ಭಾರತ-ಕೊಲ್ಲಿ-ಯೂರೋಪ್‌ ಕಾರಿಡಾರ್‌ಗೆ ಟ್ರಂಪ್‌ ಬೆಂಬಲ

KannadaprabhaNewsNetwork |  
Published : Sep 24, 2026, 03:00 AM IST
Trump

ಸಾರಾಂಶ

ಭಾರತವನ್ನು ಮಧ್ಯಪ್ರಾಚ್ಯ ಮತ್ತು ಯೂರೋಪ್‌ನೊಂದಿಗೆ ಸಂಪರ್ಕಿಸುವ ಪ್ರಸ್ತಾವಿತ ಕಾರಿಡಾರ್‌ ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ವಾಣಿಜ್ಯ ನೌಕೆಗಳ ಮೇಲೆ ಇರಾನ್‌ನ ಉಗ್ರದಾಳಿಗಳನ್ನು ತಡೆಗಟ್ಟಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್‌: ಭಾರತವನ್ನು ಮಧ್ಯಪ್ರಾಚ್ಯ ಮತ್ತು ಯೂರೋಪ್‌ನೊಂದಿಗೆ ಸಂಪರ್ಕಿಸುವ ಪ್ರಸ್ತಾವಿತ ಕಾರಿಡಾರ್‌ ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ವಾಣಿಜ್ಯ ನೌಕೆಗಳ ಮೇಲೆ ಇರಾನ್‌ನ ಉಗ್ರದಾಳಿಗಳನ್ನು ತಡೆಗಟ್ಟಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯೊಂದಿಗಿನ ಬಹುಪಕ್ಷೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್‌, ‘ನೆರೆಯ ದೇಶಗಳ ವಾಣಿಜ್ಯ ನೌಕೆಗಳ ಮೇಲೆ ಇರಾನ್ ನಡೆಸಿದ ಉಗ್ರದಾಳಿಗಳು, ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ ದೂರಕ್ಕೆ ಸ್ಥಳಾಂತರಿಸುವ ಅಗತ್ಯವನ್ನು ಎತ್ತಿ ತೋರಿಸಿವೆ.

ಅದಕ್ಕಾಗಿಯೇ ‘ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್’ ಅಥವಾ ಇನ್ನಾವುದೇ ವಿಧಾನದ ಮೂಲಕ ತೈಲವನ್ನು ಸಾಗಿಸುವುದನ್ನು ನಮ್ಮ ಸರ್ಕಾರ ಬಲವಾಗಿ ಬೆಂಬಲಿಸುತ್ತದೆ’ ಎಂದರು.

ಏನಿದು ಕಾರಿಡಾರ್‌?: 

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಯೋಜನೆಗೆ 2023ರಲ್ಲಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಚಾಲನೆ ನೀಡಲಾಯಿತು. ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟವು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದವು. ಪ್ರಸ್ತಾವಿತ ಕಾರಿಡಾರ್, ಭಾರತವನ್ನು ಕೊಲ್ಲಿಯೊಂದಿಗೆ ಮತ್ತು ಕೊಲ್ಲಿಯನ್ನು ಯುರೋಪಿನೊಂದಿಗೆ ಸಂಪರ್ಕಿಸುವ 2 ಮಾರ್ಗಗಳನ್ನು ಒಳಗೊಂಡಿರುತ್ತದೆ.

ಹೈಡ್ರೋಜನ್ ರಫ್ತಿಗಾಗಿ ಪೈಪ್‌ಲೈನ್‌ ವ್ಯವಸ್ಥೆ

ಇದು ಹಡಗು ಮತ್ತು ರೈಲು ಜಾಲವನ್ನು ಹಾಗೂ ಹೈಡ್ರೋಜನ್ ರಫ್ತಿಗಾಗಿ ಪೈಪ್‌ಲೈನ್‌ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಯೂರೋಪ್‌ ಅನ್ನು ಸಂಪರ್ಕಿಸಿ, ವ್ಯಾಪಾರಿ ಮಾರ್ಗಗಳನ್ನು ಬಲಪಡಿಸುವುದು ಇದರ ಉದ್ದೇಶ. ಈ ಕಾರಿಡಾರ್ ಪೂರ್ಣಗೊಂಡರೆ, ಪ್ರಸ್ತುತ ಇರಾನ್ ಮತ್ತು ಅಮೆರಿಕದ ಜಟಾಪಟಿಗೆ ಕಾರಣವಾಗಿರುವ ಹೋರ್ಮುಜ್‌ ಜಲಸಂಧಿಯ ಅಗತ್ಯವಿಲ್ಲದೇ ಕೊಲ್ಲಿ ಜೊತೆ ಭಾರತಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸೂಪರ್‌ ಎಲ್‌ ನಿನೋ ಪರಿಣಾಮ: ಭಾರತದಲ್ಲಿ15,800 ಸಾವು ಸಂಭವ
ಬೆಂಗಳೂರು ಓಪನ್‌: ಖಲೀನ್ ಜೋಶಿ ಭರ್ಜರಿ ಮುನ್ನಡೆ