ವಿರೋಧ ನಡುವೆ ಇಂದು ಭಾರತ vs ಪಾಕ್‌ ಕ್ರಿಕೆಟ್‌

KannadaprabhaNewsNetwork |  
Published : Sep 14, 2025, 01:04 AM IST
ಏಷ್ಯಾ ಕಪ್  | Kannada Prabha

ಸಾರಾಂಶ

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಆಡುವ ಬಗ್ಗೆ ಭಾರೀ ಚರ್ಚೆಯಾಗಿತ್ತು.

ದುಬೈ: ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ ಬಳಿಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಆಡುವ ಬಗ್ಗೆ ಭಾರೀ ಚರ್ಚೆಯಾಗಿತ್ತು. ಪಾಕ್‌ ಜೊತೆಗಿನ ಎಲ್ಲಾ ರೀತಿ ಸಂಬಂಧ ಕಡಿದುಕೊಳ್ಳಲು ವ್ಯಾಪಕ ಒತ್ತಾಯ ಕೇಳಿಬಂದಿತ್ತು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಆಡಲು ಭಾರತ ಸಜ್ಜಾಗಿದೆ. ಉಭಯ ತಂಡಗಳು ಈ ಬಾರಿ ಏಷ್ಯಾಕಪ್‌ ಟಿ20 ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಯುಎಇ ದೇಶದ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಅಭಿಮಾನಿಗಳಿಂದ ಈ ಪಂದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ, ಪಂದ್ಯದ ಬಗ್ಗೆ ಕುತೂಹಲ ಕಡಿಮೆಯಾಗಿಲ್ಲ. 2 ತಂಡಗಳಲ್ಲೂ ವಿಶ್ವ ಶ್ರೇಷ್ಠ ಆಟಗಾರರಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ ಟಿ20 ಹಾಗೂ ಏಷ್ಯಾಕಪ್‌ನ ದಾಖಲೆ ಗಮನಿಸಿದರೆ ಭಾರತವೇ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಟೂರ್ನಿಯಲ್ಲಿ ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ. ತಂಡ ‘ಬಿ’ ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಗೆದ್ದಿತ್ತು. ಅತ್ತ ಪಾಕ್‌ ತಂಡ ಒಮಾನ್‌ ವಿರುದ್ಧ ಗೆಲ್ಲುವ ಮೂಲಕ ಟೂರ್ನಿಗೆ ಕಾಲಿರಿಸಿದೆ.

ಸ್ಪಿನ್ನರ್ಸ್‌ vs ಸ್ಪಿನ್ನರ್ಸ್‌:

ಉಭಯ ತಂಡಗಳ ನಡುವೆ ಪಂದ್ಯ ನಡೆದಾಗಲೆಲ್ಲಾ ಭಾರತದ ಬ್ಯಾಟರ್ಸ್‌ ಹಾಗೂ ಪಾಕಿಸ್ತಾನದ ವೇಗಿಗಳ ನಡುವೆ ಪೈಪೋಟಿ ಎದುರಾಗುವುದು ಸಹಜ. ಆದರೆ ಈ ಬಾರಿ ಟ್ರೆಂಡ್‌ ಸ್ವಲ್ಪ ಬದಲಾಗಿದೆ. ತಂಡದಲ್ಲಿರುವ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳು ಹಾಗೂ ಪಿಚ್‌ ಗುಣ ಗಮನಿಸಿದರೆ ಸ್ಪಿನ್ನರ್‌ಗಳ ನಡುವೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಅಕ್ಷರ್‌ ಪಟೇಲ್‌ ಭಾರತದ ಸ್ಪಿನ್‌ ಆಧಾರಸ್ತಂಭವಾಗಿದ್ದು, ಪಾಕ್‌ನಲ್ಲಿ ಅಬ್ರಾರ್‌ ಅಹ್ಮದ್‌, ಸುಫಿಯಾನ್‌ ಮುಖೀಮ್‌, ಮೊಹಮ್ಮದ್‌ ನವಾಜ್‌ರಂತದ ತಾರಾ ಸ್ಪಿನ್ನರ್‌ಗಳಿದ್ದಾರೆ. ಉಳಿದಂತೆ ಬೂಮ್ರಾ ಹಾಗೂ ಶಾಹೀನ್‌ ಅಫ್ರಿದಿ ಉಭಯ ತಂಡಗಳಲ್ಲಿರುವ ತಜ್ಞ ವೇಗಿಗಳು.

ಆದರೆ ಬ್ಯಾಟಿಂಗ್‌ನಲ್ಲಿ ಭಾರತವೇ ಬಲಿಷ್ಠವಾಗಿದೆ. ಶುಭ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್, ತಿಲಕ್‌ ವರ್ಮಾರಂತಹ ಶ್ರೇಷ್ಠ ಬ್ಯಾಟರ್‌ಗಳಿದ್ದಾರೆ. ಪಾಕ್‌ ತಂಡ ಸೈಮ್‌ ಅಯೂಬ್, ಹಸನ್ ನವಾಜ್‌, ಫಖರ್‌ ಜಮಾನ್‌, ಮೊಹಮ್ಮದ್‌ ಹಾರಿಸ್‌ರನ್ನು ಹೆಚ್ಚಾಗಿ ಅವಲಂಬಿಸಿದೆ.-

ಟಿ20 ಮುಖಾಮುಖಿ: 13

ಭಾರತ: 10

ಪಾಕಿಸ್ತಾನ: 03ಸಂಭಾವ್ಯ ಆಟಗಾರರು:

ಭಾರತ: ಅಭಿಷೇಕ್‌, ಗಿಲ್‌, ಸೂರ್ಯಕುಮಾರ್‌(ನಾಯಕ), ತಿಲಕ್‌, ಸ್ಯಾಮ್ಸನ್‌, ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌, ಕುಲ್ದೀಪ್‌, ಬೂಮ್ರಾ, ವರುಣ್‌ ಚಕ್ರವರ್ತಿ.

ಪಾಕಿಸ್ತಾನ: ಸೈಮ್‌, ಫರ್ಹಾನ್‌, ಹಾರಿಸ್‌, ಫಖರ್‌, ಸಲ್ಮಾನ್‌ ಆಘಾ(ನಾಯಕ), ಹಸನ್‌ ನವಾಜ್, ಮೊಹಮ್ಮದ್‌ ನವಾಜ್‌, ಫಹೀಮ್‌, ಶಾಹೀನ್‌, ಸುಫಿಯಾನ್‌, ಅಬ್ರಾರ್.ಪಂದ್ಯ: ರಾತ್ರಿ 8 ಗಂಟೆಗೆ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌ಪಿಚ್ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಬ್ಯಾಟರ್‌ಗಳ ಜೊತೆ ಬೌಲರ್ಸ್‌ಗೂ ನೆರವು ನೀಡಬಲ್ಲದು. ಆದರೆ ರಾತ್ರಿ ವೇಳೆ ಮಂಜು ಬೀಳುವ ಕಾರಣ ಚೇಸಿಂಗ್ ತಂಡಕ್ಕೆ ಉಪಯೋಗವಾಗಲಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.---

ದರ ಹೆಚ್ಚಳ, ಬಹಿಷ್ಕಾರ:

ಖಾಲಿಯಾಗಿಲ್ಲ ಟಿಕೆಟ್‌!

ಭಾರತ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿದ್ದರೂ, ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಾರಾಟಕ್ಕಿಟ್ಟ ಕೆಲ ಗಂಟೆಗಳಲ್ಲೇ ಟಿಕೆಟ್‌ಗಳು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ದುಬೈನಲ್ಲಿ ನಡೆಯುತ್ತಿರುವ ಪಂದ್ಯದ ಟಿಕೆಟ್‌ಗಳು ಇನ್ನೂ ಸಂಪೂರ್ಣವಾಗಿ ಮಾರಾಟವಾಗಿಲ್ಲ. ವೆಬ್‌ಸೈಟ್‌ನಲ್ಲಿ ಈಗಲೂ ಟಿಕೆಟ್‌ ಲಭ್ಯವಿದೆ. ಟಿಕೆಟ್‌ ದರ ಹೆಚ್ಚಳ ಹಾಗೂ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಹಿಷ್ಕಾರ ಹಿನ್ನೆಲೆಯಲ್ಲಿ ಟಿಕೆಟ್‌ಗೆ ಬೇಡಿಕೆ ಕುಸಿದಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ ತಾಣದಲ್ಲಿ

ಬಾಯ್ಕಾಟ್‌ ಅಭಿಯಾನ

ಪಹಲ್ಗಾಂ ಉಗ್ರ ದಾಳಿ ಖಂಡಿಸಿ ಭಾರತದ ಹಲವು ಕ್ರಿಕೆಟ್‌ ಅಭಿಮಾನಿಗಳು ಪಾಕ್‌ ಜೊತೆಗಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಅಭಿಯಾನ ಕೈಗೊಂಡಿದ್ದು, ಪಂದ್ಯ ವೀಕ್ಷಿಸದಂತೆ ಕರೆ ನೀಡುತ್ತಿದ್ದಾರೆ. ಕೆಲ ರಾಜಕೀಯ ಪಕ್ಷಗಳು, ಗಣ್ಯರು ಕೂಡಾ ಭಾರತ-ಪಾಕ್‌ ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ, ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡ ಶನಿವಾರ ಪಂದ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದು, ಭಾರತದ ಧ್ವಜದ ಚಿಹ್ನೆ ಬಳಸಿ ಪಾಕಿಸ್ತಾನದ ಧ್ವಜವನ್ನು ಕಡೆಗಣಿಸಿದೆ. ಅತ್ತ ಪಿಎಸ್‌ಎಲ್‌ನ ಕರಾಚಿ ತಂಡ ಪಾಕ್‌ ನಾಯಕನ ಫೋಟೋ ಹಾಕಿ, ಭಾರತದ ನಾಯಕನ ಫೋಟೋ ಹಾಕುವ ಜಾಗವನ್ನು ಖಾಲಿ ಬಿಟ್ಟಿದೆ.

19 ಬಾರಿ

ಭಾರತ-ಪಾಕಿಸ್ತಾನ ಏಷ್ಯಾಕಪ್‌(ಏಕದಿನ, ಟಿ20 ಸೇರಿ)ನಲ್ಲಿ 19 ಬಾರಿ ಮುಖಾಮುಖಿಯಾಗಿವೆ. 10ರಲ್ಲಿ ಭಾರತ, 6ರಲ್ಲಿ ಪಾಕಿಸ್ತಾನ ಗೆದ್ದಿದೆ. 3 ಪಂದ್ಯ ರದ್ದುಗೊಂಡಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ
ದಿಲ್ಲಿ ಬದಲು ಬೆಂಗಳೂರು ರಾಜಧಾನಿ ಮಾಡಿ : ದಿಲ್ಲಿ ಯುವತಿ ಆಗ್ರಹ