ಕೇಜ್ರಿ ಉತ್ತರಾಧಿಕಾರಿ ಯಾರು?

KannadaprabhaNewsNetwork | Updated : Mar 23 2024, 09:00 AM IST

ಸಾರಾಂಶ

ಕೇಜ್ರಿ ಪತ್ನಿ ಸುನಿತಾ, ಅತಿಷಿ, ಸೌರಭ್‌ ಭಾರದ್ವಾಜ್‌ ಸಿಎಂ ರೇಸಲ್ಲಿದ್ದು, ಪಕ್ಷದ ಸಂಚಾಲಕ ಹುದ್ದೆ ರೇಸಲ್ಲಿ ಆತಿಷಿ, ಸುನಿತಾ, ಮಾನ್ ಇದ್ದಾರೆ.

ಪಿಟಿಐ ನವದೆಹಲಿ

ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಕಾರಣ ಅವರ ಉತ್ತರಾಧಿಕಾರಿ ಯಾರು ಆಗಬಲ್ಲರು ಎಂಬ ಪ್ರಶ್ನೆ ಎದ್ದಿದೆ. 

ಮೂಲಗಳ ಪ್ರಕಾರ ಕೇಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್‌, ಸಚಿವರಾದ ಆತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಹೆಸರುಗಳು ದಿಲ್ಲಿ ಸಿಎಂ ಸ್ಥಾನಕ್ಕೆ ಮುಂಚೂಣಿಗೆ ಬಂದಿವೆ.

ಕೇಜ್ರಿವಾಲ್‌ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಾರೆ ಎಂದು ಅವರ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ಜೈಲಿನಿಂದ ಆಡಳಿತ ನಡೆಸುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. 

ಹೀಗಾಗಿ ಕೇಜ್ರಿವಾಲ್‌ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.ಆದಾಗ್ಯೂ ಕೇಜ್ರಿವಾಲ್‌ ಅವರಷ್ಟು ಎತ್ತರದ ಹಾಗೂ ವರ್ಚಸ್ವಿ ನಾಯಕ ಪಕ್ಷದಲ್ಲಿ ಇಲ್ಲ ಎಂಬುದು ನಿರ್ವಿವಾದ. 

ಏಕೆಂದರೆ ಕೇಜ್ರಿವಾಲ್ ಅವರ ಬಲಗೈನಂತಿದ್ದ ಪ್ರಭಾವಿ ನಾಯಕರಾದ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಹಾಗೂ ಸಂಸದ ಸಂಜಯ್‌ ಸಿಂಗ್‌ ಅವರು ಈಗಾಗಲೇ ಇದೇ ದಿಲ್ಲಿ ಮದ್ಯ ಹಗರಣದಲ್ಲಿ ಜೈಲಲ್ಲಿದ್ದಾರೆ.

ಆದರೆ ಮಾಜಿ ಐಆರ್‌ಎಸ್‌ ಅಧಿಕಾರಿ ಆಗಿರುವ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಹೆಸರು ಈಗ ಮುಂಚೂಣಿಗೆ ಬಂದಿದೆ. ಸಾಕಷ್ಟು ಪ್ರಭಾವಿ ಖಾತೆ ಹೊಂದಿರುವ ಸಚಿವೆ ಆತಿಷಿ ಹಾಗೂ ಸೌರಭ್‌ ಭಾರದ್ವಾಜ್‌ ಹೆಸರುಗಳು ಕೂಡ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಸಂಚಾಲಕ ಹುದ್ದೆಗೆ ಕೇಳಿ ಬರುತ್ತಿವೆ.

ಇನ್ನು ಆಪ್‌ ರಾಷ್ಟ್ರೀಯ ಪಕ್ಷ ಆಗಿರುವ ಕಾರಣ ಪಕ್ಷದ ಸಂಚಾಲಕ ಹುದ್ದೆಗೂ ಸುನಿತಾ ಕೇಜ್ರಿವಾಲ್‌ ಹಾಗೂ ಆತಿಷಿ ಹೆಸರು ಮುಂಚೂಣಿಯಲ್ಲಿವೆ. ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಹೆಸರೂ ಚಾಲ್ತಿಯಲ್ಲಿದೆ.

Share this article