ಅಯೋಧ್ಯೆ: ರಾಮನವಮಿ ನಿಮಿತ್ತ ಭಾನುವಾರ ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮೇಲೆ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು 4 ನಿಮಿಷ ಕಾಲ ಬೆಳಗಿ ‘ಸೂರ್ಯ ತಿಲಕ’ವನ್ನು ಸೃಷ್ಟಿಸಿದವು.
ಕಳೆದ ವರ್ಷ ರಾಮನವಮಿ ವೇಳೆ ಮೊದಲ ಬಾರಿ ಸೂರ್ಯರಶ್ಮಿಯನ್ನು ಸೃಷ್ಟಿಸಲಾಗಿತ್ತು. ಈ ಸಲ 2ನೇ ಬಾರಿ ಪ್ರಯೋಗವು ಯಶಸ್ವಿಗೊಂಡಿತು.
ಉತ್ತಮ ಗುಣಮಟ್ಟದ ಕನ್ನಡಿ ಮತ್ತು ಮಸೂರ ಹೊಂದಿರುವ ಉಪಕರಣ ಬಳಸಿಕೊಂಡು ಸೂರ್ಯನ ಕಿರಣಗಳನ್ನು ರಾಮ ಲಲ್ಲಾ ಹಣೆ ಮೇಲೆ ನಿರ್ದಿಷ್ಟ ಸಮಯದಲ್ಲಿ ನಿಖರವಾಗಿ ನಿರ್ದೇಶಿಸುವ ತಂತ್ರಜ್ಞಾನವನ್ನು ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಆರ್) ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳು ಸೃಷ್ಟಿಸಿದ್ದರು.
ರಾಮ ಜನ್ಮ ತಳೆದ ಸಮಯ ಮಧ್ಯಾಹ್ನ 12 ಗಂಟೆ ಆಗಿದ್ದು, ಆ ಸಮಯಕ್ಕೇ ಸೂರ್ಯ ರಶ್ಮಿಯನ್ನು ಆತನ ಹಣೆ ಮೇಲೆ ಬಿಡಲಾಗುತ್ತದೆ.ಈ ನಡುವೆ, ರಾಮನವಮಿ ನಿಮಿತ್ತ ಅಯೋಧ್ಯೆಯಲ್ಲಿ ಸಂಜೆ 2 ಲಕ್ಷ ದೀಪಗಳನ್ನು ಬೆಳಗಲಾಯಿತು.
ಸೂರ್ಯತಿಲಕದ ವೇಳೆ ರಾಮಸೇತು ಮೇಲೆ ಯಾನ: ಮೋದಿ ಹರ್ಷ
ರಾಮೇಶ್ವರಂ: ಶ್ರೀಲಂಕಾ ಭೇಟಿಯಿಂದ ಭಾನುವಾರ ಮಧ್ಯಾಹ್ನ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ, ‘ಅಯೋಧ್ಯೆ ರಾಮನ ಹಣೆ ಮೇಲೆ ಸೂರ್ಯತಿಲಕ ಬೀಳುವಾಗ ನಾನಿದ್ದ ವಿಮಾನ ರಾಮಸೇತು ಮೇಲೆ ಇತ್ತು.
ಇದು ಸೌಭಾಗ್ಯವೇ ಸರಿ’ ಎಂದು ಹರ್ಷಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ಶ್ರೀಲಂಕಾದಿಂದ ಹಿಂತಿರುಗುವಾಗ ರಾಮಸೇತುವಿನ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿತು. ದೈವಿಕ ಕಾಕತಾಳೀಯ ಎಂಬಂತೆ ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿದ್ದ ಸಮಯದಲ್ಲಿ ಅದು ಸಂಭವಿಸಿತು. ಇಬ್ಬರ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿದೆ. ಪ್ರಭು ಶ್ರೀರಾಮ ನಮ್ಮೆಲ್ಲರಿಗೂ ಒಗ್ಗೂಡಿಸುವ ಶಕ್ತಿ. ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ’ ಎಂದಿದ್ದಾರೆ.