ಪರೀಕ್ಷೆಯ ವೇಳೆ ನಿದ್ರೆ ತಪ್ಪಿಸಲು ‘ಉಗ್ರರ ಮಾತ್ರೆ’ಗೆ ಮಕ್ಕಳ ಮೊರೆ!

KannadaprabhaNewsNetwork |  
Published : Feb 19, 2024, 01:34 AM ISTUpdated : Feb 19, 2024, 12:16 PM IST
abortion tablet

ಸಾರಾಂಶ

ಪರೀಕ್ಷೆಯ ಸಮಯದಲ್ಲಿ ನಿದ್ರೆಗೆ ಜಾರುವುದನ್ನು ತಪ್ಪಿಸಲು ವಿದ್ಯಾರ್ಥಿಗಳು ಉಗ್ರರು ನುಂಗುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಲಖನೌ: ಪರೀಕ್ಷೆಯ ಸಮಯದಲ್ಲಿ ನಿದ್ರೆಗೆ ಜಾರುವುದನ್ನು ತಪ್ಪಿಸಲು ವಿದ್ಯಾರ್ಥಿಗಳು ಉಗ್ರರು ನುಂಗುವಂತಹ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಇಂಥ ಮಾತ್ರೆಗಳ ಬಳಕೆ ತಡೆಗೆ ಅಗತ್ಯ ಕ್ರಮ, ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

10ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್‌ ಎಂಬ ವಿದ್ಯಾರ್ಥಿನಿ ಇತ್ತೀಚೆಗೆ ಏಕಾಏಕಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಳು. 

ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳೆಲ್ಲಾ ಊದಿಕೊಂಡಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇದೀಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ವಿದ್ಯಾರ್ಥಿನಿ ಆಸ್ಪತ್ರೆ ದಾಖಲಾದ ವೇಳೆ ಆಕೆಯ ಪೋಷಕರು ಮನೆಯಲ್ಲಿನ ಆಕೆಯ ಕೋಣೆ ತಪಾಸಣೆ ಮಾಡಿದಾಗ ಅಲ್ಲಿ ಒಂದು ಬಾಟಲ್‌ನಲ್ಲಿ ಮಾತ್ರೆ ಕಂಡಿದೆ. ಅದನ್ನು ವೈದ್ಯರಿಗೆ ತೋರಿಸಿದಾಗ ಅದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂಬುದು ಕಂಡುಬಂದಿದೆ. 

ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಪರೀಕ್ಷೆ ವೇಳೆ ರಾತ್ರಿಯಿಡೀ ಎಚ್ಚರದಿಂದಿರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಇದು ಪೋಷಕರು ಮತ್ತು ವೈದ್ಯರು ಇಬ್ಬರನ್ನೂ ಕಳವಳಕ್ಕೆ ಗುರಿ ಮಾಡಿದೆ.

ಏನಿದು ನಿದ್ರೆ ತಡೆವ ಮಾತ್ರೆ?: ದೇಹದಲ್ಲಿ ಚೈತನ್ಯ ಮೂಡಿಸುವ, ಜ್ಞಾಪಕ ಶಕ್ತಿ, ಅರಿವಿನ ಶಕ್ತಿ ಹೆಚ್ಚಿಸುತ್ತದೆ ಎಂದು ವಾದಿಸಲಾಗುವ ಮೊಡಾಫಿನಿಲ್‌ ರಾಸಾಯನಿಕದ ಮತ್ತೊಂದು ಸಂಯೋಜನೆಯನ್ನು ಹೊಂದಿರುವ ಮಾತ್ರೆ ಇದಾಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ನಿದ್ರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಸಾಮಾನ್ಯವಾಗಿ ದೀರ್ಘಕಾಲದ ಕಾರ್ಯಾಚರಣೆ ಕೈಗೊಳ್ಳುವ ಉಗ್ರರು ನಿದ್ರೆ ಬಾಧಿಸದಿರಲಿ ಎಂಬ ಕಾರಣಕ್ಕೆ ಈ ಮಾತ್ರೆಗಳನ್ನು ಸೇವಿಸುತ್ತಾರೆ. 

ಈ ಸಂಯೋಜನೆ ಹೊಂದಿರುವ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರದಿದ್ದರೂ ಸಹ ಕಳ್ಳ ಮಾರ್ಗದಲ್ಲಿ, ಬೇರೆ ಬೇರೆ ಹೆಸರಲ್ಲಿ ಈ ಮಾತ್ರೆಗಳನ್ನು ಭಾರತಕ್ಕೆ ಸಾಗಿಸಲಾಗುತ್ತದೆ. ಇದೇ ಮಾತ್ರೆಗಳನ್ನು ವಿದ್ಯಾರ್ಥಿಗಳು ಕೂಡಾ ಸೇವಿಸುತ್ತಿದ್ದಾರೆ ಎಂಬುದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಗಂಭೀರ ಸಮಸ್ಯೆ: ಇಂಥ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವನೆ ಮಾಡುತ್ತಿರುವುದು ಆತಂಕದ ವಿಷಯ. ಇವುಗಳ ಅತಿಯಾದ ಬಳಕೆಯಿಂದ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ತುತ್ತಾಗುತ್ತಾರೆ. 

26/11ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಬ್ಯಾಗಿನಲ್ಲಿ ಈ ಮಾತ್ರೆ ಮೊದಲ ಬಾರಿ ಪತ್ತೆಯಾಗಿತ್ತು ಎಂದು ತಜ್ಞ ಡಾ.ಆರ್‌.ಕೆ. ಸಕ್ಸೇನಾ ಹೇಳಿದ್ದಾರೆ.

ಪರೀಕ್ಷಾ ಸಮಯಗಳಲ್ಲಿ ಇಂಥ ಮಾತ್ರೆಗಳ ಮಾರಾಟ ಏಕಾಏಕಿ ಹೆಚ್ಚುತ್ತದೆ ಎಂಬ ಅಂಶಗಳನ್ನು ಹಲವು ಮೆಡಿಕಲ್‌ ಶಾಪ್‌ಗಳ ಮಾಲೀಕರು ಒಪ್ಪಿಕೊಂಡಿದ್ದು, ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಇವುಗಳಿಗೆ ಮೊರೆ ಹೋಗುತ್ತಿರುವುದನ್ನು ದೃಢಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ