ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ) ಹಾಗೂ ಬ್ರಿಟಿಷ್ ಕೌನ್ಸಿಲ್ ಸಹಯೋಗದಲ್ಲಿ ಆಯೋಜಿಸಿರುವ ಸ್ಕಾಲರ್ಸ್ ಫಾರ್‌ ಔಟ್ ಸ್ಟ್ಯಾಂಡಿಂಗ್ ಅಂಡರ್‌ ಗ್ರ್ಯಾಜುಯೇಟ್ ಟ್ಯಾಲೆಂಟ್ ಮತ್ತು ಕ್ಲೈಮೇಟ್ ರೆಸಿಲೆಯನ್ಸ್ ಸಿಟೀಸ್, ಲೀಡರ್‌ಶಿಪ್ ಹಾಗೂ ಇಕ್ಟಿಟಿ ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ನೋಡಲ್ ಅಧಿಕಾರಿ ಇಂಗ್ಲೆಂಡ್‌ನ ವೋಲ್ವರ್‌ ಹ್ಯಾಂಪ್ಟನ್ ವಿಶ್ವವಿದ್ಯಾಲಯಕ್ಕೆ ಶೈಕ್ಷಣಿಕ ಅಧ್ಯಯನ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜೂನ್ 27ರಿಂದ ಜುಲೈ 11ರವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ ಅವರು ನೋಡಲ್ ಅಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿನಿಯರಾದ ಕಲ್ಪನಾ ರಾಠೋಡ, ಅಶ್ವಿನಿ ಕಾಳೇಕರ, ಐಶ್ವರ್ಯ ಪಾಟೀಲ, ಶಾಹೀನ್‌ ಬಿರಾದಾರ ಹಾಗೂ ಅಕ್ಷತಾ ಕುಲಕರ್ಣಿ ವಿಶ್ವವಿದ್ಯಾಲಯ ಪ್ರತಿನಿಧಿಸಲಿದ್ದಾರೆ.

ಈ ಕಾರ್ಯಕ್ರಮ ಮೂಲಕ ವಿದ್ಯಾರ್ಥಿನಿಯರಿಗೆ ಅಂತಾರಾಷ್ಟ್ರೀಯ ಶೈಕ್ಷಣಿಕ ವಾತಾವರಣ, ನಾಯಕತ್ವ ಕೌಶಲ್ಯ, ಹವಾಮಾನ ಸ್ಥೈರ್ಯ, ನಗರಾಭಿವೃದ್ಧಿ, ಸಮಾನತೆ ಹಾಗೂ ಜಾಗತಿಕ ಸವಾಲುಗಳ ಕುರಿತು ನೇರ ಅನುಭವ ಮತ್ತು ಅರಿವು ಪಡೆಯುವ ಅವಕಾಶ ದೊರೆಯಲಿದೆ. ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂವಾದ, ಅಧ್ಯಯನ ಮತ್ತು ಅನುಭವಗಳ ವಿನಿಮಯದ ಮೂಲಕ ಅವರಲ್ಲಿ ಸಂಶೋಧನಾ ಮನೋಭಾವ, ನವೀನ ಚಿಂತನೆ ಹಾಗೂ ಜಾಗತಿಕ ದೃಷ್ಟಿಕೋನ ವೃದ್ಧಿಯಾಗಲಿದೆ.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಸಂತಸ ವ್ಯಕ್ತಪಡಿಸಿ, ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಇಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಹೊಸ ಸಾಧನೆ ಮಾಡಲಿದ್ದಾರೆ. ಅವರು ಗಳಿಸುವ ಅನುಭವಗಳು ಇತರ ವಿದ್ಯಾರ್ಥಿನಿಯರಿಗೂ ಪ್ರೇರಣೆಯಾಗಲಿವೆ ಎಂದು ತಿಳಿಸಿದ್ದಾರೆ. ಮಹಿಳಾ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಭಾಗಿತ್ವಗಳಿಗೆ ವಿಶ್ವವಿದ್ಯಾಲಯ ವಿಶೇಷ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗತಿಕ ಅವಕಾಶಗಳನ್ನು ವಿದ್ಯಾರ್ಥಿನಿಯರಿಗೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ತಿಳಿಸಿದರು.

ಆಯ್ಕೆಯಾದ ವಿದ್ಯಾರ್ಥಿನಿಯರು ಹಾಗೂ ನೋಡಲ್ ಅಧಿಕಾರಿಗಳನ್ನು ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್‌. ಲಕ್ಕಣ್ಣನವರ, ಹಣಕಾಸು ಅಧಿಕಾರಿ ರಾಮಣ್ಣ ಅಥಣಿ, ಯುಜಿ ಬ್ಲಾಕ್‌ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್‌ ಹೂವಣ್ಣ, ವಿದ್ಯಾರ್ಥಿ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.