ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಹಿಂದೂಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಹಿಂದೂಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಬಸ್ಸಿನ ಚಾಲಕ ಯತ್ನಿಸಿದಾಗ ಬಸ್ ಪ್ರಪಾತಕ್ಕೆ ಉರುಳಿದೆ. ಭಾನುವಾರ ಸಂಜೆ 6.10ರ ಸಮಯದಲ್ಲಿ ಘಟನೆ ನಡೆದಿದೆ.
ಯಾತ್ರಾರ್ಥಿಗಳು ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಣೋದೇವಿಯ ಕ್ಷೇತ್ರವಾದ ಕಟ್ರಾಗೆ ತೆರಳುತ್ತಿದ್ದರು. ಆಗ ರಸ್ತೆಯ ಪಕ್ಕದ ಅರಣ್ಯದಲ್ಲಿ ಅವಿತಿದ್ದ ಉಗ್ರರು, ಜಮ್ಮು ನೋಂದಣಿ ಸಂಖ್ಯೆಯ ಬಸ್ಸಿನ ಗುಂಡಿನ ದಾಳಿ ಮಾಡಿದ್ದಾರೆ. ದಾಳಿಯಿಂದ ಬಚಾವಾಗಲು ಹೋಗಿ ಬಸ್ಸು ಕಂದಕಕ್ಕೆ ಉರುಳಿದೆ. ಡಿಕ್ಕಿಯ ರಭಸಕ್ಕೆ ಬಸ್‌ಗೆ ತೀವ್ರ ಹಾನಿಯಾಗಿದ್ದು, ಅಪಘಾತದ ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಆರಂಭಿಕ ವರದಿಗಳ ಪ್ರಕಾರ ಇಬ್ಬರು ಮುಸುಕುಧಾರಿ ಭಯೋತ್ಪಾದಕರು ಗುಂಡು ಹಾರಿಸಿದರು ಎಂದು ಹೇಳಲಾಗಿದೆ.
ತಕ್ಷಣದ ಸಹಾಯಕ್ಕಾಗಿ ಆಂಬ್ಯುಲೆನ್ಸ್‌ಗಳು ಹಾಗೂ ರಸ್ತೆಯ ಬದಿಯಲ್ಲಿ ನಿಂತಿದ್ದರಿಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣಗೆ ಇಳಿದು, ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು.
ಪೊಲೀಸ್, ಸೇನೆ ಮತ್ತು ಅರೆಸೇನಾ ಪಡೆಗಳು ಸ್ಥಳಕ್ಕೆ ಧಾವಿಸಿ ಉಗ್ರರಿಗೆ ಶೋಧ ಆರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶವು ರಿಯಾಸಿ ಮತ್ತು ರಾಜೌರಿ ಜಿಲ್ಲೆಯ ಗಡಿಯಲ್ಲಿ ಬರುತ್ತಿದ್ದು, ಈ ಹಿಂದೆಯೂ ಅಲ್ಲಿ ಭಯೋತ್ಪಾದಕರ ಚಲನವಲನ ವರದಿಯಾಗಿತ್ತು.