ನವದೆಹಲಿ: ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣದ ಸಮಗ್ರ ಮಾಹಿತಿ ನೀಡಲು ನೀಡಿದ್ದ ಸಮಯ ವಿಸ್ತರಣೆ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಜೊತೆಗೆ ಮಾ.6ರೊಳಗೆ ಮಾಹಿತಿ ನೀಡದ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಬೇಕು ಎಂದು ವಕೀಲ ಪ್ರಶಾಂತ್ ಭೂಷಣ್ ಕೋರಿದ್ದ ಅರ್ಜಿಯನ್ನೂ ಇದೇ ವೇಳೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿದ್ದ ಕಾಯ್ದೆಯನ್ನೇ ಅಸಾಂವಿಧಾನಿಕ ಎಂದು ಫೆ.15ರಂದು ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 2019ರ ಏ.12ರಿಂದ 2024ರ ತೀರ್ಪು ಹೊರಡಿಸಿದ ದಿನದವರೆಗೆ ರಾಜಕೀಯ ಪಕ್ಷಗಳು ಬಾಂಡ್ ಮೂಲಕ ಎಷ್ಟು ಹಣ ಸಂಗ್ರಹಿಸಿವೆ, ಹಣ ನೀಡಿದವರು ಯಾರು ಎಂಬುದನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು.