ನವದೆಹಲಿ: ಎರಡನೇ ಮಗುವಿನ ಜನನಾನಂತರ ತಾವು ಮನೋರೋಗವೊಂದಕ್ಕೆ ತುತ್ತಾಗಿದ್ದರಿಂದ ತಮ್ಮ ಗರ್ಭದಲ್ಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾ। ಚಂದ್ರಚೂಡ್ ನೇತೃತ್ವದ ಪೀಠ ನೀಡಿದ ತೀರ್ಪಿನಲ್ಲಿ ‘ಏಮ್ಸ್ ವರದಿಯಲ್ಲಿ ಮಗು ಆರೋಗ್ಯಕರ ಬೆಳವಣಿಗೆಯನ್ನು ಹೊಂದುತ್ತಿದೆ ಎಂಬ ಅಂಶವನ್ನು ಪರಿಗಣಿಸಿದಾಗ ಮಗುವನ್ನು ಗರ್ಭಪಾತ ಮಾಡಲು ವಿಶೇಷ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ ಗರ್ಭಪಾತ ಕಾನೂನಿನ ನಿಯಮದಂತೆ 24 ವಾರಗಳ ಮಿತಿಯನ್ನೂ ಮೀರಿರುವುದರಿಂದ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಲಾಗಿದೆ.