ್ನಾನ

ಪ್ರಯಾಗರಾಜ್‌: ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಬುಧವಾರ ಅಂದಾಜು 8- 10 ಕೋಟಿ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಕಾಲ್ತುಳಿತದ ಬಳಿಕ ನೆರೆ ಹೊರೆ ಜಿಲ್ಲೆಗಳಿಂದ ಆಗಮಿಸುವವರನ್ನು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ತಡೆಯುವ ಮೂಲಕ ಪರಿಸ್ಥಿತಿ ನಿಯಂತ್ರಿಸುವ ಯತ್ನವನ್ನೂ ಮಾಡಿತ್ತು.

 

Share this article