ಕೈ ಗೆದ್ದರೆ ಸಂಪತ್ತು ಸಮಾನ ಹಂಚಿಕೆಗೆ ಸಮೀಕ್ಷೆ: ರಾಹುಲ್‌

ಸಾರಾಂಶ

ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸಮೀಕ್ಷೆ ಮಾಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಹೈದರಾಬಾದ್‌: ಈ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಕುರಿತು ಸಮೀಕ್ಷೆ ಮಾಡಲಾಗುವುದು ಎಂದು ಪಕ್ಷದ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಇಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ರಾಹುಲ್‌ ಗಾಂಧಿ, ‘ಮೊದಲಿಗೆ ನಾವು ದೇಶವ್ಯಾಪಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯದ ಪ್ರಮಾಣ ತಿಳಿಯಲು ಜಾತಿ ಗಣತಿ ನಡೆಸಲಿದ್ದೇವೆ. ಅದಾದ ಬಳಿಕ ಸಂಪತ್ತಿನ ಹಂಚಿಕೆ ಅರಿಯಲು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುತ್ತವೆ. ಎಲ್ಲಾ ವಲಯಗಳಲ್ಲೂ ಎಲ್ಲಾ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳುತ್ತೇವೆ, ಈ ಮೂಲಕ ಜನರಿಗೆ ಅವರ ಹಕ್ಕುಗಳನ್ನು ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಇದೇ ವೇಳೆ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.90ರಷ್ಟು ಪಾಲು ಹೊಂದಿದೆ. ಆದರೆ ಶೇ.90ರಷ್ಟು ಪಾಲು ಹೊಂದಿರುವ ಜನರಿಗೆ ಅವರ ಪಾಲಿನ ಉದ್ಯೋಗದ ಹಕ್ಕು ಸಿಕ್ಕಿಲ್ಲ. ಎಲ್ಲೂ ಅವರು ಉದ್ಯೋಗದಲ್ಲಿರುವುದು ಕಂಡುಬರುವುದಿಲ್ಲ. ದೇಶದ ಆಡಳಿತವನ್ನು ನಡೆಸುವ 90 ಐಎಎಸ್‌ ಅಧಿಕಾರಿಗಳಿದ್ದಾರೆ. ಈ ಪೈಕಿ ಮೂವರು ಮಾತ್ರವೇ ಒಬಿಸಿ ಸಮುದಾಯಕ್ಕೆ ಸೇರಿದವರು, ಒಬ್ಬರು ಆದಿವಾಸಿ ಮತ್ತು ಮೂವರು ದಲಿತರ ಎಂದು ಅಂಕಿ ಅಂಶ ನೀಡಿದರು.

Share this article