;Resize=(412,232))
ನವದೆಹಲಿ : ತ್ರಿಭಾಷಾ ಸೂತ್ರದಡಿಯಲ್ಲಿ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡಿರುವ ಸದ್ಯ 9 ಮತ್ತು 10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಹೊಸ ತ್ರಿಭಾಷಾ ಸೂತ್ರ ಈ ವರ್ಷದಿಂದಲೇ ಅನ್ವಯವಾಗುವುದಿಲ್ಲ ಎಂದು ಸಿಬಿಎಸ್‌ಇ ಸೋಮವಾರ ಸ್ಪಷ್ಟಪಡಿಸಿದೆ. ಹೀಗಾಗಿ ಜು.1ರಿಂದ 2 ಭಾರತೀಯ ಭಾಷೆಗಳ ಅಧ್ಯಯನ ಕಡ್ಡಾಯ ಎಂಬ ಹೊಸ ನೀತಿಯಿಂದ ಆತಂಕಗೊಂಡಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.
ತ್ರಿಭಾಷಾ ಸೂತ್ರದಡಿ, ‘9ನೇ ತರಗತಿ ವಿದ್ಯಾರ್ಥಿಗಳು 2 ಭಾರತೀಯ ಭಾಷೆಗಳನ್ನು ಆಯ್ದುಕೊಳ್ಳುವುದು ಕಡ್ಡಾಯ. ಈ ನಿಯಮ ಜು.1ರಿಂದಲೇ ಜಾರಿಗೆ ಬರಲಿದೆ’ ಎಂದು ಸಿಬಿಎಸ್‌ಇ ಮೇ 15ರಂದು ಆದೇಶಿಸಿತ್ತು. ಇದರಿಂದ ಈಗಾಗಲೇ 2 ವಿದೇಶಿ ಭಾಷೆ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಭಾರಿ ತೊಂದರೆ ಎದುರಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಬೆನ್ನಲ್ಲೇ ಸಿಬಿಎಸ್‌ಇ ಪರಿಷ್ಕೃತ ಆದೇಶ ಹೊರಡಿಸಿದೆ. ‘ಹೊಸ ತ್ರಿಭಾಷಾ ಸೂತ್ರದ ತಕ್ಷಣದ ಜಾರಿಯಿಂದ ಈ ವರ್ಷದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಿದ್ದೇವೆ. ಈಗಾಗಲೇ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡ ವಿದ್ಯಾರ್ಥಿಗಳು 3ನೇ ಭಾಷೆಯಾಗಿ ಒಂದು ಭಾರತೀಯ ಭಾಷೆಯನ್ನು ಆರಿಸಿಕೊಂಡು ಮುಂದುವರಿಯಬಹುದು. ಇವರು ಮುಂದಿನ ವರ್ಷ 10ನೇ ತರಗತಿಗೆ ಹೋದಾಗ ಈ 3ನೇ ಭಾಷೆಗೆ ಸಿಬಿಎಸ್‌ಇ ಪರೀಕ್ಷೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಬದಲಾವಣೆ ಇರುವುದಿಲ್ಲ. ಅವರು ಸದ್ಯ ಅಸ್ತಿತ್ವದಲ್ಲಿರುವ ದ್ವಿಭಾಷಾ ವ್ಯವಸ್ಥೆಯಡಿಯಲ್ಲಿ ಮುಂದುವರಿಯುತ್ತಾರೆ. ಈ ಬ್ಯಾಚ್ ಯಾವುದೇ 3ನೇ ಭಾಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದಿದೆ.
ಇನ್ನು, ‘2026-27ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಮತ್ತು ನಂತರದ ಬ್ಯಾಚ್‌ಗಳಿಗೆ, ಹೊಸ ತ್ರಿಭಾಷಾ ನೀತಿ ಸಂಪೂರ್ಣವಾಗಿ ಅನ್ವಯಿಸುತ್ತದೆ. ಅವರು 3 ಭಾಷೆಗಳನ್ನು ಅಧ್ಯಯನ ಮಾಡುತ್ತಾರೆ, ಅದರಲ್ಲಿ 2 ಕಡ್ಡಾಯವಾಗಿ ಭಾರತೀಯ ಭಾಷೆಗಳಾಗಿರುತ್ತವೆ. ಇವರು 10ನೇ ತರಗತಿಗೆ ಬಂದಾಗ, 3ನೇ ಭಾಷೆಯ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ’ ಎಂದು ತಿಳಿಸಿವೆ.
ಕೆಲ ದಿನಗಳ ಹಿಂದಷ್ಟೇ, ಈಗಾಗಲೇ 2 ವಿದೇಶಿ ಭಾಷೆಗಳನ್ನು ಆಯ್ದುಕೊಂಡ 7ರಿಂದ 9ನೇ ತರಗತಿ ವಿದ್ಯಾರ್ಥಿಗಳು 10ನೇ ತರಗತಿವರೆಗೂ ಅದೇ ವಿಷಯದಲ್ಲಿ ಮುಂದುವರಿಯಬಹುದು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿತ್ತು. ಅದರ ಬೆನ್ನಲ್ಲೇ ಇದನ್ನು ಸದ್ಯದ 10ನೇ ತರಗತಿಗೂ ವಿಸ್ತರಿಸಿದೆ.