ಲಂಡನ್‌: ಲೇಬರ್ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ಆ್ಯಂಡಿ ಬರ್ನ್‌ಹ್ಯಾಂ (56) ಸೋಮವಾರ ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 2019ರಲ್ಲಿ ಮ್ಯಾಂಚೆಸ್ಟರ್‌ನ ಮೇಯರ್‌ ಆಗಿದ್ದ ಅವಧಿಯಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಇಲ್ಲಿ ವಿವಿಧ ಒಪ್ಪಂದಕ್ಕೆ ಸಹಿಹಾಕುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಸರು. ಇತ್ತೀಚೆಗೆ ಕೀರ್ ಸ್ಟಾರ್ಮರ್ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ಅವರ ಬಳಿಕ ಬರ್ನ್‌ಹ್ಯಾಂ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.

ಹೋರ್ಮುಜ್‌ನಲ್ಲಿ ತೈಲ ಸಾಗಾಟ ಸ್ಥಗಿತ: ತೈಲ ಬೆಲೆ 90 ಡಾಲರ್‌ಗೆ 

ದುಬೈ: ಶತ್ರು ದೇಶದ ದಾಳಿಗೆ ತನ್ನ ಮತ್ತೊಬ್ಬ ಸೈನಿಕನ ಸಾವಿನಿಂದ ಆಕ್ರೋಶಗೊಂಡಿರುವ ಅಮೆರಿಕ, ಸೋಮವಾರ ಇರಾನ್‌ ಮೇಲೆ ಮತ್ತಷ್ಟು ದಾಳಿ ನಡೆಸಿದೆ. ಇರಾನ್‌ನ ಭೂಗತ ಕ್ಷಿಪಣಿ ನೆಲೆ, ಡ್ರೋನ್‌, ಕ್ಷಿಪಣಿ ಉಡ್ಡಯ ಕೇಂದ್ರ, ಇರಾನ್‌ನ ಮಿಲಿಟರಿ ಕಮಾಂಡ್‌ ಸೆಂಟರ್‌, ವಾಯುರಕ್ಷಣಾ ವ್ಯವಸ್ಥೆ, ಕರಾವಳಿ ನಿಗಾ ವ್ಯವಸ್ಥೆ, ಸಂವಹನ ವ್ಯವಸ್ಥೆ ಗುರಿಯಾಗಿಸಿ ಅಮೆರಿಕದ ಸೇನಾ ಪಡೆಗಳು ಭಾರೀ ದಾಳಿ ನಡೆಸಿವೆ.

ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ಸತತ 9ನೇ ದಿನವೂ ಅಮೆರಿಕದ ಮಿತ್ರ ದೇಶಗಳಾದ ಬಹ್ರೈನ್‌, ಕುವೈತ್‌ ಸೇರಿದಂತೆ ಕೊಲ್ಲಿ ದೇಶಗಳಲ್ಲಿನ ಅಮೆರಿಕ ನೌಕಾ ನೆಲೆ ಮೇಲೆ ಇರಾನ್‌ ಪ್ರತಿ ದಾಳಿ ಮಾಡಿದೆ.ಈ ನಡುವೆ ಮತ್ತೆ ಯುದ್ಧ ತೀವ್ರಗೊಂಡ ಪರಿಣಾಮ ಹೋರ್ಮುಜ್‌ನಲ್ಲಿ ಕಚ್ಚಾತೈಲ ಸಾಗಾಟ ಬಹುತೇಕ ಸ್ಥಗಿತಗೊಂಡಿದೆ. ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 90 ಡಾಲರ್‌ಗೆ ತಲುಪಿದೆ. ಇತ್ತೀಚಿಗೆ ಕದನವಿರಾಮ ಘೋಷಣೆ ಬಳಿಕ ತೈಲ ಬೆಲೆ 75 ಡಾಲರ್‌ ಸಮೀಪಕ್ಕೆ ಬಂದಿತ್ತು.


ಆಹಾರ ಹೊತ್ತಿದ್ದ ನೌಕೆ ಮೇಲೆ ರಷ್ಯಾ ದಾಳಿ: 4 ಭಾರತೀಯರ ಸಾವು

ನವದೆಹಲಿ: ಧಾನ್ಯ ಹೊತ್ತು ಉಕ್ರೇನ್‌ನ ಒಡೆಸಾ ಬಂದರಿನಿಂದ ಹೊರಟಿದ್ದ ಹಡಗಿನ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ ಪರಿಣಾಮ 4 ಭಾರತೀಯ ನಾವಿಕರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಈ ದಾಳಿಗೆ ಭಾರತದ ಕಡೆಯಿಂದ ಖಂಡನೆ ವ್ಯಕ್ತವಾಗಿದೆ. 5 ಭಾರತೀಯರು ಸೇರಿದಂತೆ 17 ಸಿಬ್ಬಂದಿಯನ್ನು ಹೊತ್ತು, ಗಿನಿ-ಬಿಸ್ಸೌ ಧ್ವಜ ಹೊಂದಿದ್ದ ''''''''ಎಂವಿ ಗೋಲ್ಡನ್ ಲಿಯೋ'''''''' ಹಡಗು ಉಕ್ರೇನ್‌ ಬಂದರಿನಿಂದ ಹೊರಡುತ್ತಿದ್ದಂತೆ ಅದರ ಮೇಲೆ ದಾಳಿ ಆಗಿದೆ. ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿ ಮೃತರಿಗೆ ಸಂತಾಪ ಸೂಚಿಸಿದ್ದು, ‘ಇದು ಶೋಚನೀಯ ಘಟನೆ. ಉಕ್ರೇನ್‌ನಲ್ಲಿರುವ ಭಾರತದ ದೂತಾವಾಸವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರಿಗೆ ನೆರವಾಗುವುದು’ ಎಂದಿದೆ.

ನಿಮ್ಮ ಆರೋಗ್ಯ ಹೇಗಿದೆ?: ತಮ್ಮ ಫೋಟೋ ವೈರಲ್ ಬೆನ್ನಲ್ಲೇ ಸಲ್ಮಾನ್‌ ಪೋಸ್ಟ್‌

ಮುಂಬೈ: ತಮ್ಮ ಇತ್ತೀಚಿನ ಫೋಟೋ ವೈರಲ್‌ ಆಗಿ, ಅದಕ್ಕೆ ಜಾಲತಾಣದಲ್ಲಿ ಕೀಳು ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸಲ್ಮಾನ್‌ ಖಾನ್‌, ‘ನಿಮ್ಮೆಲ್ಲರ ಆರೋಗ್ಯ ಈಗ ಹೇಗಿದೆ?’ ಎಂದು ಪೋಸ್ಟ್‌ ಹಾಕಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಗುರುತೇ ಸಿಗದಷ್ಟು ನಟ ಬದಲಾಗಿರುವ ವಿಡಿಯೋಗಳು ಭಾನುವಾರ ವೈರಲ್ ಆಗಿತ್ತು. ಇದಕ್ಕೆ ಕೆಲವರು ನಟನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಸಲ್ಮಾನ್‌ಗೆ ವಯಸ್ಸಾಗಿದೆ ಎಂದು ಲೇವಡಿ ಮಾಡಿದ್ದರು. ಇದರ ಬೆನ್ನಲ್ಲೇ ಸಲ್ಮಾನ್‌ ತಮ್ಮ ಕಪ್ಪು ಬಿಳುಪಿನ ಫೋಟೋವೊಂದನ್ನು ಹಂಚಿಕೊಂಡು, ನೆಟ್ಟಿಗರನ್ನು ಈ ರೀತಿ ಪ್ರಶ್ನಿಸಿದ್ದಾರೆ.

ರಾಮಮಂದಿರ ಹುಂಡಿ ಎಣಿಕೆಗೆ ಹೊಸ ತಂಡ: 2 ಪಾಳಿಯಲ್ಲಿ ಕೆಲಸ

ಅಯೋಧ್ಯೆ: ರಾಮ ಮಂದಿರ ದೇಣಿಗೆ ಲೂಟಿ ಬಳಿಕ ಎಚ್ಚೆತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ದೇವಸ್ಥಾನದಲ್ಲಿ ಹುಂಡಿ ಎಣಿಕೆಗೆ ಹೊಸ ತಂಡ ರಚಿಸಿದೆ. ಈ ತಂಡ ಎಸ್‌ಬಿಐ ಮೇಲ್ವಿಚಾರಣೆಯಲ್ಲಿ ಎರಡು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದೆ. ದೇವಸ್ಥಾನ ಮತ್ತು ಬ್ಯಾಂಕ್ ಮೂಲಗಳ ಮಾಹಿತಿ ಪ್ರಕಾರ, ಭಾನುವಾರದಿಂದಲೇ ಪ್ರಕ್ರಿಯೆ ಆರಂಭಗೊಂಡಿದ್ದು ಎರಡು ಪಾಳಿಯಲ್ಲಿ 10-12 ಸಿಬ್ಬಂದಿ ಇರಲಿದ್ದಾರೆ. ಒಂದು ತಂಡ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ ತನಕ, ಮತ್ತೊಂದು ತಂಡ ಮಧ್ಯಾಹ್ನ 2 ರಿಂದ ಸಂಜೆ 8 ತನಕ ಎಣಿಕೆಯಲ್ಲಿ ತೊಡಗಿಕೊಳ್ಳಲಿವೆ. ಶೋಭನಾಥ್ ಮಿಶ್ರಾ ಎನ್ನುವವರುನ್ನು ಟ್ರಸ್ಟ್‌ ಹುಂಡಿ ಎಣಿಕೆಗೆ ಮುಖ್ಯಸ್ಥರನ್ನಾಗಿ ಟ್ರಸ್ಟ್‌ ನೇಮಿಸಿದೆ.