- ಲ್ಯಾಂಡಿಂಗ್ ಗೇರ್ ಕೆಳಮುಖವಾಗಿಯೇ ಇತ್ತು
ನವದೆಹಲಿ: ಅಹಮದಾಬಾದ್‌ನಲ್ಲಿ ದುರಂತಕ್ಕೀಡಾದ ಏರ್ ಇಂಡಿಯಾ ಎ1171 ವಿಮಾನ ಟೇಕ್ ಆಫ್ ಅಸಹಜವಾಗಿತ್ತು. ಬಹುಶಃ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಲ್ಯಾಂಡಿಂಗ್ ಗೇರ್ ತೆರೆದೇ ಇತ್ತು, ರೆಕ್ಕೆಯ ವಿಸ್ತರಿಸಬಹುದಾದ ಭಾಗ ಅಥವಾ ಮಡಿಕೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಸರಿಸಲಾಗಿತ್ತು. ಟೇಕ್ ಆಫ್ ವೇಳೆ ಈ ರೀತಿಯ ಸ್ಥಿತಿ ಅಪಾಯಕಾರಿ ಎಂದು ವಾಣಿಜ್ಯ ವಿಮಾನದ ಪೈಲಟ್‌ವೊಬ್ಬರು ವಿಶ್ಲೇಷಣೆ ಮಾಡಿದ್ದಾರೆ.
ವಿಮಾನ ಟೇಕ್ ಆಫ್ ಆದ ದೃಶ್ಯಗಳನ್ನು ಆಧರಿಸಿ ವಾಣಿಜ್ಯ ವೈಲಟ್‌ವೊಬ್ಬರು ಈ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಟೇಕ್ ಆಫ್ ನಂತರದ ವಿಮಾನವೊಂದು ಈ ಸ್ಥಿತಿಯಲ್ಲಿರುವುದು ಅಸಹಜವಾಗಿದೆ ಎಂದು ಅವರು ಹೇಳಿದ್ದಾರೆ.ಟೇಕಾಫ್ ವೇಳೆಗೆ 787 ಡ್ರೀಮ್‌ಲೈನರ್ ವಿಮಾನಗಳ ವಿಂಗ್ ಫ್ಲ್ಯಾಪ್(ರೆಕ್ಕೆಯ ಮಡಿಕೆಗಳು- ವಿಮಾನದ ವೇಗೆ ಹೆಚ್ಚಳ, ತಗ್ಗಿಸಲು ನೆರವಾಗುವ ರೆಕ್ಕೆಡ ಭಾಗ)ಗಳನ್ನು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಗೆ ಸೆಟ್ ಮಾಡಿಟ್ಟಿರಬೇಕು. ನಂತರ ಹಂತ ಹಂತವಾಗಿ ಅದನ್ನು ಹಿಂತೆಗೆದುಕೊಳ್ಳಬೇಕು. ಅದೇ ರೀತಿ ಟೇಕಾಫ್ ಯಶಸ್ವಿಯಾಗಿದೆ ಎಂದು ಖಚಿತವಾದ ಬಳಿಕವಷ್ಟೇ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಮತ್ತು ಸುಮಾರು 600 ಅಡಿ ತಲುಪುವ ಮೊದಲು ಲ್ಯಾಂಡಿಂಗ್ ಗೇರ್ ಅನ್ನು ಮಡಚಲಾಗುತ್ತದೆ.
ಇಷ್ಟಾದರೂ ವಿಮಾನ ಸಂಚಾರದ ವೇಳೆ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ. ಇದು ಪೈಲಟ್‌ಗೆ ವಿಮಾನದ ಮೇಲೆ ಒಂದಷ್ಟು ನಿಯಂತ್ರಣ ಸಾಧಿಸಿದ್ದ ಎಂಬುದನ್ನು ತಿಳಿಸುತ್ತದೆ ಎಂದು ವಾಣಿಜ್ಯ ವಿಮಾನದ ಪೈಲಟ್ ಹೇಳಿದ್ದಾರೆ.