ಕಾಂಗ್ರೆಸ್‌ನಲ್ಲಿನ್ನು ಜಿಲ್ಲಾ ಘಟಕಗಳೇ ಪವರ್‌ಫುಲ್‌

KannadaprabhaNewsNetwork | Published : Mar 19, 2025 12:31 AM

ಸಾರಾಂಶ

ತನ್ನ ಜಿಲ್ಲಾ ಘಟಕಗಳನ್ನು ಸಂಘಟನೆಯ ಕೇಂದ್ರ ಬಿಂದುವನ್ನಾಗಿಸಿಕೊಂಡು, ಅವುಗಳಿಗೆ ಪೂರ್ಣ ಬಲ ತುಂಬಲು ಕಾಂಗ್ರೆಸ್‌ ನಿರ್ಧರಿಸಿದೆ.

ನವದೆಹಲಿ: ತನ್ನ ಜಿಲ್ಲಾ ಘಟಕಗಳನ್ನು ಸಂಘಟನೆಯ ಕೇಂದ್ರ ಬಿಂದುವನ್ನಾಗಿಸಿಕೊಂಡು, ಅವುಗಳಿಗೆ ಪೂರ್ಣ ಬಲ ತುಂಬಲು ಕಾಂಗ್ರೆಸ್‌ ನಿರ್ಧರಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಮಂಗಳವಾರ ವಿವಿಧ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳನ್ನು ಭೇಟಿಯಾಗಿ ಸಭೆ ನಡೆಸಿದ ಬೆನ್ನಲ್ಲೆ ಈ ನಿರ್ಧಾರ ಹೊರಬಿದ್ದಿದೆ.

‘ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಮಾ.27, 28 ಮತ್ತು ಏ.3ರಂದು 3 ಬ್ಯಾಚ್‌ಗಳಲ್ಲಿ ದೆಹಲಿಯ ಇಂದಿರಾ ಗಾಂಧಿ ಭವನದಲ್ಲಿ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಘಟಕಗಳನ್ನು ಹೇಗೆ ಬಲಪಡಿಸಬಹುದು ಎಂಬುದರ ಬಗ್ಗೆ ಸ್ವತಃ ಜಿಲ್ಲಾ ಅಧ್ಯಕ್ಷರಿಂದಲೇ ಮಾಹಿತಿ ಪಡೆಯಲಾಗುತ್ತದೆ. ಸಭೆ ಜಿಲ್ಲಾ ಘಟಕಗಳ ಬಲವರ್ಧನೆಯತ್ತ ಕೇಂದ್ರೀಕರಿಸಿರುತ್ತದೆ. ಬೆಳಗಾವಿಯಲ್ಲಿ ನಡೆದ ನವ ಸತ್ಯಾಗ್ರಹ ಸಂಕಲ್ಪದಲ್ಲಿ 2025 ಸಂಘಟನೆಯನ್ನು ಬಲಪಡಿಸುವ ವರ್ಷವಾಗಲಿದೆ ಎಂದು ಹೇಳಿದ್ದೆವು. ಅದಕ್ಕೆ ಅನುಗುಣವಾಗಿಯೇ ಈ ಸಭೆ ನಡೆಯಲಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.

==

ನರೇಗಾದಡಿ 150 ದಿನ ಕೆಲಸ, 400 ರು ವೇತನ: ಸೋನಿಯಾ ಆಗ್ರಹ

ನವದೆಹಲಿ: ನರೇಗಾ ಯೋಜನೆಯಡಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಟ ವೇತನವನ್ನು ದಿನಕ್ಕೆ 400 ರು.ಗೆ ನಿಗದಿಪಡಿಸಬೇಕು. ವರ್ಷದ 100 ದಿನದ ದುಡಿಮೆಯ ಬದಲು 150 ದಿನಕ್ಕೆ ಹೆಚ್ಚಿಸಬೇಕು ಎಂದು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ ‘ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಿಜೆಪಿ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆಧಾರ್ ಸಂಖ್ಯೆ ಆಧಾರಿತ ಪಾವತಿ, ಮೊಬೈಲ್ ಮೂಲಕ ಹಾಜರಾತಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಸರ್ಕಾರ ಈ ಯೋಜನೆ ಉಳಿಸಿಕೊಳ್ಳಲು ಕೆಲಸ ಮಾಡಬೇಕಿದೆ’ ಎಂದರು.

Share this article