ಸಿಡ್ನಿ: ಮ್ಯಾನ್ಮಾರ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಸೃಷ್ಟಿಯಾದ ಶಕ್ತಿಯು 334 ಪರಮಾಣು ಬಾಂಬ್‌ಗಳು ಸಿಡಿದಾಗ ಉತ್ಪತ್ತಿಯಾಗುವುದಕ್ಕೆ ಸಮನಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಭೂವಿಜ್ಞಾನಿ ಜೆಸ್ ಫೋನಿಕ್ಸ್, ಮ್ಯಾನ್ಮಾರ್‌ನಲ್ಲಿ ದಾಖಲಾದ 7.2 ತೀವ್ರತೆಯ ಭೂಕಂಪವು ಭಾರೀ ಪ್ರಮಾಣದ ಶಕ್ತಿ ಬಿಡುಗಡೆ ಮಾಡಿತ್ತು. ಇದರ ಪರಿಣಾಮ ಮುಂದಿನ ಹಲವು ತಿಂಗಳಕಾಲ ಪಶ್ಚಾತ್ ಕಂಪನಗಳು ಸಂಭವಿಸುತ್ತಲೇ ಇರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.ಜೊತೆಗೆ ಭಾರತದ ಟೆಕ್ಟಾನಿಕ್ ಪ್ಲೇಟ್ ಯುರೇಷಿಯನ್ ತಟ್ಟೆಯೊಂದಿಗೆ ನಿರಂತರ ಡಿಕ್ಕಿಯಾಗುತ್ತಿರುವ ಸಂಭವವಿದ್ದು, ಕೆಲ ತಿಂಗಳುಗಳ ಕಾಲ ಭೂಕಂಪದಂತಹ ಘಟನೆಗಳು ಸಂಭವಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಈ ನಡುವೆ ಭೂಕಂಪದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 2000 ದಾಟಿದೆ. ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕೆಲಸ ಸಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇಲ್ಲಿನ ಸೇನಾ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಹೆಚ್ಚುವರಿ 3,400 ಜನ ಗಾಯಗೊಂಡಿದ್ದು, 300ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ.
ಭೂಕಂಪದ ಕೇಂದ್ರಬಿಂದು ಪತ್ತೆಯಾದ ಮ್ಯಾನ್ಮಾರ್‌ನ 2ನೇ ದೊಡ್ಡ ನಗರವಾದ ಮ್ಯಾಂಡಲೆನಲ್ಲಿ ಶೇ.80 ಕಟ್ಟಡಗಳು ಧರೆಗುರುಳಿವೆ. ಧಾರ್ಮಿಕ ಪರೀಕ್ಷೆ ಬರೆಯುತ್ತಿದ್ದ 270 ಸನ್ಯಾಸಿಗಳ ಪೈಕಿ ಕೇವಲ 70 ಮಂದಿ ಬಚಾವಾಗಿದ್ದು, 50 ಜನ ಸಾವನ್ನಪ್ಪಿದ್ದಾರೆ. ಉಳಿದ 150 ಜನರ ಸುಳಿವಿಲ್ಲ.ಕಾರ್ಯಾಚರಣೆಗೆ ತೊಡಕೇನು?:
ಭೂಕಂಪದಿಂದಾಗಿ ಆಸ್ಪತ್ರೆಗಳಿಗೂ ಹಾನಿಯಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ರಕ್ತ, ಅರವಳಿಕೆ ಸೇರಿದಂತೆ ಅನೇಕ ಔಷಧಿಗಳ ತುರ್ತು ಅಗತ್ಯವಿದೆ. ದೈತ್ಯ ಉಪಕರಣಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಯ ವೇಗ ತಗ್ಗಿದೆ.ಭಾರತದಿಂದ ನೆರವು:
ಭೂಕಂಪ ಸಂತ್ರಸ್ತ ಮ್ಯಾನ್ಮಾರ್‌ಗೆ ಭಾರತ ‘ಆಪರೇಷನ್ ಬ್ರಹ್ಮಾ’ ಅಡಿಯಲ್ಲಿ 80 ಎನ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ವಿವಿಧ ರೀತಿಯ ನೆರವು ನೀಡಿದ್ದ ಭಾರತ ಶನಿವಾರವೂ 118 ಸಿಬ್ಬಂದಿ, ಚಿಕಿತ್ಸೆ ಮತ್ತು ಸಂಪರ್ಕ ಘಟಕಗಳೊಂದಿಗೆ ಹೆಚ್ಚಿನ ನೆರವು ರವಾನಿಸಿದೆ.‘2 ಸಿ-17 ವಿಮಾನಗಳಲ್ಲಿ ಸೇನಾಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಆರೈಕೆ ಸೇವೆ, 60 ಟನ್ ಅಗತ್ಯ ಸಾಮಗ್ರಿಗಳನ್ನು ತಲುಪಿಸಲಾಗಿದೆ. ಜೊತೆಗೆ, 5 ರಕ್ಷಣಾ ವಿಮಾನಗಳು ಮ್ಯಾನ್ಮಾರ್ ತಲುಪಿವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.