ಹೋಮ್ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು

KannadaprabhaNewsNetwork |  
Published : Jun 30, 2026, 04:00 AM IST
Surabhi

ಸಾರಾಂಶ

ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟು ಪ್ರಿಯಕರ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿ ನಡೆದಿದೆ.

 ಚಿಕ್ಕಬಳ್ಳಾಪುರ :  ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟು ಪ್ರಿಯಕರ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿ ನಡೆದಿದೆ.ಮೃತ ಯುವತಿಯನ್ನು ಬೆಂಗಳೂರು ಮೂಲದ ಸಾಯಿ ಸುರಭಿ (23) ಎಂದು ಗುರುತಿಸಲಾಗಿದ್ದು, ಈಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಸೋಮವಾರ ಚೆಕ್-ಔಟ್ ಸಮಯ ಮುಗಿದರೂ ರೂಮ್ ತೆರೆಯದಿದ್ದಾಗ ಹೋಂ ಸ್ಟೇ ಕೇರ್‌ ಟೇಕರ್ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೇರಳದ ಕ್ಯಾಬ್ ಡ್ರೈವರ್ ಕಿರುಕುಳ:

ಮಗಳ ಸಾವಿನ ಬೆನ್ನಲ್ಲೇ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ. ಸಾಯಿ ಸುರಭಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ನೇಹಿತರ ಮೂಲಕ ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಪರಿಚಯವಾಗಿದ್ದ. ಪರಿಚಯ ಬೆಳೆದಂತೆ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಸಂಜೀತ್ ಕಿರುಕುಳ ನೀಡಲು ಆರಂಭಿಸಿದ್ದ. ಇದರಿಂದ ಬೇಸತ್ತು ಆಕೆಗೆ ಬೇರೆ ಕಡೆ ವಿದ್ಯಾಭ್ಯಾಸ ಕೊಡಿಸಿದರೂ, ಆತ ಅಲ್ಲೂ ಹುಡುಕಿಕೊಂಡು ಬಂದು ಕಾಟ ಕೊಡುವುದನ್ನು ಮುಂದುವರಿಸಿದ್ದ. ಅವನು ನನ್ನ ಮಗಳನ್ನು ಸಂಪೂರ್ಣವಾಗಿ ಮರಳು ಮಾಡಿದ್ದ ಅಷ್ಟೇ ಅಲ್ಲದೆ, ಆಕೆಯನ್ನು ಡ್ರಗ್ಸ್ ಅಡಿಕ್ಟ್ ಮಾಡಿದ್ದ ಎಂದು ಆರೋಪಿಸಿದ್ದಾರೆ.

ಸತ್ಸಂಗ ಎಂದು ಹೋದವಳನ್ನು ಹೋಂಸ್ಟೇಗೆ ಕರೆದೊಯ್ದ: ತಾಯಿ 

ನಾನು ಕಷ್ಟಪಟ್ಟು ಎರಡು ಮೂರು ಕಡೆ ಚಿಕಿತ್ಸೆ ಕೊಡಿಸಿ ಮಗಳನ್ನು ಡ್ರಗ್ಸ್ ಚಟದಿಂದ ಗುಣಮುಖಳನ್ನಾಗಿ ಮಾಡಿದ್ದೆ. ಇತ್ತೀಚೆಗೆ ಆಕೆ ತುಂಬಾ ಚೆನ್ನಾಗಿ, ಆರೋಗ್ಯವಾಗಿದ್ದಳು. 6 ತಿಂಗಳ ಹಿಂದೆ ಇವರಿಬ್ಬರ ನಡುವೆ ಜಗಳವಾಗಿ ಇಬ್ಬರು ದೂರ ಸರಿದಿದ್ದರು. ಅಂದಿನಿಂದ ಇಬ್ಬರ ನಡುವೆ ಮಾತುಕತೆ ಇರಲಿಲ್ಲ. ಇತ್ತೀಚೆಗಷ್ಟೇ ಮುದ್ದೇನಹಳ್ಳಿಯ ಸತ್ಯಸಾಯಿ ಆಸ್ಪತ್ರೆಯಲ್ಲಿ ಫಿಜಿಯೋ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಶನಿವಾರದಂದು ಅಲ್ಲಿ ಸತ್ಸಂಗ ಇದೆ, ನಾನು ಅಲ್ಲೇ ಇರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಳು. ಆದರೆ ಸಂಜೀತ್ ಅಲಿ ಪೋನ್ ಮಾಡಿ, ಆಕೆಯನ್ನು ಹುಡುಕಿಕೊಂಡು ಬಂದು ಮರಳು ಮಾಡಿ ಹೋಂ ಸ್ಟೇಗೆ ಕರೆದೊಯ್ದಿದ್ದಾನೆ. ಅವನೇ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಾಯಿ ಗೀತಾ ಆಕ್ರೋಶ ಹೊರಹಾಕಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತಳ ತಾಯಿ ಆಗ್ರಹಿಸಿದ್ದಾರೆ.

ಕೊಲೆಯೋ? ಆತ್ಮಹತ್ಯೆಯೋ?ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮಂಚದ ಮೇಲೆ ಪತ್ತೆಯಾಗಿದ್ದು, ಫ್ಯಾನ್ ಗೆ ನೇಣು ಹಾಕಿದ್ದ ಹಗ್ಗ ಕತ್ತರಿಸಿದ ಸ್ಥಿತಿಯಲ್ಲಿ ಇತ್ತು. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್‌ನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದರ ಬಗ್ಗೆ ನಂದಿಗಿರಧಾಮ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

₹12000 ಸಂಬಳವಿದ್ರೂ ₹25 ಲಕ್ಷದ ಮನೆ ಕಟ್ಟಿಸುತ್ತಿದ್ದ ಆರೋಪಿ!
ಮದುವೆ ಖರ್ಚಿಗೆ ಕೇತನ್‌ ಬಳಿ 1 ಕೋಟಿ ರು.ಪೀಕಿದ್ದ ಸಿಯಾ!