ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ

KannadaprabhaNewsNetwork |  
Published : Dec 23, 2025, 04:15 AM ISTUpdated : Dec 23, 2025, 04:22 AM IST
DK Shivakumar

ಸಾರಾಂಶ

ಸರ್ಕಾರ ಹೇಳಿದಂತೆ 60:40 ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಹೀಗಾದರೆ ಯೋಜನೆಯೇ ಸತ್ತು ಹೋಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.

 ಬೆಂಗಳೂರು :  ‘ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ (ಎಂಜಿ-ನರೇಗಾ ಅಥವಾ ಮನರೇಗಾ) ಹೆಸರು ಹಾಗೂ ರೂಪುರೇಷೆ ಬದಲಿಸಿ ‘ವಿಬಿ-ಜಿ ರಾಮ್‌ ಜಿ’ ಎಂದು ಹೆಸರಿಡಲಾಗಿದೆ. ಈ ಮೂಲಕ ಬಿಜೆಪಿಯ ಅಂತ್ಯ ಆರಂಭವಾಗಿದೆ. ಕೇಂದ್ರ ಸರ್ಕಾರ ಹೇಳಿದಂತೆ 60:40 ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಹೀಗಾದರೆ ಯೋಜನೆಯೇ ಸತ್ತು ಹೋಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ಮಂಗಳವಾರ ಸಭೆ ಕರೆದಿದ್ದಾರೆ. ಇಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

‘ಮನರೇಗಾ ಯೋಜನೆಯಡಿ ಕೇಂದ್ರವು ಶೇ.90 ಹಾಗೂ ರಾಜ್ಯ ಸರ್ಕಾರಗಳು ಶೇ.10 ರಷ್ಟು ಅನುದಾನ ನೀಡಬೇಕಾಗಿತ್ತು. ಇದನ್ನು ಕೇಂದ್ರವು 60:40 ಅನುಪಾತದಲ್ಲಿ ನೀಡುವಂತೆ ಮಾಡಿದ್ದು, ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಈ ರೀತಿ ಆದರೆ ಕಾರ್ಯಕ್ರಮ ಸತ್ತು ಹೋದಂತೆ. ಇದನ್ನು ಸಮಾಧಿ ಮಾಡಲಾಗಿದೆ. ಪರೋಕ್ಷವಾಗಿ ಕೊಲೆ ಮಾಡಲಾಗಿದೆ ಎಂದು ದೂರಿದರು.

ಪಂಚಾಯ್ತಿಯಿಂದ ಸಂಸತ್ತಿನವರೆಗೂ ಹೋರಾಟ:

‘ಹುಟ್ಟಿದ ಸೂರ್ಯ ಮುಳುಗಲೇ ಬೇಕು. ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿಯ ಅಂತ್ಯದ ದಿನಗಳು ಆರಂಭವಾಗಿವೆ. ಈ ಹೆಸರು ಬದಲಾವಣೆ ಹಿಂಪಡೆಯುವವರೆಗೂ ಪಂಚಾಯ್ತಿಯಿಂದ ಸಂಸತ್ತಿನವರೆಗೆ ಹೋರಾಟ ರೂಪಿಸುತ್ತೇವೆ. ಪಕ್ಷದ ಮುಂಬರುವ ಕಾರ್ಯಕಾರಿಣಿ‌ ಸಭೆಯಲ್ಲಿ ಹೋರಾಟದ ರೂಪುರೇಷೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಆರ್ಟಿಕಲ್-21 ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ. ಕೇಂದ್ರವು ಬಡವರಿಗೆ ಕೊಟ್ಟ ಕಾರ್ಯಕ್ರಮದ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ದೇಶದ ಬಡಜನತೆಗೆ ಎಸಗುತ್ತಿರುವ ದ್ರೋಹವಿದು. ಇದಕ್ಕಿಂತ ದೊಡ್ಡ ಅವಮಾನವಿಲ್ಲ’ ಎಂದು ಕಿಡಿಕಾರಿದರು.

‘ಸರ್ಕಾರ ಮತ್ತು ಪಕ್ಷ ಒಟ್ಟಾಗಿ ನರೇಗಾ ಯೋಜನೆಯ ವಿರುದ್ದ ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ವಿರೋಧಿಸಿ ಹೋರಾಟ ಮಾಡುತ್ತೇವೆ. ಇದು ರಾಷ್ಟ್ರೀಯ ವಿಚಾರ. ಪಂಚಾಯತಿಗೆ, ಮತದಾರರಿಗೆ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ನೀಡಿರುವ ಹಕ್ಕನ್ನು ಕಾಂಗ್ರೆಸ್ ಪಕ್ಷ ಕಾಪಾಡಲಿದೆ. ಕಾಪಾಡಲು ಹೋರಾಟ ರೂಪಿಸಲಿದೆ’ ಎಂದು ಹೇಳಿದರು.

ಜನಾಭಿಪ್ರಾಯ ರೂಪಿಸುತ್ತೇವೆ:

ಇಡೀ ಭಾರತದಲ್ಲಿಯೇ ನನ್ನ ಕನಕಪುರ ಕ್ಷೇತ್ರ ಅತಿ ಹೆಚ್ಚು ನರೇಗಾ ಕಾಮಗಾರಿಗಳನ್ನು ನಡೆಸಿದ ಕ್ಷೇತ್ರ. ಇಲ್ಲಿನ‌ ಕೆಲಸಗಳನ್ನು ನೋಡಿ ನನಗೆ ಎಲ್ಲಿ ಪ್ರಶಸ್ತಿ ನೀಡಬೇಕಾಗುತ್ತದೋ ಎಂದು ಕ್ಷೇತ್ರದ ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ ಪ್ರಶಸ್ತಿ ನೀಡಿದರು. ಇದು ಬಿಜೆಪಿಯ ನಿಜ ಬಣ್ಣ ಎಂದು ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದರು.

ಡಿಕೆಶಿ ವಾದವೇನು?

- ನರೇಗಾ ಯೋಜನೆಯಡಿ ಕೇಂದ್ರ ಶೇ.90, ರಾಜ್ಯ ಶೇ.10 ಅನುದಾನ ನೀಡುತ್ತಿದ್ದವು

- ಇದೀಗ ಅನುದಾನದ ಪಾಲನ್ನು 60:40 ಅನುಪಾತಕ್ಕೆ ಕೇಂದ್ರ ಸರ್ಕಾರ ಬದಲಿಸಿದೆ

- 60:40 ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವೇ ಇಲ್ಲ

- ಈ ಮೂಲಕ ಯೋಜನೆಯನ್ನು ಕೇಂದ್ರ ಸರ್ಕಾರ ಪರೋಕ್ಷವಾಗಿ ಕೊಲೆ ಮಾಡಿದೆ

- ಗಾಂಧೀಜಿ ಹೆಸರು ಕೈಬಿಡು ಮೂಲಕ ಕೇಂದ್ರ ಬಿಜೆಪಿ ಅಂತ್ಯದ ದಿನಗಳ ಆರಂಭ

- ಪಂಚಾಯ್ತಿಯಿಂದ ಸಂಸತ್ತಿನವರೆಗೂ ಹೆಸರು ಬದಲು ವಿರುದ್ಧ ಹೋರಾಡುತ್ತೇವೆ

- ಪಕ್ಷದ ಮುಂಬರುವ ಕಾರ್ಯಕಾರಿಣಿ‌ಯಲ್ಲಿ ಹೋರಾಟದ ರೂಪುರೇಷೆ ನಿರ್ಧಾರ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಿಚ್ಚನ ವೀರಾವೇಶ ದರ್ಶನ್ವಿರುದ್ಧ ಅಲ್ಲ, ಪೈರಸಿ ಬಗ್ಗೆ!
₹1.50 ಲಕ್ಷದತ್ತ ಚಿನ್ನದರ ನಾಗಾಲೋಟ!