ಹೈದರಾಬಾದ್: ಇತ್ತೀಚೆಗೆ ತೆಲಂಗಾಣದಲ್ಲಿ ಸ್ಥಾಪನೆಯಾದ ಯುವ ಭಾರತೀಯ ಕೌಶಲ್ಯ ವಿವಿ (ವೈಐಎಸ್‌ಯು)ಗೆ ಉದ್ಯಮಿ ಗೌತಮ್ ಅದಾನಿ ಘೋಷಿಸಿದ್ದ 100 ಕೋಟಿ ರು. ದೇಣಿಗೆಯನ್ನು ರಾಜ್ಯ ಸರ್ಕಾರ ಸ್ವೀಕರಿಸುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ಅಮೆರಿಕದಲ್ಲಿ ಅದಾನಿ ವಿರುದ್ಧದ ಸೌರ ವಿದ್ಯುತ್ ಹಗರಣ ತನಿಖೆ ಆರಂಭವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, ‘ದೇಣಿಗೆಯನ್ನು ಸ್ವೀಕರಿಸಿದರೆ ಅದು ರಾಜ್ಯ ಸರ್ಕಾರ ಅಥವಾ ಸಿಎಂ ಪರವಾಗಿ ಕಾಣಿಸಬಹುದು. ಇದು ಅನಗತ್ಯ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
2 ದಿನಕ್ಕೆ ಸೆನ್ಸೆಕ್ಸ್ 2954 ಅಂಕ ಏರಿಕೆ: 14 ಲಕ್ಷ ಕೋಟಿ ಸಂಪತ್ತು ಏರಿಕೆ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರವೂ ಭರ್ಜರಿ 992 ಅಂಕ ಏರಿಕೆ ಕಂಡು 80109 ಅಂಕಗಳಲ್ಲಿ ಮುಕ್ತಾಯವಾಗಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1355 ಅಂಕಗಳವರೆಗೆ ಏರಿತ್ತಾದರೂ ಬಳಿಕ ಅಲ್ಪ ಕುಸಿತ ಕಂಡಿತು. ಕಳೆದ ಶುಕ್ರವಾರ ಕೂಡಾ ಸೆನ್ಸೆಕ್ಸ್ 1961 ಅಂಕ ಏರಿತ್ತು. ಅಂದರೆ 2 ದಿನದಲ್ಲಿ ಸೆನ್ಸೆಕ್ಸ್ ಒಟ್ಟಾರೆ 2954 ಏರಿಕೆ ಕಂಡಂತಾಗಿದ್ದು, ಹೂಡಿಕೆದಾರರ ಸಂಪತ್ತು 14.20 ಲಕ್ಷ ಕೋಟಿ ರು.ನಷ್ಟು ಏರಿದೆ. ಇದೇ ವೇಳೆ ನಿಫ್ಟಿ ಕೂಡಾ ಸೋಮವಾರ 314 ಏರಿ 24221ರಲ್ಲಿ ಅಂತ್ಯವಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ, ಜಾಗತಿಕ ಸೂಚ್ಯಂಕಗಳ ಏರಿಕೆ ಸೆನ್ಸೆಕ್ಸ್ ಏರಿಕೆಗೆ ಕಾರಣವಾಯಿತು.
ಮಕ್ಕಳ ಹಸಿವಿನ ಸಮಸ್ಯೆ ಅರಿತು ದಿಲ್ಲಿ ಶಾಲೆ ಪುನಾರಂಭಕ್ಕೆ ಸಲಹೆ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಹಾಗೂ ಸುತ್ತಲಿನ ವಲಯದಲ್ಲಿ ಕಳಪೆ ವಾಯುಗುಣಮಟ್ಟದ ಕಾರಣ ಮುಚ್ಚಲಾಗಿದ್ದ ಶಾಲಾಕಾಲೇಜುಗಳನ್ನು ಪುನಾರಂಭಿಸುವ ಬಗ್ಗೆ ಚಿಂತನೆ ನಡೆಸುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.ಭೌತಿಕ ತರಗತಿಗಳ ಬದಲು ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದುದರಿಂದ ಅನೇಕ ಮಕ್ಕಳು ಅದಕ್ಕೆ ಪೂರಕವಾದ ಮೂಲಸೌಕರ್ಯ ಹಾಗೂ ಮಧ್ಯಾಹ್ನದ ಬಿಸಿ ಊಟದಿಂದ ವಂಚಿತರಾದುದನ್ನು ಗಮನಿಸಿದ ನ್ಯಾ। ಅಭಯ್ ಓಕಾ, ನ್ಯಾ.ಅಗಾಸ್ಟಿನ್ ಜಾರ್ಜ್ ಪೀಠ, ‘ಬಹುತೇಕ ಮನೆಯಲ್ಲಿ ಗಾಳಿ ಶುದ್ಧೀಕರಿಸುವ ಯಂತ್ರಗಳು ಇರದ ಕಾರಣ ಶಾಲೆಗೆ ಹಾಜರಾಗುವುದರಿಂದ ಯಾವುದೇ ವ್ಯತ್ಯಾಸವಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಅತ್ತ ವಾಯು ಗುಣಮಟ್ಟ ಸುಧಾರಿಸುವ ತನಕ ಪ್ರಸ್ತುತ ಜಾರಿಯಲ್ಲಿರುವ ಗ್ರಾಪ್-4ಅನ್ನು ಸಡಿಲಿಸಿ 3 ಅಥವಾ 2ನೇ ಹಂತಕ್ಕೆ ಇಳಿಸಲು ಕೋರ್ಟ್ ನಿರಾಕರಿಸಿದೆ.ಗ್ರಾಪ್-4 ಜಾರಿಯಿಂದಾಗಿ ದಿನಗೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ನೆರವಾಗಲು ನೌಕರರ ಅದಿಭಾರ ಶುಲ್ಕ(ಸೆಸ್)ವನ್ನು ಬಳಸಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನಿಷ್ಕ್ರಿಯ ಇಪಿಎಫ್ ಖಾತೆಗಳಲ್ಲಿ ₹ 8505 ಕೋಟಿ ಹಣ ಬಾಕಿ: ಕೇಂದ್ರ
ನವದೆಹಲಿ: ಕಳೆದ 6 ವರ್ಷಗಳಲ್ಲಿ ನಿಷ್ಕ್ರಿಯಗೊಂಡಿರುವ ಭವಿಷ್ಯ ನಿಧಿ ಖಾತೆ ಪ್ರಮಾಣ 5 ಪಟ್ಟು ಹೆಚ್ಚಳವಾಗಿದ್ದು, ಅದರಲ್ಲಿ 8,505.23 ಕೋಟಿ ರು.ನಷ್ಟು ಹಣ ಬಾಕಿ ಉಳಿದುಕೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ನೌಕರರ ಭವಿಷ್ಯ ನಿಧಿ ಯೋಜನೆ ನಿಯಮಗಳ ಅನ್ವಯ ಕೆಲ ಖಾತೆಗಳನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗಿದೆ. 2018-19ರಲ್ಲಿ 6,91,774 ನಿಷ್ಕ್ರಿಯ ಖಾತೆಗಳಿದ್ದು, ಅವುಗಳಲ್ಲಿ 1,638.37 ಕೋಟಿ ರು. ಇತ್ತು. 2023-24 ರಲ್ಲಿ ಇಂಥ 21,55,387 ನಿಷ್ಕ್ರಿಯ ಖಾತೆಗಳಲ್ಲಿ 8,505.23 ಕೋಟಿ ರು.ಗೆ ಏರಿಕೆಯಾಗಿದೆ. ಈ ಮೊತ್ತವನ್ನು ಅದರ ಫಲಾನುಭವಿಗಳಿಗೆ ಮರಳಿಸಲಾಗುವುದು. ಎಲ್ಲಾ ನಿಷ್ಕ್ರಿಯ ಖಾತೆಗಳಿಗೆ ಹಕ್ಕುದಾರರಿದ್ದು, ಅವರು ಫಂಡ್ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಪರಿಶೀಲನೆ ನಡೆಸಿ ಆ ಮೊತ್ತವನ್ನು ನೀಡಲಾಗುವುದು. ಈ ಬಗ್ಗೆ ಶೈಕ್ಷಣಿಕ ವಿಡಿಯೋ, ವೆಬಿನಾರ್, ಸಾಮಾಜಿಕ ಜಾಲತಾಣ ಇತ್ಯಾದಿಗಳನ್ನು ಬಳಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಟ್ರಂಪ್ ಅಧ್ಯಕ್ಷರಾಗುತ್ತಲೇ 15000 ತೃತೀಯ ಲಿಂಗಿ ಯೋಧರ ವಜಾ?
ನವದೆಹಲಿ: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡೊಡನೆ, ದೇಶದ ಸೇನೆಯಲ್ಲಿನ 15000 ತೃತೀಯ ಲಿಂಗಿಗಳನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ವರದಿ ಮಾಡಿದೆ.
ಟ್ರಂಪ್ ಅವರು ಶ್ವೇತಭವನಕ್ಕೆ ಬಂದ ಮೊದಲ ದಿನ ಈ ಕುರಿತ ಆದೇಶ ಪ್ರತಿಗೆ ಸಹಿ ಹಾಕಬಹುದು. ಮುಂದಿನ ವರ್ಷ ಜನವರಿ 20ರಂದು ಅವರು ಅಧಿಕಾರ ವಹಿಸಿಕೊಳ್ಳಬಹುದು. ಭವಿಷ್ಯದಲ್ಲಿಯೂ ತೃತೀಯ ಲಿಂಗಿಗಳಿಗೆ ಸೇನೆ ಸೇರ್ಪಡೆಯನ್ನು ಆದೇಶ ನಿಷೇಧಿಸುತ್ತದೆ. ತೃತೀಯ ಲಿಂಗಿಗಳು ವೈದ್ಯಕೀಯವಾಗಿ ಪರಿವರ್ತನೆ ಹೊಂದಿರುತ್ತಾರೆ. ಆದ್ದರಿಂದ ಅವರು ಸೇನೆಯ ಸೇವೆಗೆ ಅನರ್ಹ ಎಂದು ಆದೇಶದಲ್ಲಿ ಹೇಳಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳ ಹೇಳಿಕೆ ಉಲ್ಲೇಖಿಸಿದೆ.ತೃತೀಯ ಲಿಂಗಿ ಪಡೆಗಳ ವಿರುದ್ಧದ ಸಂದೇಶ ಟ್ರಂಪ್‌ಗೆ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಅಸ್ತ್ರವಾಗಿತ್ತು.