ನೀಟ್‌ನಲ್ಲಿ ಎಳ್ಳಷ್ಟು ಲೋಪ ಆಗಿದ್ದರೂ ಕ್ರಮ: ಸುಪ್ರೀಂ ತಾಕೀತು

KannadaprabhaNewsNetwork |  
Published : Jun 19, 2024, 01:07 AM ISTUpdated : Jun 19, 2024, 01:08 AM IST
ನೀಟ್‌ ಪ್ರತಿಭಟನೆ | Kannada Prabha

ಸಾರಾಂಶ

ತಪ್ಪಾಗಿದ್ದರೆ ಒಪ್ಪಿ, ತಿದ್ದಿಕೊಳ್ಳುವ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್‌ ಎನ್‌ಟಿಎಗೆ ತರಾಟೆ ತೆಗೆದುಕೊಂಡಿದ್ದು, ಅಕ್ರಮ ನಡೆಸಿದ ವಿದ್ಯಾರ್ಥಿ ವೈದ್ಯನಾದರೆ ಸಮಾಜಕ್ಕೆ ಅತಿ ಮಾರಕ ಎಂದು ಎಚ್ಚರಿಸಿದೆ.

ಪಿಟಿಐ ನವದೆಹಲಿ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ‘ನೀಟ್‌-ಯುಜಿ’ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ‘ಪರೀಕ್ಷೆಯಲ್ಲಿ ಶೇ.0.0001ರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಅದನ್ನು ಅತ್ಯಂತ ಕಠಿಣವಾಗಿ ನಿರ್ವಹಿಸಬೇಕು’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ತಾಕೀತು ಮಾಡಿ ಚಾಟಿ ಬೀಸಿದೆ. ಈ ಮೂಲಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳು, ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ನೀಟ್‌ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ವಿಕ್ರಂ ಸಂಪತ್‌ ಮತ್ತು ನ್ಯಾ. ಎಸ್‌.ವಿ.ಎನ್‌.ಭಟ್‌ ಅವರನ್ನೊಳಗೊಂಡ ನ್ಯಾಯಪೀಠ, ‘ಮಕ್ಕಳು ಪರೀಕ್ಷೆ ಎದುರಿಸಲು ಏನೆಲ್ಲಾ ಕಠಿಣ ಶ್ರಮ ಹಾಕಿರುತ್ತಾರೆ, ಅದರಲ್ಲೂ ಇಂಥ ಪರೀಕ್ಷೆಗಳಲ್ಲಿ ಅವರ ಶ್ರಮ ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಈ ವಿಷಯದಲ್ಲಿ ಯಾರಿಂದಲೇ ಆಗಲಿ ಶೇ.0.0001ರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಅದನ್ನು ಕಠಿಣಾತಿಕಠಿಣವಾಗಿ ನಿರ್ವಹಿಸಬೇಕು ಎಂದು ಎನ್‌ಟಿಎಗೆ ಸೂಚಿಸಿತು.

ಅಲ್ಲದೆ ‘ವ್ಯವಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬ ಅಕ್ರಮ ಎಸಗಿ ವೈದ್ಯನಾದ ಎಂದಿಟ್ಟುಕೊಳ್ಳಿ, ಆತ ಸಮಾಜಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.ಇದೇ ವೇಳೆ, ‘ಪರೀಕ್ಷಾ ಸಂಸ್ಥೆಯವರು, ಒಂದು ವೇಳೆ ತಪ್ಪಾಗಿದ್ದರೆ, ಹೌದು ತಪ್ಪಾಗಿದೆ ಎಂದು ಒಪ್ಪಿಕೊಳ್ಳಬೇಕು ಮತ್ತು ‘ಈ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಅದು ಕನಿಷ್ಠ ನಿಮ್ಮ ಕಾರ್ಯನಿರ್ವಹಣೆ ಮೇಲೆ ವಿಶ್ವಾಸ ಮೂಡಿಸುವಂತೆ ಮಾಡುತ್ತದೆ’ ಎಂದು ನೀಟ್‌ ಸೇರಿದಂತೆ ಮಹತ್ವದ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ದ ವಕೀಲರಿಗೆ ಖಡಕ್‌ ಸೂಚನೆ ನೀಡಿತು.ಜೊತೆಗೆ ಈ ವಿಷಯದಲ್ಲಿ ತಕ್ಷಣದ ಕ್ರಮದ ಅಗತ್ಯವನ್ನು ಪ್ರತಿಪಾದಿಸಿದ ನ್ಯಾಯಾಲಯ, ನೀಟ್‌ಗೆ ಸಂಬಂಧಿಸಿದಂತೆ ಸಲ್ಲಿಲಾಗಿರುವ ಎಲ್ಲಾ ಅರ್ಜಿಗಳನ್ನು ಒಂದೂಗೂಡಿಸಿ ಜು.8ರಂದು ವಿಚಾರಣೆ ನಡೆಸುವುದಾಗಿ ಹೇಳಿತು.ನೀಟ್‌ ಅಕ್ರಮದ ಕುರಿತು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಕಳೆದ ವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ತಜ್ಞರ ಸಮಿತಿಯಿಂದ ತನಿಖೆಗೆ ಆದೇಶಿಸಿತ್ತು ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಎನ್‌ಟಿಎದ ಅಭಿಪ್ರಾಯ ಕೋರಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ‘1563 ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್‌ ಅಂಕ ರದ್ದು ಮಾಡಲು ತೀರ್ಮಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳು ಒಂದೋ ಹೊಸದಾಗಿ ಪರೀಕ್ಷೆ ಬರೆಯಬೇಕು ಇಲ್ಲವೇ ಗ್ರೇಸ್‌ ಅಂಕ ಕಡಿತಗೊಳಿಸಿದ ಬಳಿಕದ ಅಂಕವನ್ನು ಇಟ್ಟುಕೊಳ್ಳಬೇಕು’ ಎಂದು ಹೇಳಿತ್ತು. ಇದಕ್ಕೆ ಸುಪ್ರೀಂಕೋರ್ಟ್‌ ಕೂಡಾ ಇದು ಸೂಕ್ತ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು.

ನೀಟ್‌ನಲ್ಲಿ 1563 ಅಭ್ಯರ್ಥಿಗಳಿಗೆ ಅಕ್ರಮವಾಗಿ ಗ್ರೇಸ್‌ ಅಂಕ ನೀಡಲಾಗಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟಲ್ಲಿ ದಾಖಲಾಗಿವೆ.

24 ಲಕ್ಷ ವಿದ್ಯಾರ್ಥಿಗಳ ವಿಷಯದಲ್ಲಿ ಮೋದಿ ಮೌನ: ರಾಹುಲ್‌ ಕಿಡಿ

ನೀಟ್‌ ಪರೀಕ್ಷೆ ಕುರಿತಂತೆ ಸುಪ್ರೀಂಕೋರ್ಟ್‌ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತೆ ವಾಗ್ಧಾಳಿ ನಡೆಸಿದ್ದಾರೆ.‘24 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಅಂಧಕಾರದಲ್ಲಿ ಮುಳುಗಿಸಿರುವ ನೀಟ್‌ ಪರೀಕ್ಷಾ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಂದಿನಂತೆ ಮೌನ ವಹಿಸಿದ್ದಾರೆ. ಬಿಹಾರ, ಗುಜರಾತ್‌ ಮತ್ತು ಹರ್ಯಾಣದಲ್ಲಿ ಹಗರಣ ಸಂಬಂಧ ನಡೆದಿರುವ ಬಂಧನಗಳು, ನೀಟ್‌ ಪರೀಕ್ಷೆಯಲ್ಲಿ ಯೋಜಿತ ಮತ್ತು ಸಂಘಟಿತ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಮೇಲಾಗಿ ಬಿಜೆಪಿ ಆಡಳಿತದ ರಾಜ್ಯಗಳೇ ಈ ಹಗರಣದ ಕೇಂದ್ರಬಿಂದುವಾಗಿ ಹೊರಹೊಮ್ಮಿವೆ’ ಎಂದು ರಾಹುಲ್‌ ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.

‘ನಮ್ಮ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಕಠಿಣ ಕಾಯ್ದೆಗಳ ಮೂಲಕ ತಡೆದು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಣೆ ನೀಡುವ ಭರವಸೆ ನೀಡಿದ್ದೆವು. ವಿಪಕ್ಷವಾಗಿ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಾವು ಯುವಕರ ಪರವಾಗಿ ಬೀದಿಯಿಂದ ಹಿಡಿದು ಸಂಸತ್ತಿವರೆಗೂ ಧ್ವನಿ ಎತ್ತಲು ಮತ್ತು ಈ ವಿಷಯದಲ್ಲಿ ಕಠಿಣ ನೀತಿ ಜಾರಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಬದ್ಧವಾಗಿದ್ದೇವೆ’ ಎಂದು ರಾಹುಲ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ