ಉ.ಖಂಡ: ಹ್ಯಾಟ್ರಿಕ್‌ ಕ್ಲೀನ್‌ಸ್ವೀಪ್‌ಗೆ ಬಿಜೆಪಿ ಯತ್ನ

KannadaprabhaNewsNetwork | Updated : Apr 12 2024, 05:06 AM IST

ಸಾರಾಂಶ

ದೇವಭೂಮಿ ಎಂದೇ ಖ್ಯಾತಿ ಪಡೆದ ಉತ್ತರಾಖಂಡದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪುನಃ ನೇರ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ.

ಡೆಹ್ರಾಡೂನ್‌: ದೇವಭೂಮಿ ಎಂದೇ ಖ್ಯಾತಿ ಪಡೆದ ಉತ್ತರಾಖಂಡದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪುನಃ ನೇರ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ. ಸತತ 3ನೇ ಚುನಾವಣೆಯಲ್ಲಿ (ಹ್ಯಾಟ್ರಿಕ್‌ ಅವಧಿಗೆ) ಬಿಜೆಪಿ ಎಲ್ಲ 5 ಸ್ಥಾನಗಳನ್ನು ಜಯಿಸಿ ಕ್ಲೀನ್‌ ಸ್ವೀಪ್‌ ಮಾಡಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷ ಈ ಸೋಲಿನ ಸಂಕೋಲೆ ಮುರಿದು 3 ಅಥವಾ 3ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಯತ್ನಿಸುತ್ತಿದೆ.

ಉತ್ತರಾಖಂಡ 5 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯದ ಲೋಕಸಭಾ ಕ್ಷೇತ್ರಗಳೆಂದರೆ ತೆಹ್ರಿ ಗಢವಾಲ್, ಗಢವಾಲ್, ಅಲ್ಮೋರಾ, ನೈನಿತಾಲ್-ಉಧಮಸಿಂಗ್ ನಗರ, ಮತ್ತು ಹರಿದ್ವಾರ.

ಬಿಜೆಪಿ ಲೆಕ್ಕಾಚಾರ ಏನು?:

ರಾಜ್ಯದಲ್ಲಿ ಚೆನ್ನಾಗಿ ಬೇರೂರಿದೆ, 2014 ಮತ್ತು 2019 ರಲ್ಲಿ ಎಲ್ಲಾ ಐದು ಲೋಕಸಭಾ ಸ್ಥಾನಗಳನ್ನು ಗೆದ್ದಿದೆ. 2017 ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅನ್ನು ಸೋಲಿಸಿದೆ. ಪ್ರಬಲವಾದ ಸಾಂಸ್ಥಿಕ ನೆಲೆ, ಕಾರ್ಯಕರ್ತರನ್ನು ಕ್ರಮಬದ್ಧವಾಗಿ ಸಜ್ಜುಗೊಳಿಸುವುದು, ಪ್ರಧಾನಿ ಮೋದಿಯವರ ರಾಜ್ಯ ಪ್ರವಾಸಗಳು ಮತ್ತು ಬದರಿನಾಥ, ಹರಿದ್ವಾರ, ಹೃಷಿಕೇಶ ಅಭಿವೃದ್ಧಿಯಂತಹ ಯೋಜನೆಗಳೊಂದಿಗೆ ಅವರ ವೈಯಕ್ತಿಕ ಗುರುತಿಸುವಿಕೆ- ಪಕ್ಷದ ದೌರ್ಬಲ್ಯ ಮುಚ್ಚಿಹಾಕಲು ಸಹಾಯ ಮಾಡುತ್ತದೆ.

ಇದರ ಜತೆಗೆ ರಾಜ್ಯದ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ಆಶಯದಂತೆ ಕಾರ್ಯನಿರ್ವಹಿಸುತ್ತಿದ್ದು, ಡಬಲ್‌ ಎಂಜಿನ್‌ ಸರ್ಕಾರ ಎಂದು ಖ್ಯಾತಿ ಪಡೆದಿದೆ. ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ತಂದ ಮೊದಲ ರಾಜ್ಯ ಎಂಬ ಖ್ಯಾತಿಗೆ ಉತ್ತರಾಖಂಡ ಪಾತ್ರವಾಗಿದೆ. ಅದನ್ನು ಬಿಜೆಪಿ ಪ್ರಮುಖ ಚುನಾವಣಾ ವಿಷಯ ಆಗಿ ಬಳಸಿಕೊಳ್ಳುತ್ತದೆ. ಇನ್ನು ಕಳೆದ 5 ವರ್ಷದಲ್ಲಿ ಬಿಜೆಪಿಯ ಸಾಕಷ್ಟು ಸಿಎಂಗಳು ಬದಲಾದರೂ ಪುಷ್ಕರ್‌ ಸಿಂಗ್‌ ಧಾಮಿ ಮುಖ್ಯಮಂತ್ರಿ ಆದ ನಂತರ ರಾಜ್ಯ ಬಿಜೆಪಿಯಲ್ಲಿ ಸ್ಥಿರತೆ ಆವರಿಸಿದೆ ಬಿಜೆಪಿ ಗೆಲುವು ಪುಷ್ಕರ್ ಸಿಂಗ್ ಧಾಮಿಗೆ ಪಕ್ಷದಲ್ಲಿ ಅವರ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ . ಮಹತ್ವಾಕಾಂಕ್ಷೆಯ ಯೋಜನೆಗಳು ಚಾರ್ ಧಾಮ್ ಸರ್ವಋತು ರಸ್ತೆ ಬಿಜೆಪಿ ಪ್ರಚಾರದ ಪ್ರಮುಖ ಭಾಗವಾಗಲಿದೆ.

ಆದರೆ ನಿರುದ್ಯೋಗ ಮತ್ತು ಮಹಿಳೆಯರ ವಿರುದ್ಧದ ಅಪರಾಧವು ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಾಗಿವೆ. ಜತೆಗೆ ಸತತವಾಗಿ ಸಂಭವಿಸುತ್ತಿರುವ ರಾಜ್ಯದಲ್ಲಿನ ಪ್ರಾಕೃತಿಕ ವಿಕೋಪ (ಗಂಗೆಯ ಪ್ರಭಾವ, ಭಾರಿ ಪರ್ವತ ಕುಸಿತಗಳು, ಜೋಶಿಮಠದಲ್ಲಿನ ಭೂಕುಸಿತ, ಸಿಲ್‌ಕ್ಯಾರಾ ಸುರಂಗ ಕುಸಿತ.. ಇತ್ಯಾದಿ) ಬಿಜೆಪಿಗೆ ಮುಳುವಾಗುವ ಸಾಧ್ಯತೆ ಕೂಡ ಇದೆ. ಬಿಜೆಪಿಯ ಮಾಜಿ ನಾಯಕನ ಪುತ್ರನು ಪ್ರಮುಖ ಆರೋಪಿಯಾಗಿರುವ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ಚುನಾವಣಾ ವಿಷಯವಾಗಿ ಬದಲಾಗಬಹುದು. ಹೀಗಾಗಿಯೇ ಮತದಾರರ ಮನದಿಂಗಿತ ಅರಿತು ರಾಜ್ಯದಲ್ಲಿ ಕೆಲವು ಬದಲಾವಣೆಗಳನ್ನು ಬಿಜೆಪಿ ಮಾಡಿದೆ. ಪ್ರಮುಖವಾಗಿ ಹರಿದ್ವಾರದಲ್ಲಿ ಹಾಲಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರಿಗೆ ಟಿಕೆಟ್‌ ನಿರಾಕರಿಸಿ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರನ್ನು ಕಣಕ್ಕಿಳಿಸಿದೆ.

ಖಾತೆ ತರೆಯಲು ಕಾಂಗ್ರೆಸ್ ಯತ್ನ:

2014 ಮತ್ತು 2019 ರಲ್ಲಿ ಯಾವುದೇ ಲೋಕಸಭಾ ಸ್ಥಾನವನ್ನು ಗೆಲ್ಲಲು ವಿಫಲವಾದರೂ, ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಗಳ ಹಿಡಿತವನ್ನು ಹೊಂದಿದೆ. ಹರಿದ್ವಾರ ಮತ್ತು ನೈನಿತಾಲ್-ಉಧಮ್ ಸಿಂಗ್ ನಗರಗಳಂತಹ ಪ್ರಮುಖ ಸಂಸದೀಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಇದನ್ನು ಲೋಕಸಭೆ ಚುನಾವಣೆಯಲ್ಲಿ ನಗದೀಕರಣ ಮಾಡಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಅಲ್ಲದೆ, ಹರಿದ್ವಾರದಲ್ಲಿ ಮಾಜಿ ಸಿಎಂ ಹರೀಶ್ ರಾವತ್‌ ಪುತ್ರ ಸೇರಿ ಹಲವು ಕಡೆ ಹೊಸ ಅಭ್ಯರ್ಥಿಗಳನ್ನು ಹಾಕಿ ಕಾಂಗ್ರೆಸ್ ರಣನೀತಿ ಬದಲಿಸಿದೆ.

ಆದರೆ, ರಾಜ್ಯದಲ್ಲಿ ಪಕ್ಷವು ಬಣ ರಾಜಕೀಯದಿಂದ ನಲುಗುತ್ತಿದೆ. ಮಹತ್ವಾಕಾಂಕ್ಷೆಯ ಪ್ರಾದೇಶಿಕ ನಾಯಕರು ಪರಸ್ಪರ ಜಗಳವಾಡುತ್ತಿದ್ದಾರೆ ಇದು ಪಕ್ಷದ ಪ್ರಮುಖ ಋಣಾತ್ಮಕ ಅಂಶ.

ಕಾಂಗ್ರೆಸ್ ಕಾನೂನು ಮತ್ತು ಸುವ್ಯವಸ್ಥೆ, ನಿರುದ್ಯೋಗ ಮತ್ತು ವಲಸೆಯ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತದೆ.

ಸ್ಪರ್ಧೆ ಹೇಗೆ?

ಈ ಮೊದಲು ಮೊದಲು 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈಗ ನರೇಂದ್ರ ಮೋದಿ ಅಲೆ ಹಾಗೂ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಾಧನೆ ನೆಚ್ಚಕೊಂಡು ಸತತ 3ನೇ ಬಾರಿ ಹ್ಯಾಟ್ರಿಕ್‌ಗೆ ಬಿಜೆಪಿ ಯತ್ನಿಸುತ್ತಿದೆ. ಆದರೆ ಬಿಜೆಪಿ ರಾಜ್ಯದಲ್ಲಿ ಕೇವಲ ತೋರಿಕೆ ಸಾಧನೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಖಾತೆ ಆರಂಭದ ನಿರೀಕ್ಷೆಯಲ್ಲಿದೆ. ಕಾಂಗ್ರೆಸ್‌ ಸತತ 3ನೇ ಬಾರಿಗೆ ಒಂದೇ ಒಂದು ಲೋಕಸಭಾ ಸ್ಥಾನ ಗೆಲ್ಲಲು ವಿಫಲವಾದರೆ ಪಕ್ಷವು ರಾಜ್ಯದಲ್ಲಿ ಅಸ್ತಿತ್ವದ ಪ್ರಶ್ನೆ ಎದುರಿಸಬೇಕಾಗುತ್ತದೆ. ಇದು ಮುಂದಿನ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರಬಹುದು.

ರಾಜ್ಯ: ಉತ್ತರಾಖಂಡ

ಒಟ್ಟು ಸ್ಥಾನ: 5

ಒಟ್ಟು ಹಂತ1

ಚುನಾವಣಾ ದಿನಾಂಕ ಏ.19

ಸ್ಟಾರ್‌ ಕ್ಷೇತ್ರಗಳು

ತೆಹ್ರಿ ಗಢವಾಲ್‌, ಗಢವಾಲ್‌, ಅಲ್ಮೋರಾ, ನೈನಿತಾಲ್‌, ಹರಿದ್ವಾರ

ಸ್ಟಾರ್‌ ಅಭ್ಯರ್ಥಿಗಳು

ತ್ರಿವೇಂದ್ರ ಸಿಂಗ್‌ ರಾವತ್ (ಹರಿದ್ವಾರ- ಬಿಜೆಪಿ), ವೀರೇಂದ್ರ ರಾವತ್‌ (ಹರಿದ್ವಾರ-ಕಾಂಗ್ರೆಸ್‌), ಅಜಯ್‌ ತಮ್ಟಾ (ಅಲ್ಮೋರಾ (ಎಸ್ಸಿ) - ಬಿಜೆಪಿ), ಅನಿಲ್ ಬಲೂನಿ (ಗಢವಾಲ್‌- ಬಿಜೆಪಿ), ಪ್ರಕಾಶ ಜೋಶಿ (ನೈನಿತಾಲ್‌-ಕಾಂಗ್ರೆಸ್‌).

Share this article