ಮೇಕೆದಾಟು ಡ್ಯಾಮ್‌ ವಿರುದ್ಧ ತ.ನಾಡು ಸಿಎಂ ವಿಜಯ್‌ ಸೀಟಿ

Published : May 26, 2026, 07:39 AM IST
Mekedatu Dam Row CM Vijay Signals Intensified Legal Fight Against Project Opposition

ಸಾರಾಂಶ

ಅತ್ತ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಚುರುಕು ನೀಡಿರುವ ಹೊತ್ತಿನಲ್ಲೇ, ಇತ್ತ ಯೋಜನೆಯ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಚೆನ್ನೈ: ಅತ್ತ ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಚುರುಕು ನೀಡಿರುವ ಹೊತ್ತಿನಲ್ಲೇ, ಇತ್ತ ಯೋಜನೆಯ ವಿರುದ್ಧ ಕಾನೂನು ಹೋರಾಟ ತೀವ್ರಗೊಳಿಸುವಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಸರ್ಕಾರ ಯಾವುದೇ ಆಕ್ಷೇಪ ಎತ್ತುವಂತಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಡಿಎಂಕೆ ನಾಯಕ ಕೆ.ಎನ್. ನೆಹರು, ‘ಡಿಕೆಶಿ ನೀಡಿರುವ ಹೇಳಿಕೆ ಅವರ ದುರಂಹಕಾರದ ಮನೋಭಾವ ತೋರಿಸುತ್ತದೆ. ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಭಾವಿಸಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಕೂಡ ಸಮ್ಮಿಶ್ರ ಸರ್ಕಾರದ ಭಾಗವಾಗಿರುವುದರಿಂದ ಯಾವುದೇ ವಿರೋಧ ಇರುವುದಿಲ್ಲ ಎಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.

ಅದರ ಬೆನ್ನಲ್ಲೇ ಸೋಮವಾರ ಸಚಿವರು, ಹಿರಿಯ ಅಧಿಕಾರಿಗಳು, ವಕೀಲರ ಜೊತೆಗೆ ಸಭೆ ನಡೆಸಿದ ವಿಜಯ್‌, ಕರ್ನಾಟಕದ ಪ್ರಸ್ತಾವದ ಬಗ್ಗೆ ವಿಸ್ತೃತ ಸಮಾಲೋಚನೆ ಬಳಿಕ ಕಾನೂನು ಹೋರಾಟ ಚುರುಕುಗೊಳಿಸಲು ನಿರ್ದೇಶನ ನೀಡಿದರು.

ವಿರೋಧ ಏಕೆ?:

ಕರ್ನಾಟಕವು ಕುಡಿಯುವ ನೀರಿನ ಉದ್ದೇಶಕ್ಕೆ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಲು ಮುಂದಾಗಿದೆ. ತಮಿಳುನಾಡು ಈ ಯೋಜನೆಗೆ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದು, ಇದರಿಂದ ತನ್ನ ರೈತರಿಗೆ ಸಮಸ್ಯೆಯಾಗಲಿದೆ ಎಂದು ವಾದಿಸುತ್ತಾ ಬಂದಿತ್ತು.

ಮೇಕೆದಾಟು ಯೋಜನೆ ವಿಚಾರದಲ್ಲಿ ಡಿಎಂಕೆ ಕೀಳು ರಾಜಕೀಯ: ಕಾಂಗ್ರೆಸ್‌

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಬೆಂಬಲಿತ ಸರ್ಕಾರವೇ ಇದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ವಿಚಾರವಾಗಿ ಅಹಂಕಾರದ ಹೇಳಿಕೆ ನೀಡುತ್ತಿದ್ದಾರೆಂಬ ಡಿಎಂಕೆ ಆರೋಪಕ್ಕೆ ಕಾಂಗ್ರೆಸ್‌ ಸಂಸದ ಬಿ.ಮಾಣಿಕ್ಯಂ ಠಾಗೋರ್‌ ಕಿಡಿಕಾರಿದ್ದಾರೆ. ಮೇಕೆದಾಟು ವಿಚಾರದಲ್ಲಿ ಡಿಎಂಕೆ ಕೀಳು ರಾಜಕೀಯ ಮಾಡುತ್ತಿದೆ. ನಾವು 20 ದಿನದ ಹಿಂದೆ ಡಿಎಂಕೆ ಜತೆಗೇ ಇದ್ದೆವು. ಆಗ ಯಾವುದೇ ಆರೋಪಗಳಿರಲಿಲ್ಲ. ಇದೀಗ ದಿಢೀರ್‌ ಆಗಿ ಕಾಂಗ್ರೆಸ್‌ ವಿರುದ್ಧ ಟೀಕೆ ಆರಂಭಿಸಿದೆ. ಇದು ಕೀಳುಮಟ್ಟದ ರಾಜಕೀಯ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ನಾಯಕರು ಅವರ ಜನರಿಗಾಗಿ ಹೋರಾಟ ನಡೆಸುತ್ತಿದ್ದಾರೆ, ತಮಿಳುನಾಡು ಕಾಂಗ್ರೆಸ್‌ ಯಾವತ್ತಿಗೂ ರಾಜ್ಯದ ರೈತರ ಪರ ನಿಲ್ಲಲಿದೆ. ಕಾವೇರಿ ಹಕ್ಕು ರಕ್ಷಿಸಲು ಏನೇನು ಮಾಡಬೇಕೋ ಅದನ್ನೆಲ್ಲಾ ನಾವು ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಟಾಪ್‌- ಜಲಯುದ್ಧ

- ಸಚಿವರು, ಹಿರಿಯ ಅಧಿಕಾರಿಗಳು, ವಕೀಲರ ಜತೆ ಸಭೆ

- ಕಾವೇರಿ ನದಿಗೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ಡ್ಯಾಂ ಕಟ್ಟಲು ಕರ್ನಾಟಕ ಯೋಜನೆ

- ಕುಡಿಯುವ ನೀರು ಹಾಗೂ ವಿದ್ಯುತ್‌ ಉತ್ಪಾದನೆಗಾಗಿ ಈ ಅಣೆಕಟ್ಟೆ ನಿರ್ಮಾಣ ಎಂದು ಹೇಳಿಕೆ

- ಈ ಡ್ಯಾಂ ಮೂಲಕ ತನಗೆ ಬರುವ ನೀರಿಗೆ ತಡೆಯೊಡ್ಡಲಾಗುತ್ತದೆ ಎಂದು ತ.ನಾಡು ಆಕ್ಷೇಪ

- ಯೋಜನೆ ಜಾರಿಗೆ ಕರ್ನಾಟಕ ಸರ್ಕಾರ ಪ್ರಯತ್ನ ತೀವ್ರಗೊಳಿಸಿದ್ದಕ್ಕೆ ತ.ನಾಡಿನಲ್ಲಿ ವಿರೋಧ

- ತ.ನಾಡಿನಲ್ಲಿ ಮೈತ್ರಿ ಸರ್ಕಾರವಿದೆ ಎಂದು ಕರ್ನಾಟಕ ಆ ರೀತಿ ಮಾಡುತ್ತಿದೆ ಎಂದು ಡಿಎಂಕೆ ಕಿಡಿ

- ಇದರ ಬೆನ್ನಲ್ಲೇ ಸಚಿವರು, ಅಧಿಕಾರಿಗಳು, ವಕೀಲರ ಸಭೆ ನಡೆಸಿ ಹೋರಾಟಕ್ಕೆ ವಿಜಯ್‌ ಸೂಚನೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮತ್ತೆ ಪೆಟ್ರೋಲ್‌, ಡೀಸೆಲ್‌ ಶಾಕ್‌ - ಬೆಲೆ ಮತ್ತಷ್ಟು ಹೆಚ್ಚಳ
40% ವಕೀಲರು ನಕಲಿ : ಬಾರ್‌ ಕೌನ್ಸಿಲ್‌ ಅಧ್ಯಕ್ಷ