ಕುನೋದಲ್ಲಿ 3 ಚೀತಾ ಮರಿ ಜನನ: ದೇಶದಲ್ಲಿ ಒಟ್ಟು ಸಂಖ್ಯೆ 38ಕ್ಕೆ

KannadaprabhaNewsNetwork |  
Published : Feb 19, 2026, 02:00 AM IST
ಚೀತಾ | Kannada Prabha

ಸಾರಾಂಶ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಹೆಸರಿನ ಚೀತಾ, ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಚೀತಾಗಳ ಸಂಖ್ಯೆ 38ಕ್ಕೇರಿಕೆಯಾಗಿದೆ.

ಶಿಯೋಪುರ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಹೆಸರಿನ ಚೀತಾ, ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಚೀತಾಗಳ ಸಂಖ್ಯೆ 38ಕ್ಕೇರಿಕೆಯಾಗಿದೆ.

2022ರಲ್ಲಿ ದಕ್ಷಿಣ ಆಫ್ರಿಕಾದಿಂದ ಗಾಮಿನಿಯನ್ನು ಕೇಂದ್ರ ಸರ್ಕಾರದ ಪ್ರಾಜೆಕ್ಟ್‌ ಚೀತಾ ಯೋಜನೆಯಡಿ ಭಾರತಕ್ಕೆ ಕರೆ ತರಲಾಗಿತ್ತು. ಇನ್ನೂ ಚೀತಾ ಮರಿಗಳ ಜನನದ ಬಗ್ಗೆ ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದರ್‌ ಯಾದವ್‌ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ದಕ್ಷಿಣ ಆಫ್ರಿಕಾದಿಂದ ಚೀತಾಗಳ ಆಗಮನದ ಬಳಿಕ ಕುನೋ ಹೊಸ 3 ಮರಿಗಳನ್ನು ಸ್ವಾಗತಿಸಿದೆ. ಗಾಮಿನಿ ಎರಡನೇ ಬಾರಿ ಮರಿಗಳಿಗೆ ಜನ್ಮ ನೀಡಿದ್ದಾಳೆ. ಈ ಮೂಲಕ ಭಾರತ ನೆಲದಲ್ಲಿ ಜನಿಸಿದ ಚೀತಾಗಳ ಸಂಖ್ಯೆ 27 ಆಗಿದ್ದು, ದೇಶದಲ್ಲಿ ಒಟ್ಟು ಸಂಖ್ಯೆ 38ಕ್ಕೇರಿಕೆಯಾಗಿದೆ’ ಎಂದಿದ್ದಾರೆ.

ನಮೀಬಿಯಾದಿಂದ ಭಾರತಕ್ಕೆ ಸ್ಥಳಾಂತರಗೊಂಡಿದ್ದ ಆಶಾ ಈ ತಿಂಗಳ ಆರಂಭದಲ್ಲಿ 5 ಚೀತಾಗಳಿಗೆ ಜನ್ಮ ನೀಡಿತ್ತು.

==

37 ರಾಜ್ಯಸಭೆ ಸ್ಥಾನಗಳಿಗೆ ಮಾರ್ಚ್‌ 16ಕ್ಕೆ ಚುನಾವಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾ.16ಕ್ಕೆ ಚುನಾವಣಾ ದಿನಾಂಕ ಘೋಷಿಸಿದ್ದು, ಅದೇ ದಿನ ಫಲಿತಾಂಶ ಬೀಳಲಿದೆ.ಆ ಎಲ್ಲಾ ಸ್ಥಾನಗಳ ಅಧಿಕಾರವಧಿ ಏಪ್ರಿಲ್‌ನಲ್ಲಿ ಅಂತ್ಯ ಹಿನ್ನೆಲೆ ಎಲೆಕ್ಷನ್‌ ದಿನಾಂಕ ಘೋಷಣೆಯಾಗಿದೆ. ಇವುಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ(7), ತಮಿಳುನಾಡು (6), ಪಶ್ಚಿಮ ಬಂಗಾಳ (5), ಬಿಹಾರ (5) ಒಡಿಶಾ (4), ಅಸ್ಸಾಂ (3), ತೆಲಂಗಾಣ(2),ಛತ್ತೀಸ್‌ಗಢ (2),ಹರ್ಯಾಣ(2). ಹಿಮಾಚಲ ಪ್ರದೇಶ (1) ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಮಾ.16ರ ಬೆಳಿಗ್ಗೆ 9 ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ.ಶರದ್ ಪವಾರ್ (ಎನ್‌ಸಿಪಿ-ಎಸ್‌ಪಿ), ಅಭಿಷೇಕ್ ಸಿಂಘ್ವಿ (ಕಾಂಗ್ರೆಸ್), ಸಾಕೇತ್ ಗೋಖಲೆ (ಟಿಎಂಸಿ), ರಾಮದಾಸ್ ಅಠಾವಳೆ (ಆರ್‌ಪಿಐ-ಎ), ಎಂ. ತಂಬಿದುರೈ (ಎಐಎಡಿಎಂಕೆ) ಮತ್ತು ತಿರುಚಿ ಶಿವ (ಡಿಎಂಕೆ) ಅವರು ನಿವೃತ್ತರಾಗುತ್ತಿರುವ ಪ್ರಮುಖ ಸಂಸದರು.

==

ಮಲಯಾಳಂ ನಟ ಜಯಸೂರ್ಯರ ₹39 ಲಕ್ಷ ಆಸ್ತಿ ಜಪ್ತಿ

ಸೇವ್‌ ಬಾಕ್ಸ್‌ ಹೂಡಿಕೆ ಆ್ಯಪ್‌ ವಂಚನೆ ಪ್ರಕರಣ

ಕೊಚ್ಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಮಲಯಾಳಂ ನಟ ಜಯಸೂರ್ಯ ಅವರಿಗೆ ಸೇರಿದ 39 ಲಕ್ಷ ರು. ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸ್ವಾತಿ ರಹೀಮ್‌ ಎಂಬುವರು ನಡೆಸುತ್ತಿದ್ದ ‘ಸೇವ್‌ ಬಾಕ್ಸ್‌’ ಎನ್ನುವ ಆನ್‌ಲೈನ್‌ ಬಿಡ್ಡಿಂಗ್‌ ಆ್ಯಪ್‌ ಮೇಲೆ ವಂಚನೆ ಆರೋಪ ಕೇಳಿಬಂದಿತ್ತು. ಇದರಲ್ಲಿ ಹೂಡಿಕೆ ಮಾಡಿದರೆ ದುಬಾರಿ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ಸಿಗುತ್ತದೆ ಎಂದು ಬಿಂಬಿಸಿ ವಂಚಿಸಲಾಗಿತ್ತು. ಈ ಆ್ಯಪ್‌ಗೆ ಜಯಸೂರ್ಯ ರಾಯಭಾರಿಯಾಗಿದ್ದರು ಹಾಗೂ ಸ್ವಾತಿ ಅವರು ಜಯಸೂರ್ಯ ಅವರಿಗೆ ಸ್ವಲ್ಪ ಹಣ ಪಾವತಿಸಿದ್ದರು. ಈ ಸಂಬಂಧ ಜಯಸೂರ್ಯ ಹಾಗೂ ಅವರ ಪತ್ನಿಯನ್ನು ಕಳೆದ ಡಿಸೆಂಬರ್‌ನಲ್ಲಿ ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ಇದರ ಮುಂದುವರೆದ ಭಾಗವಾಗಿ ನಟನಿಗೆ ಸೇರಿದ ಕೇರಳದಲ್ಲಿರುವ 39.01 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಇ.ಡಿ. ಆದೇಶಿಸಿದೆ.

==

ವಿಮಾನಯಾನ ಸಚಿವ ನಾಯ್ಡು ವಜಾಗೆ ರೋಹಿತ್ ಪವಾರ್ ಆಗ್ರಹ

ಅಜಿತ್‌ ಸಾವಿನ ಕೇಸ್‌ ಇತ್ಯರ್ಥವರೆಗೆ ನಾಯ್ಡು ವಜಾ ಮಾಡಿ: ಎನ್‌ಸಿಪಿ ಶಾಸಕ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸುತ್ತಿರುವ ಅಜಿತ್‌ ಸೋದರಳಿಯ ಹಾಗೂ ಎನ್‌ಸಿಪಿ (ಎಸ್ಪಿ) ಶಾಸಕ ರೋಹಿತ್‌ ಪವಾರ್‌, ಪ್ರಕರಣದ ತನಿಖೆ ಮುಗಿಯುವ ತನಕ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್‌ ನಾಯ್ಡು ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಅಜಿತ್‌ ಪವಾರ್‌ ಪ್ರಯಾಣಿಸಿದ್ದ ವಿಎಸ್‌ಆರ್‌ ಕಂಪನಿ ಮಾಲೀಕರಿಗೂ, ನಾಯ್ಡು ಹಾಗೂ ಅವರ ತೆಲುಗು ದೇಶಂ ಪಕ್ಷಕ್ಕೂ ನಂಟಿದೆ ಎನ್ನುವುದು ರೋಹಿತ್‌ ಆರೋಪ.ಈ ಬಗ್ಗೆ ಬುಧವಾರ ಮಾತನಾಡಿದ ಅವರು ‘ವಿಎಸ್‌ಆರ್‌ ಮಾಲೀಕ ವಿ.ಕೆ. ಸಿಂಗ್‌ ಅವರ ಪುತ್ರನ ಮದುವೆಯಲ್ಲಿ ಮಹಾರಾಷ್ಟ್ರದ ಮಾಜಿ ಸಚಿವರು, ಆಂಧ್ರದ ಟಿಡಿಪಿಯ ಸಚಿವರು ಭಾಗವಹಿಸಿದ್ದರು. ಇನ್ನೂ ಪ್ರಾಥಮಿಕ ತನಿಖಾ ವರದಿಯೇ ಬಂದಿಲ್ಲ. ಹೀಗಿದ್ದರೂ ವಿಎಸ್‌ಆರ್‌ ಕಂಪನಿಯನ್ನು ಉಳಿಸಲು ಪ್ರಯತ್ನಗಳು ನಡೆಯುತ್ತಿದೆ. ನೈತಿಕ ಆಧಾರದ ಮೇಲೆ ನಾಯ್ಡು ನಾಗರಿಕ ವಿಮಾನಯಾನ ಸಚಿವರಾಗಿ ಮುಂದುವರೆಯಬಾರದು’ ಎಂದಿದ್ದಾರೆ.

==

ಮಹಾರಾಷ್ಟ್ರ: ಶೇ.5 ಶಿಕ್ಷಣ, ಔದ್ಯೋಗಿಕ ಮುಸ್ಲಿಂ ಮೀಸಲಾತಿ ರದ್ದು

ಎನ್‌ಸಿಪಿ-ಕಾಂಗ್ರೆಸ್‌ ಜಾರಿಗೆ ತಂದಿದ್ದ ಆದೇಶ

ಪಿಟಿಐ ಮುಂಬೈ

ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗ ಅಡಿ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿಯನ್ನು ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾಯುತಿ ಕೂಟದ ಸರ್ಕಾರ ರದ್ದು ಮಾಡಿದೆ. ಧರ್ಮಾಧರಿತ ಮೀಸಲು ವಿರುದ್ಧ ಕೂಗು ಎದ್ದಿರುವ ನಡುವೆಯೇ ಈ ವಿದ್ಯಮಾನ ನಡೆದಿದೆ.ಕಾಂಗ್ರೆಸ್‌ ಮತ್ತು ಎನ್‌ಸಿಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ನೀಡಿ ಸುಗ್ರಿವಾಜ್ಞೆ ಹೊರಡಿಸಿತ್ತು. ಮುಸ್ಲಿಮರನ್ನು ವಿಶೇಷ ಹಿಂದುಳಿದ ವರ್ಗ-ಎ (ಎಸ್‌ಬಿಸಿ-ಎ) ಅಡಿ ಪರಿಗಣಿಸಲಾಗಿತ್ತು. ಆದರೆ ಸುಗ್ರೀವಾಜ್ಞೆಗೆ ನಿಗದಿತ 6 ತಿಂಗಳ ಅವಧಿಯಲ್ಲಿ ಸದನದ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಕಾನೂನಾಗಿ ಜಾರಿಗೆ ಬಂದಿರಲಿಲ್ಲ. ಆದರೂ ಇದು ಸರ್ಕಾರಿ ದಾಖಲೆಗಳಲ್ಲಿ ಸುಗ್ರೀವಾಜ್ಞೆ ಎಂದೇ ಉಳಿದಿತ್ತು.

ಹೀಗಾಗಿ ಕೇವಲ ಔಪಚಾರಿಕ ಉದ್ದೇಶದಿಂದ ಈಗ ದಾಖಲೆಯಲ್ಲಿದ್ದ ಶೇ.5ರಷ್ಟು ಮುಸ್ಲಿಂ ಮೀಸಲನ್ನು ಫಡ್ನವೀಸ್‌ ಸರ್ಕಾರ ರದ್ದು ಮಾಡಿದೆ. ಹೀಗಾಗಿ ಜಾರಿಯಾಗದೇ ಇದ್ದ ಈ ಮೀಸಲು ಪ್ರಸಕ್ತ ಪರಿಸ್ಥಿತಿ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಸರ್ಕಾರ ಹೊರಡಿಸಿರುವ ಹೊಸ ನಿರ್ಣಯ (ಜಿಆರ್) ಪ್ರಕಾರ ಹಿಂದುಳಿದ ವರ್ಗದಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಸರ್ಕಾರಿ, ಅರೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿ ನಿರ್ಧಾರ ರದ್ದುಗೊಂಡಿದೆ. ಜತೆಗೆ ವಿಶೇಷ ಹಿಂದುಳಿದ ವರ್ಗದಡಿ ಮುಸ್ಲಿಮರಿಗೆ ನೀಡುತ್ತಿದ್ದ ಜಾತಿ ಮತ್ತು ಕೆನಪದರವಲ್ಲದ ಪ್ರಮಾಣ ಪತ್ರಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿಗೆ ಮತ್ತೆ ಕಸಬಿಸಿ!
ಎಐ ಜಾಗತಿಕ ಶೃಂಗದಲ್ಲಿ ಗಿನ್ನೆಸ್‌ ದಾಖಲೆ