ಮುಂಬೈ: ಕೆಲ ಸಮಯದಿಂದ ಪ್ರೀತಿಯಲ್ಲಿದ್ದ, ಇನ್ನೇನು ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾದ ಬಾಲಿವುಡ್ ಜೋಡಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ನಡುವೆ ಬ್ರೇಕಪ್ ಆಗಿರುವುದು ಸುದ್ದಿಯಾಗಿದೆ. ಸದ್ಯ ಇಬ್ಬರೂ ತಮ್ಮ ವೃತ್ತಿ ಮೇಲೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಪ್ರೀತಿಯಲ್ಲಿ ಬೇರೆಯಾದರೂ ಪರಸ್ಪರರ ಮೇಲೆ ಗೌರವವಿದ್ದು, ಸ್ನೇಹಿತರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. 2023ರಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ ‘ಲಸ್ಟ್ ಸ್ಟೋರೀಸ್-2’ ಸಿನೆಮಾ ಬಿಡುಗಡೆ ಬಳಿಕ ಅವರ ಪ್ರೇಮವಿಚಾರ ಹೊರಬಂದಿತ್ತು.
==ಮದ್ಯ ನಿಷೇಧ ಇರುವ ಗುಜರಾತಲ್ಲಿ ಪ್ರತಿ 4 ಸೆಕೆಂಡಿಗೆ ಬಾಟ್ಲಿ ವಶ
ಅಹಮದಾಬಾದ್: ಮದ್ಯ ನಿಷೇಧವಿರುವ ಗುಜರಾತ್‌ನಲ್ಲಿ ಪ್ರತಿ 4 ಸೆಕೆಂಡಿಗೆ ಒಂದರಂತೆ ಪೊಲೀಸರು 1 ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. 2024ರಲ್ಲಿ ಗುಜರಾತ್‌ನ ಪೊಲೀಸರು ಒಟ್ಟು 144 ಕೋಟಿ ರು. ಮೌಲ್ಯದ 82 ಲಕ್ಷ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್ ನಗರದಲ್ಲಿ ಒಂದೇ ಕಡೆ 3.06 ಲಕ್ಷ ಬಾಟಲಿಗಳು ಮದ್ಯದ ಬಾಟಲಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇನ್ನು ವಡೋದರಾದಲ್ಲಿ 9.8 ಕೋಟಿ ರು., ಸೂರತ್‌ನಲ್ಲಿ 8.9 ಕೋಟಿ ರು., ಗೋಧ್ರಾದಲ್ಲಿ 8.8 ಕೋಟಿ ರು. ಮತ್ತು ನವಸಾರಿಯಲ್ಲಿ 6.3 ಕೋಟಿ ರು. ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
==ಕಾಶ್ಮೀರ, ಮಣಿಪುರ ಸ್ಥಿತಿ: ಯುಎನ್‌ಎಚ್‌ಆರ್‌ಸಿಗೆ ಭಾರತ ತೀಕ್ಷ್ಣ ತಿರುಗೇಟು
ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (ಯುಎನ್‌ಎಚ್‌ಆರ್‌ಸಿ) ಮುಖ್ಯಸ್ಥ ವೋಲ್ಕರ್ ಟರ್ಕ್‌ರ ಸೋಮವಾರದ ಭಾಷಣದಲ್ಲಿ ಮಣಿಪುರ, ಕಾಶ್ಮೀರದ ಸ್ಥಿತಿಯ ಬಗ್ಗೆ ನೀಡಿದ ಹೇಳಿಕೆಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಟರ್ಕ್‌ರ ಹೇಳಿಕೆ ಟೀಕಿಸಿದರುವ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಅರಿಂದಮ್ ಬಗ್ಚಿ, ಟರ್ಕ್ ತಮ್ಮ ಸುತ್ತಲಿನ ಸ್ಥಿತಿಯನ್ನು ಕನ್ನಡಿಯಲ್ಲಿ ಕನ್ನಡಿಯಲ್ಲಿ ನೋಡಿ ಪರಾಮರ್ಶಿಸಿಕೊಳ್ಳಬೇಕು’ ಎಂದು ಅಣಕವಾಡಿದ್ದಾರೆ. ಭಾರತದ ಬಗೆಗಿನ ಟರ್ಕ್ ಹೇಳಿಕೆ ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವಕ್ಕೆ ಸಂಬಂಧಿಸಿದ ಪಕ್ಷಪಾತದ ನಿಲುವು ತೋರುತ್ತದೆ ಎಂದು ಕುಟುಕಿದ್ದಾರೆ. ಇದಕ್ಕೂ ಮುನ್ನ ಜಾಗತಿಕ ವರದಿ ಓದುತ್ತ ಟರ್ಕ್, ಮಣಿಪುರ, ಕಾಶ್ಮೀರದ ಸ್ಥಿತಿ ಸುಧಾರಣೆಗೆ ಹೆಚ್ಚು ಕ್ರಮ ತೆಗೆದುಕೊಳ್ಳುವಂತೆ ಭಾರತಕ್ಕೆ ಹೇಳಿದ್ದರು. ಆದರೆ ಟರ್ಕ್ ಪಾಕಿಸ್ತಾನದ ಬಗ್ಗೆ ಪ್ರಸ್ತಾಪಿಸಲಿಲ್ಲ.
==ಸೆಬಿ ನಿವೃತ್ತ ಮುಖ್ಯಸ್ಥೆ ಮಾಧವಿ ವಿರುದ್ಧ ಕೇಸು ದಾಖಲಿಗೆ 4 ವಾರ ತಡೆ
ಮುಂಬೈ: ಷೇರು ಮಾರುಕಟ್ಟೆ ವಂಚನೆ, ನಿಯಮ ಉಲ್ಲಂಘನೆ ಸಂಬಂಧ ಸೆಬಿ ನಿವೃತ್ತ ಮುಖ್ಯಸ್ಥೆ ಮಾಧವಿ ಬುಚ್ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿಸುವಂತೆ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ 4 ವಾರಗಳ ತಡೆ ನೀಡಿದೆ. ಮಾ.1ರಂದು ವಿಶೇಷ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ವಂಚನೆಯಲ್ಲಿ ಇವರ ಪಾತ್ರ ಏನು ಎಂಬುದನ್ನು ಉಲ್ಲೇಖಿಸಿಲ್ಲ ಎಂದು ಹೈಕೋರ್ಟ್ ಎಫ್‌ಐಆರ್ ದಾಖಲಿಗೆ ತಡೆ ನೀಡಿದೆ. ಮಾಧವಿ ಬುಚ್, ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಸುಂದರರಾಮನ್ ರಾಮಮೂರ್ತಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.
==ವಿಧಾನಸಭೆಯೊಳಗೇ ಗುಟ್ಕಾ ಉಗಿದ ಶಾಸಕ; ಯುಪಿ ಸ್ಪೀಕರ್ ಕೆಂಡಾಮಂಡಲ
ಲಖನೌ: ಉತ್ತರ ಪ್ರದೇಶದ ಶಾಸಕರೊಬ್ಬರು ವಿಧಾನಸಭೆಯಲ್ಲಿಯೇ ಗುಟ್ಕಾ ಜಗಿದಿದ್ದಲ್ಲದೇ, ಸದನದ ಘನತೆಯನ್ನು ಲೆಕ್ಕಿಸದೇ ಅಲ್ಲಿಯೇ ಉಗಿದಿರುವ ಬೇಜವಾಬ್ದಾರಿ ಘಟನೆ ನಡೆದಿದೆ. ಈ ವಿಷಯವನ್ನು ಖುದ್ದು ಅಲ್ಲಿನ ಸ್ಪೀಕರ್ ಅವರೇ ಸದನವನ್ನುದ್ದೇಶಿಸಿ ಮಾತನಾಡುವಾಗ ಬಹಿರಂಗಗೊಳಿಸಿದ್ದಾರೆ. ಮಂಗಳವಾರ ಬಜೆಟ್ ಅಧಿವೇಶನದಲ್ಲಿ ಮಾತಮಾಡಿದ ಅವರು, ‘ಶಾಸಕರೊಬ್ಬರು ಗುಟ್ಕಾವನ್ನು ಸದನದಲ್ಲಿಯೇ ಉಗಿದಿದ್ದಾರೆ. ಇದನ್ನು ನಾನು ನೋಡಿ ಸ್ವಚ್ಛಗೊಳಿಸಿದ್ದೇನೆ. ಯಾವ ಶಾಸಕರು ಉಗಿದಿದ್ದಾರೆ ಎಂಬುದನ್ನು ಸಹ ಸಿಸಿಟೀವಿಯಲ್ಲಿ ನೋಡಿದ್ದೇನೆ. ಆದರೆ ಅವರ ಹೆಸರು ಹೇಳಿದರೆ ಅವಮಾನವಾಗಲಿದೆ ಎಂಬ ಕಾರಣಕ್ಕೆ ನಾನು ಹೆಸರೆತ್ತುವುದಿಲ್ಲ. ಅವರಾಗಿಯೇ ಬಂದು ಒಪ್ಪಿಕೊಂಡರೆ ಒಳ್ಳೆಯದು. ಇಲ್ಲವೆಂದರೆ ನಾನೇ ಕರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.